ಮಂಗಳವಾರ, ಮಾರ್ಚ್ 2, 2021
19 °C

ಚಾಂಡಿ ವಿರುದ್ಧ ಅತ್ಯಾಚಾರ ಆರೋಪ: ಸಿಬಿಐ ತನಿಖೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಸಂಸದ ಕೆ.ಸಿ.ವೇಣುಗೋಪಾಲ್‌ ಹಾಗೂ ಇತರ ನಾಲ್ವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲು ಆಡಳಿತಾರೂಢ ಎಲ್‌ಡಿಎಫ್‌ ಸರ್ಕಾರ ಭಾನುವಾರ ನಿರ್ಧರಿಸಿದೆ.

‘ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದೆ. ಹೀಗಾಗಿ ವಿರೋಧ ಪಕ್ಷಗಳನ್ನು ಹಣಿಯಲು ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರವು ಸಿಬಿಐ ಅಸ್ತ್ರ ಪ್ರಯೋಗಿಸುತ್ತಿದೆ. ಇದು ರಾಜಕೀಯ ಹಾಗೂ ದುರುದ್ದೇಶಪೂರಿತ ತೀರ್ಮಾನ’ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ.

ಕೇಂದ್ರ ಸಚಿವ ವಿ.ಮುರಳಿಧರನ್‌ ಅವರೂ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಹುಕೋಟಿ ಸೋಲಾರ್‌ ವಿದ್ಯುತ್‌ ಘಟಕ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್‌ ಅವರು ತಮ್ಮ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ 2013ರಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಚಾಂಡಿ, ವೇಣುಗೋಪಾಲ್‌, ಹಿಬಿ ಇಡೆನ್‌, ಅಡೂರ್‌ ಪ್ರಕಾಶ್‌, ಶಾಸಕ ಎ.ಪಿ.ಅನಿಲ್‌ ಕುಮಾರ್‌, ಬಿಜೆಪಿ ಮುಖಂಡ ಎ.ಪಿ.ಅಬ್ದುಲ್‌ ಕುಟ್ಟಿ (ಆಗ ಕಾಂಗ್ರೆಸ್‌ ಶಾಸಕ) ಅವರ ಹೆಸರುಗಳನ್ನೂ ಉಲ್ಲೇಖಿಸಿದ್ದರು. ಈ ಸಂಬಂಧ ಕ್ರೈಂ ಬ್ರಾಂಚ್‌ ಪೊಲೀಸರು ತನಿಖೆ ನಡೆಸುತ್ತಿದ್ದರು. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಮಹಿಳೆ, ಸಿಬಿಐ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದರು. ಪ್ರಕರಣದ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸುವ ಉದ್ದೇಶದಿಂದ ಇದನ್ನು ಸಿಬಿಐ ತನಿಖೆಗೆ ವಹಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ರಾಜಕೀಯ ದುರುದ್ದೇಶವಿಲ್ಲ’ ಎಂದು ಸಿಪಿಐ (ಎಂ) ಹಂಗಾಮಿ ಕಾರ್ಯದರ್ಶಿ ಎ.ವಿಜಯರಾಘವನ್ ಹೇಳಿದ್ದಾರೆ.    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು