ಬುಧವಾರ, ಸೆಪ್ಟೆಂಬರ್ 22, 2021
29 °C

ದೆಹಲಿ ಬಾಲಕಿ ಸಾವಿನ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್‌ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೈರುತ್ಯ ದೆಹಲಿಯಲ್ಲಿ ನಡೆದ ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಸಂತ್ರಸ್ತೆಯ ಕುಟುಂಬಕ್ಕೆ ₹10 ಲಕ್ಷ ಪರಿಹಾರವನ್ನೂ ಘೋಷಿಸಿದ್ದಾರೆ.

ಇಲ್ಲಿನ ಹಳೆಯ ನಂಗಲ್‌ ಪ್ರದೇಶದಲ್ಲಿರುವ ಮೃತ ಬಾಲಕಿಯ ಕುಟುಂಬದವರನ್ನು ಬುಧವಾರ ಭೇಟಿ ಮಾಡಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟಿರುವ ಬಾಲಕಿ ಮರಳಿ ಬರಲು ಸಾಧ್ಯವಿಲ್ಲ. ಬಾಲಕಿ ಕುಟುಂಬಕ್ಕೆ ಅನ್ಯಾಯವಾಗಿದೆ. ಇದೊಂದು ದುರದೃಷ್ಟಕರ ಸಂಗತಿ. ಕುಟುಂಬಕ್ಕಾಗಿರುವ ಹಾನಿಯನ್ನು ತುಂಬಿಕೊಡಲು ಸಾಧ್ಯವಿಲ್ಲ. ಆದರೆ, ನಮ್ಮ ಸರ್ಕಾರ ಬಾಲಕಿಯ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುತ್ತಿದ್ದು, ಈ ಪ್ರಕರಣದ ತನಿಖೆಗೆ ಆದೇಶಿಸುತ್ತಿದೆ‘ ಎಂದು ಹೇಳಿದರು.

ಕೇಜ್ರಿವಾಲ್ ಅವರು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಲು ಈ ಪ್ರದೇಶಕ್ಕೆ ಭೇಟಿ ನೀಡಿದಾಗ, ಬಾಲಕಿಯ ಪೋಷಕರ ಜತೆಗೆ, ನೂರಾರು ಮಂದಿ ಸ್ಥಳೀಯರು ‘ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು‘ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪೋಷಕರನ್ನು ಭೇಟಿಯಾಗಲು ಬಂದ ಕೇಜ್ರಿವಾಲ್ ಅವರನ್ನು ಸುತ್ತುವರಿದು, ಅವರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ಪ್ರತಿಭಟನಾಕಾರರನ್ನು ಸಮಾಧಾನಿಸಿದ ಕೇಜ್ರಿವಾಲ್, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಸಂಬಂಧ ಸರ್ಕಾರ ಈ ಪ್ರಕರಣದಲ್ಲಿ ವಾದ ಮಾಡಲು ಉನ್ನತ ಮಟ್ಟದ ವಕೀಲರನ್ನು ನೇಮಿಸುತ್ತಿರುವುದಾಗಿ ಭರವಸೆ ನೀಡಿದರು.

ಘಟನೆಯ ಹಿನ್ನೆಲೆ: ನೈರುತ್ಯ ದೆಹಲಿಯ ಹಳೇ ನಂಗಾಲ್‌ ಪ್ರದೇಶದಲ್ಲಿರುವ ಚಿತಾಗಾರದ ಎದುರು ಬಾಡಿಗೆ ಮನೆಯೊಂದರಲ್ಲಿ ಸಂತ್ರಸ್ತ ಬಾಲಕಿ ತನ್ನ ಪೋಷಕ ರೊಂದಿಗೆ ವಾಸವಿದ್ದಳು. ಭಾನುವಾರ ಸಂಜೆ 5 ಗಂಟೆ ವೇಳೆಯಲ್ಲಿ ಈ ಬಾಲಕಿ, ‘ನಾನು ಚಿತಾಗಾರದ ಕೂಲರ್‌ನಿಂದ ನೀರು ತರಲು ಹೋಗುತ್ತಿದ್ದೇನೆ‘ ಎಂದು ತನ್ನ ತಾಯಿಗೆ ತಿಳಿಸಿ ಹೋಗಿದ್ದಳು ಎಂದು ಪೋಷಕರು ತಿಳಿಸಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ಚಿತಾಗಾರದ ಪೂಜಾರಿ ರಾಧೆ ಶ್ಯಾಮ್‌  ಮತ್ತು ಒಂದಿಬ್ಬರು (ಬಾಲಕಿಯ ತಾಯಿಗೆ ಪರಿಚಯತರು), ಬಾಲಕಿಯ ತಾಯಿಯನ್ನು ಕರೆದು, ‘ನೋಡಿ, ನಿಮ್ಮ ಮಗಳು ಕೂಲರ್‌ನಲ್ಲಿ ನೀರು ತುಂಬಿಕೊಳ್ಳುವಾಗ ವಿದ್ಯುತ್‌ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ. ಆಕೆಯ ಮೃತದೇಹ ಇಲ್ಲಿದೆ‘ ಎಂದು ಹೇಳಿ ಬಾಲಕಿಯ ಶವ ತೋರಿಸಿದರು.

ನಂತರ ಪೂಜಾರಿ ಮತ್ತು ಇತರರು, ‘ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಪ್ರಕರಣ ದಾಖಲಿಸುತ್ತಾರೆ. ನಂತರ ಮರಣೋತ್ತರ ಪರೀಕ್ಷೆಯ ವೇಳೆ ವೈದ್ಯರು ಬಾಲಕಿಯ ಅಂಗಗಳನ್ನು ಕದಿಯುತ್ತಾರೆ. ಆದ್ದರಿಂದ, ಈ ಶವವನ್ನು ಸುಡುವುದೇ ಉತ್ತಮ‘ ಎಂದು ಹೇಳಿ, ಶವವನ್ನು ಮರಣೋತ್ತರ ಪರೀಕ್ಷೆ ಮಾಡದಂತೆ ತಡೆದರು ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತಾಗಾರದ ಪೂಜಾರಿ ಮತ್ತು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕೊಲೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಮಹಿಳಾ ಆಯೋಗವು ಈ ಕುರಿತು ತನಿಖೆ ಆರಂಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು