ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಬಾಲಕಿಯ ಉಡುಗೊರೆ: ಪ್ರಧಾನಿ ನಿವಾಸದಲ್ಲಿ ಅರಳಲಿರುವ ಪೇರಲ ಗಿಡ ..!

Last Updated 3 ಸೆಪ್ಟೆಂಬರ್ 2021, 9:53 IST
ಅಕ್ಷರ ಗಾತ್ರ

ತಿರುವನಂತಪುರ: ದೇಶದಾದ್ಯಂತ ಸಾವಯವ ಕೃಷಿ ಪಸರಿಸುವ ಕನಸಿನೊಂದಿಗೆ ಕೇರಳದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಬೆಳೆಸಿದ್ದ ಪೇರಲೆ ಹಣ್ಣಿನ ಗಿಡ, ಇನ್ನು ಕೆಲವೇ ದಿನಗಳಲ್ಲಿ ನವದೆಹಲಿಯ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದ ಅಂಗಳದಲ್ಲಿ ಅರಳಲಿದೆ..!

ಹತ್ತನೇ ತರಗತಿಯ ಬಾಲಕಿ ಜಯಲಕ್ಷ್ಮಿ ಉಡುಗೊರೆಯಾಗಿ ನೀಡಿದ್ದ ಪೇರಲ ಹಣ್ಣಿನ ಗಿಡವನ್ನು, ನಟ ಹಾಗೂ ಬಿಜೆಪಿ ಸಂಸದ ಸುರೇಶ್ ಗೋಪಿ, ಇತ್ತೀಚೆಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಾಂತರಿಸಿದ್ದರು. ಮೋದಿಯವರು, ಈ ಪೇರಲ ಹಣ್ಣಿನ ಗಿಡವನ್ನು ಸ್ವೀಕರಿಸುತ್ತಿರುವ ಫೋಟೊವನ್ನು ಅವರು ಗುರುವಾರ ತಮ್ಮ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

‘ಪಟ್ಟಣಂತ್ತಿಟ್ಟ ಜಿಲ್ಲೆಯ ಕುಳನದ ಗ್ರಾಮದ ರೈತ ಕುಟುಂಬದ ಬಾಲಕಿಯೊಬ್ಬಳು ಉತ್ತಮ ಉದ್ದೇಶದೊಂದಿಗೆ ಬೆಳೆಸಿರುವ ಪೇರಲ ಗಿಡ, ದೇಶದ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಅರಳಲಿದೆ‘ ಎಂದು ಫೋಟೊ ಜೊತೆಗೆ ಬರೆದಿದ್ದರು.

ಕೇರಳದ ಪಟ್ಟಣಂತ್ತಿಟ್ಟ ಜಿಲ್ಲೆಯ ಕುಳನದ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿ ಜಯಲಕ್ಷ್ಮಿ, ತನ್ನ ಮನೆಯ ಅಂಗಳದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ತೋಟ ಮಾಡಿದ್ದಾಳೆ. ಈ ಸಾಧನೆಗಾಗಿ ರಾಜ್ಯ ಸರ್ಕಾರ ಆಕೆಗೆ ‘ಕರ್ಷಕ ತಿಲಕಂ‘– ಉತ್ತಮ ವಿದ್ಯಾರ್ಥಿನಿ ಪುರಸ್ಕಾರ ನೀಡಿ ಗೌರವಿಸಿದೆ.

ಇಂಥ ಸಾಧನೆ ಮಾಡಿರುವ ಈ ವಿದ್ಯಾರ್ಥಿನಿಗೆ, ಸಾವಯವ ಕೃಷಿಯನ್ನು ದೇಶದಾದ್ಯಂತ ಪ್ರಚಾರ ಮಾಡಬೇಕೆಂಬ ಕನಸು. ಇದೇ ಉದ್ದೇಶದೊಂದಿಗೆ ತಾನು ಬೆಳೆಸಿರುವ ಪೇರಲ ಗಿಡವೊಂದನ್ನು ದೇಶದ ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಬೇಕೆಂದು ತೀರ್ಮಾನಿಸಿದ್ದಳು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯ ಕ್ರಮಕ್ಕೆ ಬಂದಿದ್ದ ಸಂಸದ ಸುರೇಶ್ ಗೋಪಿ ಅವರಿಗೆ, ಪೇರಲ ಸಸಿಯನ್ನು ಕೊಟ್ಟು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸುವಂತೆ ಮನವಿ ಮಾಡಿದ್ದಳು. ವಿದ್ಯಾರ್ಥಿನಿಯ ಮನವಿಯಂತೆ ಗೋಪಿ ಅವರು, ಪ್ರಧಾನಿಗೆ ಪೇರಲ ಗಿಡವನ್ನು ತಲುಪಿಸಿದ್ದಾರೆ.

‘ರೈತ ಕುಟುಂಬದ ಬಾಲಕಿ ನೀಡಿದ ಪೇರಲ ಗಿಡವನ್ನು ಪ್ರಧಾನಿಯವರು ಹೃದಯಪೂರ್ವಕವಾಗಿ ಸ್ವೀಕರಿಸಿದ್ದಾರೆ. ಈ ಗಿಡವನ್ನು ತಮ್ಮ ಅಧಿಕೃತ ನಿವಾಸದಲ್ಲಿ ನೆಟ್ಟು ಬೆಳೆಸುವುದಾಗಿ ಭರವಸೆ ನೀಡಿದ್ದಾರೆ‘ ಎಂದು ಸಂಸದ ಗೋಪಿ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ನಾಳೆ ಈ ಗಿಡ ಬೆಳೆದು ಮರವಾದ ಮೇಲೆ, ಪ್ರಧಾನಿ ಹೆಮ್ಮೆಯಿಂದ, ಕೇರಳದ ಪುಟ್ಟ ಹುಡುಗಿಯನ್ನು ಖಂಡಿತಾ ನೆನೆಯುತ್ತಾರೆ. ಪ್ರಧಾನಿಯವರ ಅಧಿಕೃತ ಬಂಗಲೆಯಲ್ಲಿ ಬೆಳೆಯುವ ಈ ಗಿಡ ದೇಶಕ್ಕೆ ಒಂದು ಉತ್ತಮ ಸಂದೇಶ ಸಾರಲಿದೆ‘ ಎಂದು ಗೋಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT