ಗುರುವಾರ , ಮಾರ್ಚ್ 23, 2023
22 °C

ಕರ್ನಾಟಕ–ಮಹಾರಾಷ್ಟ್ರ ಸಿಎಂಗಳ ಗಡಿ ಮಾತುಕತೆ ಬಹಿರಂಗವಾಗಲಿ: ಅಜಿತ್‌ ಪವಾರ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂಗಳು ನಡೆಸಿರುವ ಮಾತುಕತೆಯನ್ನು ಬಹಿರಂಗಗೊಳಿಸಬೇಕು ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಶನಿವಾರ ಆಗ್ರಹಿಸಿದ್ದಾರೆ.

ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಪದಚ್ಯುತಿ ಹಾಗೂ ಕರ್ನಾಟಕ ಜತೆಗಿನ ಗಡಿ ವಿವಾದ ಸೇರಿದಂತೆ ಅನೇಕ ವಿಷಯಗಳಲ್ಲಿ ಏಕನಾಥ ಶಿಂದೆ-ದೇವೇಂದ್ರ ಫಡಣವೀಸ್ ಸರ್ಕಾರದ ನಿಲುವು ಖಂಡಿಸಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಶನಿವಾರ ಶಕ್ತಿ ಪ್ರದರ್ಶನ ನಡೆಸಿತು. ಈ ವೇಳೆ ಪವಾರ್‌ ಮಾತನಾಡಿದ್ದಾರೆ.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂಗಳು ಗಡಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಅದನ್ನು ಸಾರ್ವಜನಿಕಗೊಳಿಸಬೇಕು. ರಾಜ್ಯ (ಮಹಾರಾಷ್ಟ್ರ) ಸರ್ಕಾರವು ಗಡಿ ಸಮಸ್ಯೆಗಳ ಕುರಿತು ಪ್ರಸ್ತಾವನೆಗಳನ್ನು ತಂದರೆ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದರು.

‘ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಹಲವು ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ‘ಸಂಯುಕ್ತ ಮಹಾರಾಷ್ಟ್ರ’ದ ಕನಸು ನನಸಾಗಬೇಕಿದೆ. ಮಹಾರಾಷ್ಟ್ರವನ್ನು ಉಳಿಸಬೇಕಿದ್ದರೆ ರಾಜ್ಯಪಾಲರನ್ನು ವಜಾ ಮಾಡಬೇಕು. ಈ ಹಿಂದೆ ಮಹಾರಾಷ್ಟ್ರದ ಹಳ್ಳಿಗಳು ರಾಜ್ಯದಿಂದ ಹೊರಹೋಗುವ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಈಗ ಮಾತ್ರ ಏಕೆ ಹೀಗಾಗುತ್ತಿದೆ’ ಎಂದು ಪ್ರಶ್ನೆ ಮಾಡಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ರಾಜ್ಯ ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ‘ಮಹಾವಿಕಾಸ ಅಘಾಡಿ’ಯು ರಾಜ್ಯದ ಸಮಗ್ರತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ಇಂದಿನ ಪ್ರತಿಭಟನಾ ಮೆರವಣಿಗೆಯು ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

‘ನೆರೆಯ ರಾಜ್ಯ ಕರ್ನಾಟಕವು ಮಹಾರಾಷ್ಟ್ರವನ್ನು ನಿರಂತರವಾಗಿ ಕೆಣಕುತ್ತಿದ್ದರೂ, ಸರ್ಕಾರಿ ನೌಕರರ ವೇತನವನ್ನು ಕರ್ಣಾಟಕ ಬ್ಯಾಂಕ್ ಮೂಲಕ ಪಾವತಿಸುತ್ತಿರುವುದನ್ನು ಪವಾರ್‌ ಪ್ರಶ್ನೆ ಮಾಡಿದರು’ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು