ಮಂಗಳವಾರ, ಜೂನ್ 28, 2022
21 °C
ಲಸಿಕೆ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶ

ಸುಪ್ರೀಂಕೋರ್ಟ್‌ ನಿಲುವು ಶ್ಲಾಘಿಸಿ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂಕೋರ್ಟ್‌ ಚಾಟಿ ಬೀಸಿದ ನಂತರ ಕೇಂದ್ರ ಸರ್ಕಾರ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲು ಎಚ್ಚೆತ್ತುಕೊಂಡಿತು ಎನ್ನುವ ಚರ್ಚೆಯ ಮಧ್ಯೆ ಕೇರಳದ 5ನೇ ತರಗತಿ ವಿದ್ಯಾರ್ಥಿನಿ ಲಿಡ್ವಿನಾ ಜೋಸೆಫ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆದು, ಉನ್ನತ ನ್ಯಾಯಾಲಯವು ಮಧ್ಯಪ್ರವೇಶಿಸಿ ಪರಿಣಾಮಕಾರಿ ಆದೇಶ ನೀಡುವ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜೀವಗಳನ್ನು ಉಳಿಸಿದೆ ಎಂದು ಶ್ಲಾಘಿಸಿದ್ದಾಳೆ.

ತ್ರಿಶೂರ್‌ನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಜೋಸೆಫ್ ತನ್ನ ಪತ್ರದಲ್ಲಿ ಸುಪ್ರೀಂ ಕೋರ್ಟ್‌ ಕರ್ತವ್ಯ ನಿರ್ವಹಣೆಯನ್ನು ಚಿತ್ರಿಸುವ ರೇಖಾಚಿತ್ರವನ್ನು ಬಿಡಿಸಿದ್ದಾಳೆ. ಅದರಲ್ಲಿ ನ್ಯಾಯಮೂರ್ತಿಗಳು ಕೊರೊನಾ ವೈರಸ್ ಹೊಡೆದುರುಳಿಸುತ್ತಿರುವುದನ್ನು ಕಾಣಬಹುದು. ಜತೆಗೆ ತ್ರಿವರ್ಣ, ಸಿಂಹದ ಲಾಂಛನ ಮತ್ತು ರಾಷ್ಟ್ರಪಿತನ ನಗುವ ಮೊಗದ ಭಾವಚಿತ್ರವನ್ನು ಬಾಲಕಿ ಬಿಡಿಸಿದ್ದಾಳೆ.

‘ಕೊರೊನಾದಿಂದಾಗಿ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ನನಗೆ ತುಂಬಾ ಚಿಂತೆ ಇತ್ತು. ನಮ್ಮ ಗೌರವಾನ್ವಿತ ನ್ಯಾಯಾಲಯವು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಾಮಾನ್ಯ ಜನರ ನೋವು ಮತ್ತು ಸಾವಿಗೆ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿದೆ ಎನ್ನುವುದನ್ನು ನಾನು ಪತ್ರಿಕೆಗಳಿಂದ ಅರ್ಥಮಾಡಿಕೊಂಡಿದ್ದೇನೆ’ ಎಂದು ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

‘ಗೌರವಾನ್ವಿತ ನ್ಯಾಯಾಲಯವು ಆಮ್ಲಜನಕದ ಪೂರೈಕೆಗಾಗಿ ಆದೇಶ ನೀಡಿ, ಅನೇಕ ಜೀವಗಳನ್ನು ಉಳಿಸಿರುವುದಕ್ಕೆ ನಾನು ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ನ್ಯಾಯಾಲಯವು ಕೋವಿಡ್ -19ನಿಂದ ನಮ್ಮ ದೇಶದಲ್ಲಿ ಸಂಭವಿಸುತ್ತಿದ್ದ ಸಾವಿನ ಪ್ರಮಾಣವನ್ನು ಅದರಲ್ಲೂ ವಿಶೇಷವಾಗಿ ದೆಹಲಿಯಲ್ಲಿ ಸಾವಿನ ಪ್ರಮಾಣ ತಗ್ಗಿಸಲು ಪರಿಣಾಮಕಾರಿ ಕ್ರಮಗಳನ್ನು ಪ್ರಾರಂಭಿಸಿದೆ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದಕ್ಕಾಗಿ ನಿಮಗೆ ಗೌರವಪೂರ್ವಕ ಧನ್ಯವಾದಗಳು’ ಎಂದು ಜೋಸೆಫ್, ಮುಖ್ಯನ್ಯಾಯಮೂರ್ತಿ ರಮಣ ಅವರಿಗೆ ಬರೆದ ಪತ್ರದಲ್ಲಿ ಶ್ಲಾಘಿಸಿದ್ದಾಳೆ.

ಪತ್ರಕ್ಕೆ ಪ್ರತಿಕ್ರಿಯಿಸಿ ಬಾಲಕಿಗೆ ಪತ್ರ ಬರೆದಿರುವ ಮುಖ್ಯನ್ಯಾಯಮೂರ್ತಿಗಳು ‘ಮನಮುಟ್ಟುವಂತಿರುವ ಕರ್ತವ್ಯನಿರತ ನ್ಯಾಯಮೂರ್ತಿಗಳ ರೇಖಾಚಿತ್ರ ಒಳಗೊಂಡ ನಿಮ್ಮ ಸುಂದರ ಪತ್ರವನ್ನು ನಾನು ಸ್ವೀಕರಿಸಿದ್ದೇನೆ. ದೇಶದಲ್ಲಿನ ಘಟನೆಗಳ ಬಗ್ಗೆ ನೀವು ನಿಗಾ ಇಟ್ಟಿರುವ ರೀತಿ ಮತ್ತು ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜನರ ಯೋಗಕ್ಷೇಮಕ್ಕಾಗಿ ನೀವು ತೋರಿರುವ ಕಾಳಜಿಗೆ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ನೀವು ಜಾಗರೂಕರಾಗಿ, ನೀವು ತಿಳಿವಳಿಕೆ ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯುವಿರಿ ಎಂಬ ಖಾತ್ರಿ ನನಗಿದೆ. ನೀವು ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡುತ್ತೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು