ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Elections: ಚುನಾವಣಾ ರಂಗಕ್ಕಿಳಿದ ಸಿಎಸ್‌ಆರ್‌ ವೇದಿಕೆ

ಕೇರಳ: ನಾಲ್ಕು ಪಂಚಾಯಿತಿಗಳಲ್ಲಿ ಗೆದ್ದಿರುವ ಟ್ವೆಂಟಿ–20: ವಿಧಾನಸಭೆ ಹಣಾಹಣಿಯಲ್ಲಿ ಅದೃಷ್ಟ ಪರೀಕ್ಷೆಗೆ ನಿರ್ಧಾರ: ಹಲವು ಗಣ್ಯರ ಬೆಂಬಲ
Last Updated 9 ಮಾರ್ಚ್ 2021, 20:11 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾಲ್ಕು ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದ ‘ಟ್ವೆಂಟಿ–20’ ಎಂಬ ವೇದಿಕೆಯು ವಿಧಾನಸಭೆ ಚುನಾವಣೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಎರ್ನಾಕುಲಂ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

ಕಿಟೆಕ್ಸ್‌ ಗಾರ್ಮೆಂಟ್ಸ್‌ನ ಉದ್ಯಮ ಸಾಮಾಜಿಕ ಜವಾಬ್ದಾರಿಯ (ಸಿಎಸ್‌ಆರ್‌) ಭಾಗವಾಗಿ ಈ ವೇದಿಕೆ ರೂಪುಗೊಂಡಿದೆ. ಉದ್ಯಮ ಸಂಸ್ಥೆಯ ನಿಯಂತ್ರಣದಲ್ಲಿರುವ ವೇದಿಕೆಯು ಪಂಚಾಯಿತಿಯ ಅಧಿಕಾರಕ್ಕೆ ಏರುವುದು ಸರಿಯೇ ಎಂಬ ಚರ್ಚೆ ಆಗ ನಡೆದಿತ್ತು. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ವೈಫಲ್ಯವೇ ಟ್ವೆಂಟಿ–20 ವೇದಿಕೆಯ ಚುನಾವಣಾ ಗೆಲುವಿಗೆ ಕಾರಣ ಎಂದು ಕಿಟೆಕ್ಸ್‌ ಗಾರ್ಮೆಂಟ್ಸ್‌ನ ಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ.

ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಬೆಂಬಲ ಸೂಚಿಸಿರುವುದರಿಂದ ಈ ವೇದಿಕೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ. ವಿ–ಗಾರ್ಡ್‌ ಇಂಡಸ್ಟ್ರೀಸ್‌ನ ಸ್ಥಾಪಕ, ಸಮಾಜ ಸೇವಕ ಕೊಚ್ಚೌಸೇಫ್‌ಚಿಟ್ಟಿಲಪಿಳ್ಳಿ, ನಟ ಮತ್ತು ನಿರ್ದೇಶಕ ಶ್ರೀನಿವಾಸನ್‌, ಸಿನಿಮಾ ನಿರ್ದೇಶಕ ಸಿದ್ದಿಕ್‌ ಮುಂತಾದವರು ‘ಟ್ವೆಂಟಿ–20’ಗೆ ಬೆಂಬಲ ಸೂಚಿಸಿದವರಲ್ಲಿ ಸೇರಿದ್ದಾರೆ.

‘ವೇದಿಕೆಯು 2015ರಲ್ಲಿ ಸ್ಥಾಪನೆಗೊಂಡಿತು. ಕೊಚ್ಚಿ ನಗರದಿಂದ 20 ಕಿ.ಮೀ. ದೂರದಲ್ಲಿರುವ ಕಿಜಕ್ಕಂಬಲಂ ಪಂಚಾಯಿತಿಯಲ್ಲಿ ಸ್ಪರ್ಧಿಸಿ ಗೆದ್ದಿತು. ಕಿಟೆಕ್ಸ್‌ ಗಾರ್ಮೆಂಟ್ಸ್‌ನ ಕೇಂದ್ರ ಕಚೇರಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇದೆ. ಸಿಎಸ್‌ಆರ್‌ ನಿಧಿ ಮತ್ತು ಇತರ ನಿಧಿಗಳನ್ನು ಬಳಸಿಕೊಂಡು ಪಂಚಾಯಿತಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಪಂಚಾಯಿತಿ ಆಡಳಿತದಲ್ಲಿ ಹೆಚ್ಚು ದಕ್ಷತೆ ತರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ ಅನುದಾನ ಬಳಕೆಯಲ್ಲಿ ಭ್ರಷ್ಟಾಚಾರ ನುಸುಳದಂತೆ ನೋಡಿಕೊಳ್ಳಲಾಗಿದೆ. ಪಾರದರ್ಶಕತೆ ತರಲಾಗಿದೆ. ಜನರ ಅಗತ್ಯಗಳ ಅಧ್ಯಯನ ನಡೆಸಿ ಕೆಲಸಗಳನ್ನು ಮಾಡಲಾಗಿದೆ’ ಎಂದು ಕೊಚ್ಚೌಸೇಫ್‌ಚಿಟ್ಟಿಲಪಿಳ್ಳಿ ಹೇಳುತ್ತಾರೆ.

ಈ ಬಾರಿಯ ಚುನಾವಣೆಯಲ್ಲಿ ಹತ್ತಿರದ ಮೂರು ಪಂಚಾಯಿತಿಗಳಲ್ಲಿಯೂ ವೇದಿಕೆಯು ಗೆಲುವು ಸಾಧಿಸಿದೆ. ಕಿಜಕ್ಕಂಬಲಂ ಪಂಚಾಯಿತಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಮೆಚ್ಚಿದ ಕಾರಣಕ್ಕಾಗಿಯೇ ಈ ಬಾರಿ ಇನ್ನೂ ಮೂರು ಪಂಚಾಯಿತಿಗಳಲ್ಲಿ ವೇದಿಕೆಗೆ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಅವರು ವಿಶ್ಲೇಷಿಸುತ್ತಾರೆ. ಈ ಗೆಲುವೇ ಈಗ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಉಮೇದು ತುಂಬಿದೆ.

‘ಉದ್ಯಮ ಸಂಸ್ಥೆಯ ನಿಯಂತ್ರಣದಲ್ಲಿರುವ ಟ್ವೆಂಟಿ–20ಯಂತಹ ವೇದಿಕೆಗೆ ಜನರ ಹಿತಾಸಕ್ತಿಗಿಂತ ಸ್ಥಾಪಿತ ಹಿತಾಸಕ್ತಿಯೇ ಹೆಚ್ಚಾಗಿರುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿಯೇ ಅವರು ಜನ ಬೆಂಬಲ ಪಡೆದಿದ್ದಾರೆ. ಕೈಗಾರಿಕಾ ಘಟಕಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿರುವ ಪಂಚಾಯಿತಿಯ ನಿಯಂತ್ರಣ ಕೈಗೆ ಬರುವುದರಿಂದ ಹೀಗೆ ನೀಡಿದ ಹಣ ಕಂಪೆನಿಗೆ ನಷ್ಟವಾಗದು. ಹಲವು ಕಂಪೆನಿಗಳು ಉಂಟುಮಾಡುತ್ತಿರುವ ಮಾಲಿನ್ಯದ ವಿಚಾರವನ್ನು ಕಿಜಕ್ಕಂಬಲಂ ಪಂಚಾಯಿತಿಯಲ್ಲಿ ಮುಚ್ಚಿಡಲಾಗಿದೆ ಎಂಬ ಆರೋಪವೂ ಇದೆ’ ಎಂದು ಕಮ್ಯುನಿಸ್ಟ್‌ ಚಿಂತಕ ಕೆ.ವೇಣು ಹೇಳುತ್ತಾರೆ.

ಆದರೆ, ಕೊಚ್ಚೌಸೇಫ್‌ಚಿಟ್ಟಿಲಪಿಳ್ಳಿ ಇದನ್ನು ಒಪ್ಪುವುದಿಲ್ಲ. ವೇದಿಕೆಯ ನೇತೃತ್ವ ವಹಿಸಿದ ವ್ಯಕ್ತಿಯು ಉದ್ಯಮಿ ಆಗಿದ್ದರೆ ಅದು ತಪ್ಪು ಎಂದು ಹೇಳುವುದು ಹೇಗೆ ಎಂದು ಅವರು ಪ್ರಶ್ನಿಸುತ್ತಾರೆ. ರಾಜಕೀಯ ಪಕ್ಷಗಳ ಹಲವು ಮುಖಂಡರು ರಾಜಕೀಯಕ್ಕೆ ಬಂದ ಬಳಿಕ ಬೇನಾಮಿಯಾಗಿ ಉದ್ಯಮಗಳನ್ನು ಆರಂಭಿಸಿದ ಉದಾಹರಣೆ ಇದೆ ಎಂದೂ ಅವರು ಹೇಳಿದ್ದಾರೆ.

ಈ ವೇದಿಕೆಯ ಜನಪ್ರಿಯತೆಯು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ರಾಜಕೀಯ ಪಕ್ಷಗಳ ಹಲವು ಮುಖಂಡರು ಬಹಿರಂಗವಾಗಿ ಮತ್ತು ಗುಟ್ಟಾಗಿ ವೇದಿಕೆಯ ನಾಯಕರ ಜತೆಗೆ ಮಾತುಕತೆ ನಡೆಸಿದ್ದಾರೆ.

ಅಸ್ಸಾಂನ ಸಮಗುರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕೀಬುಲ್‌ ಹುಸೇನ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸುವ ಮುನ್ನ ಮೆರವಣಿಗೆ ನಡೆಸಿದರು. ಪಕ್ಷದ ಮುಖಂಡ ಗೌರವ್‌ ಗೊಗೊಯಿ ಜತೆಗಿದ್ದರು ಪಿಟಿಐ ಚಿತ್ರ
ಅಸ್ಸಾಂನ ಸಮಗುರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕೀಬುಲ್‌ ಹುಸೇನ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸುವ ಮುನ್ನ ಮೆರವಣಿಗೆ ನಡೆಸಿದರು. ಪಕ್ಷದ ಮುಖಂಡ ಗೌರವ್‌ ಗೊಗೊಯಿ ಜತೆಗಿದ್ದರು ಪಿಟಿಐ ಚಿತ್ರ

ಮಮ್ಮುಟ್ಟಿಗೆ ಚುನಾವಣಾ ರಾಜಕಾರಣದಲ್ಲಿ ಆಸಕ್ತಿ ಇಲ್ಲ
ತಮ್ಮದೇ ರಾಜ್ಯ ಮತ್ತು ನೆರೆಯ ರಾಜ್ಯಗಳ ಸಿನಿಮಾ ತಾರೆಯರು ರಾಜಕಾರಣ ಪ್ರವೇಶಿಸಿದ್ದರೂ ಮಲಯಾಳದ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಅವರಿಗೆ ಮಾತ್ರ ಚುನಾವಣಾ ರಾಜಕಾರಣದಲ್ಲಿ ಆಸಕ್ತಿ ಇಲ್ಲ.

ತಮ್ಮ ಹೊಸ ಸಿನಿಮಾ ‘ದಿ ಪ್ರೀಸ್ಟ್‌’ ಬಿಡುಗಡೆಗೆ ಸಂಬಂಧಿಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಗೊತ್ತಿರುವ ರಾಜಕಾರಣವೆಂದರೆ ನಟನೆ ಮಾತ್ರ. ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.ಚುನಾವಣೆಗೆ ಸ್ಪರ್ಧಿಸುವಂತೆ ಯಾವುದೇ ಪಕ್ಷ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಈ ಬಾರಿ ಅವರು ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇತ್ತು.

ಸಿಪಿಎಂ ಜತೆಗೆ ಮಮ್ಮುಟ್ಟಿ ಅವರು ನಿಕಟ ಸಂಬಂಧ ಹೊಂದಿದ್ದಾರೆ. ಪಕ್ಷದ ಬೆಂಬಲದ ಕೈರಳಿ ಟಿ.ವಿ. ವಾಹಿನಿಯ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಕೇರಳ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಂಗಳೂರು (ಪಿಟಿಐ):
ಏಪ್ರಿಲ್‌ 6ರಂದು ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್‌ ಮಂಗಳವಾರ ಪ್ರಕಟಿಸಿದೆ.

ಪಕ್ಷದ ಕೇರಳ ಘಟಕದ ಅಧ್ಯಕ್ಷ ಮ್ಯಾಥ್ಯು ಟಿ. ಥಾಮಸ್‌ ಅವರು ತಿರುವಲ್ಲ ಕ್ಷೇತ್ರದಿಂದ, ಡಾ. ನೀಲಲೋಹಿತದಾಸ ನಾಡಾರ್‌ ಅವರು ಕೋವಳಂನಿಂದ, ಕೆ. ಕೃಷ್ಣನ್‌ ಕುಟ್ಟಿ ಚಿತ್ತೂರ್‌ ಕ್ಷೇತ್ರದಿಂದ ಹಾಗೂ ಜೋಸ್‌ ತೇಟ್ಟಯಿಲ್‌ ಅವರು ಅಂಗಮಾಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಈ ಸ್ಪರ್ಧಿಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಯ ಭಾಗವಾಗಿರುವ ಜೆಡಿಎಸ್‌, 2016ರಲ್ಲಿ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮೂರರಲ್ಲಿ ಗೆಲುವು ಸಾಧಿಸಿತ್ತು.

154 ಕ್ಷೇತ್ರಗಳಲ್ಲಿ ಕಮಲ್‌ ಪಕ್ಷ ಸ್ಪರ್ಧೆ
ಚೆನ್ನೈ ವರದಿ:
ನಟ ಮತ್ತು ರಾಜಕಾರಣಿ ಕಮಲಹಾಸನ್‌ ನೇತೃತ್ವದ ಮಕ್ಕಳ್‌ ನೀಧಿ ಮಯ್ಯಂ (ಎಂಎನ್ಎಂ) ಪಕ್ಷವು ತಮಿಳುನಾಡು ವಿಧಾನಸಭೆಯ 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ನಟ ಮತ್ತು ರಾಜಕಾರಣಿ ಶರತ್‌ಕುಮಾರ್‌ ನೇತೃತ್ವದ ಆಲ್‌ ಇಂಡಿಯಾ ಸಮತ್ವ ಮಕ್ಕಲ್‌ ಕಚ್ಚಿ (ಎಐಎಸ್‌ಎಂಕೆ) ಮತ್ತು ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ) ಜತೆಗೆ ಎಂಎನ್‌ಎಂ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದೆ. ಈ ಎರಡೂ ಪಕ್ಷಗಳು ತಲಾ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಕಮಲಹಾಸನ್‌ ಅವರು 2018ರಲ್ಲಿ ಎಂಎನ್‌ಎಂ ಸ್ಥಾಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಕ್ಕೆ ಶೇ 3.77ರಷ್ಟು ಮತ ಸಿಕ್ಕಿದೆ. ಎಸ್‌ಆರ್‌ಎಂ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಟಿ.ಆರ್‌. ಪಾರಿವೇಂದರ್‌ ಅವರು ಐಜೆಕೆಯ ಮುಖ್ಯಸ್ಥ. ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. 2014ರ ಚುನಾವಣೆಯಲ್ಲಿ ಐಜೆಕೆ, ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ಡಿಎಂಕೆಯಿಂದ ರಾಜ್ಯಸಭಾ ಸದಸ್ಯರಾಗಿದ್ದ ಶರತ್‌ಕುಮಾರ್‌, ಬಳಿಕ ಎಐಎಡಿಎಂಕೆ ಸೇರಿದ್ದರು. ನಂತರ ಅದನ್ನೂ ಬಿಟ್ಟು ಸ್ವಂತ ಪಕ್ಷ ಸ್ಥಾಪಿಸಿದ್ದಾರೆ.

ಮೈತ್ರಿಯಿಂದ ಹೊರನಡೆದ ಡಿಎಂಡಿಕೆ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೇಳಿದಷ್ಟು ಸಂಖ್ಯೆಯ ಕ್ಷೇತ್ರಗಳು ಮತ್ತು ಕೇಳಿದ ಕ್ಷೇತ್ರಗಳು ಸಿಕ್ಕಿಲ್ಲ ಎಂಬ ಕಾರಣಕ್ಕೆ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಡಿಎಂಡಿಕೆ ಹೊರನಡೆದಿದೆ. ನಟ ಮತ್ತು ರಾಜಕಾರಣಿ ವಿಜಯಕಾಂತ್‌ ಅವರ ನೇತೃತ್ವದ ಪಕ್ಷವು ಎಐಎಡಿಎಂಕೆ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಕ್ಷೇತ್ರಗಳ ವಿಚಾರದಲ್ಲಿ ಸಹಮತಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಮೈತ್ರಿಕೂಟದಲ್ಲಿ ಪಿಎಂಕೆ ಮತ್ತು ಬಿಜೆಪಿ ಕೂಡ ಇವೆ. ಪಿಎಂಕೆಗೆ 23 ಮತ್ತು ಬಿಜೆಪಿಗೆ 20 ಕ್ಷೇತ್ರಗಳನ್ನು ನೀಡಲಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 234 ಸ್ಥಾನಗಳಿವೆ.

ಪುದುಚೇರಿ: ಎಐಎನ್‌ಆರ್‌ಸಿ–ಬಿಜೆಪಿ– ಎಐಎಡಿಎಂಕೆ ಮೈತ್ರಿ ಅಂತಿಮ
ಪುದುಚೇರಿ ವರದಿ:
ಹಲವು ದಿನಗಳ ಅನಿಶ್ಚಿತತೆಯ ಬಳಿಕ, ಪುದುಚೇರಿ ವಿಧಾನಸಭೆ ಚುನಾವಣೆಗೆ ಎಐಎನ್‌ಆರ್‌ಸಿ, ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಅಂತಿಮವಾಗಿದೆ. ಮಾಜಿ ಮುಖ್ಯಮಂತ್ರಿ ಎನ್‌. ರಂಗಸ್ವಾಮಿ ನೇತೃತ್ವದ ಎಐಎನ್‌ಆರ್‌ಸಿ 16 ಕ್ಷೇತ್ರಗಳಲ್ಲಿ ಮತ್ತು ಉಳಿದೆರಡು ಪಕ್ಷಗಳು 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಚುನಾವಣೆಯ ಬಳಿಕ ನಿರ್ಧರಿಸಲಾಗುವುದು ಎಂದು ಬಿಜೆಪಿ ಹೇಳಿದೆ.

ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ರಂಗಸ್ವಾಮಿ ಅವರಿಗೆ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿದೆ. ಹಾಗೆಯೇ, ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದು, ಬಳಿಕ ಬಿಜೆಪಿ ಸೇರಿದ ಎ. ನಮಃಶಿವಾಯ ಅವರೂ ಈ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಜೈಶ್ರೀರಾಂ ಘೋಷಣೆಗೆ ತಡೆ: ಅರ್ಜಿ ವಜಾ
ನವದೆಹಲಿ ವರದಿ:
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ‘ಜೈ ಶ್ರೀರಾಂ’ ಘೋಷಣೆ ಕೂಗುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಿಗದಿ ಮಾಡಿರುವುದನ್ನು ಪ್ರಶ್ನಿಸಿರುವ ಅರ್ಜಿಯನ್ನೂ ವಜಾ
ಮಾಡಿದೆ.

ಜನಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆ ಆಗಿದೆ ಎಂದು ಅರ್ಜಿದಾರರು ಭಾವಿಸಿದ್ದರೆ ಅವರು ಸಂಬಂಧಪಟ್ಟ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಈ ಎರಡೂ ಅಂಶಗಳನ್ನು ಪ್ರಶ್ನಿಸಲು ಸುಪ್ರೀಂ ಕೋರ್ಟ್‌ ಸರಿಯಾದ ವೇದಿಕೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಹೇಳಿತು.

ಒಂದು ರಾಜಕೀಯ ಪಕ್ಷವು ‘ಜೈ ಶ್ರೀರಾಂ’ ಘೋಷಣೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿದೆ. ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ಘೋಷಣೆ ಕೂಗುವುದು ಸರಿಯಾದ ಕ್ರಮ ಅಲ್ಲ ಎಂದು ಅರ್ಜಿದಾರ ಎಂ.ಎಲ್‌. ಶರ್ಮಾ ವಾದಿಸಿದರು.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

‘ಹೊರಗಿನವಳು’ ಹೇಳಿಕೆಗೆ ಮಮತಾ ತಿರುಗೇಟು
ನಂದಿಗ್ರಾಮ (ಪಶ್ಚಿಮ ಬಂಗಾಳ) (ಪಿಟಿಐ):
ಟಿಎಂಸಿ ತೊರೆದು ಈಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ಹೊರಗಿನವರು’ ಎಂದು ಕರೆದಿದ್ದಾರೆ. ಮಮತಾ ಬ್ಯಾನರ್ಜಿ ಅವರು ಇದಕ್ಕೆ ತಿರುಗೇಟು ನೀಡಿದ್ದಾರೆ.

ಝಾರಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸುವೇಂದು, ‘ನಂದಿಗ್ರಾಮದಲ್ಲಿ ಹೊರಗಿನವರು ಬಂದು ಸ್ಪರ್ಧಿಸುತ್ತಿದ್ದಾರೆ. ಅವರನ್ನು 50,000 ಮತಗಳ ಅಂತರದಿಂದ ಸೋಲಿಸದೇ ಇದ್ದರೆ ನಾನು ರಾಜಕೀಯ ತೊರೆಯುತ್ತೇನೆ’ ಎಂದು ಪುನರುಚ್ಚರಿಸಿದ್ದರು. ಅಲ್ಲದೆ, ಟಿಎಂಸಿಯನ್ನು ಅಧಿಕಾರದಿಂದ ಓಡಿಸಿ ಎಂದು ಕರೆ ನೀಡಿದ್ದರು.

ಇದೇ ಸಂದರ್ಭದಲ್ಲಿ ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಅವರು ಸುವೇಂದು ಅಧಿಕಾರಿ ಅವರಿಗೆ ತಿರುಗೇಟು ನೀಡಿದ್ದಾರೆ. ‘ಹೊರಗಿನ ಗುಜರಾತಿ ಜನರಿಗೆ ತಮ್ಮನ್ನು ಮಾರಿಕೊಂಡವರು, ಈಗ ನನ್ನನ್ನು ಹೊರಗಿನವಳು ಎಂದು ಕರೆಯುತ್ತಿದ್ದಾರೆ. ನಾನು ಪಶ್ಚಿಮ ಬಂಗಾಳದ ಮನೆಮಗಳು ಆಗಿರದಿದ್ದರೆ, 10 ವರ್ಷ ಆಡಳಿತ ನಡೆಸಲು ಸಾಧ್ಯವಿರಲಿಲ್ಲ‌’ ಎಂದು ಹೇಳಿದ್ದಾರೆ.

‘ಈ ನಾಯಕರಿಗೆ ನಾನು ಈಗ ಹೊರಗಿನವಳಾಗಿದ್ದೇನೆ. ಗುಜರಾತಿನಿಂದ ಬಂದವರು ಈ ನೆಲದ ಮಂದಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಬೇಡಿ ಎಂದು ನಂದಿಗ್ರಾಮದ ಜನರು ಹೇಳಲಿ, ನಾನು ಇಲ್ಲಿಂದ ಹೋಗುತ್ತೇನೆ’ ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT