ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಹತ್ಯೆ: ನರಬಲಿಯ ಜತೆಗೆ ನರಭಕ್ಷಣೆಯ ಶಂಕೆ, ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಒಂದು ದೇಹವನ್ನು 56 ಭಾಗ ಮಾಡಿದ್ದ ಆರೋಪಿ
Last Updated 12 ಅಕ್ಟೋಬರ್ 2022, 13:59 IST
ಅಕ್ಷರ ಗಾತ್ರ

ತಿರುವನಂತಪುರ: ಶೀಘ್ರವಾಗಿ ಶ್ರೀಮಂತರಾಗುವ ಆಸೆಯಿಂದ ಕೇರಳದ ದಂಪತಿ, ಇಬ್ಬರು ಮಹಿಳೆಯರನ್ನು ವಿರೂಪಗೊಳಿಸಿ ನರಬಲಿ ನೀಡಿರುವ ಜತೆಗೆ, ನರಮಾಂಸವನ್ನೇ ಭಕ್ಷಿಸಿರಬಹುದು ಎಂದು ಬುಧವಾರ ಪೊಲೀಸರು ಶಂಕಿಸಿದ್ದಾರೆ.

‘ನತದೃಷ್ಟ ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ಹತ್ಯೆ ಮಾಡುವ ಮುನ್ನ ಆರೋಪಿಗಳು ಅವರನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದರು. ಮಹಿಳೆಯೊಬ್ಬರ ಸ್ತನಗಳನ್ನು ಕತ್ತರಿಸಿ, ಅದರಿಂದ ರಕ್ತ ಚಿಮ್ಮುವಂತೆ ಮಾಡಿದ್ದರೆ, ಮತ್ತೊಬ್ಬ ಮಹಿಳೆಯ ದೇಹವನ್ನು 56 ಭಾಗಗಳನ್ನಾಗಿ ಕತ್ತರಿಸಲಾಗಿದೆ. ಈಕೆಯ ದೇಹದ ಭಾಗಗಳು ಮೂರು ಪ್ರತ್ಯೇಕ ಗುಂಡಿಗಳಲ್ಲಿ ಪತ್ತೆಯಾಗಿವೆ’ ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ಮಾಹಿತಿ ನೀಡಿದ್ದಾರೆ.

‘ನರಬಲಿ ನೀಡಿದ ಬಳಿಕ ಆರೋಪಿಗಳು ಮಹಿಳೆಯರ ದೇಹದ ಮಾಂಸವನ್ನು ತಿಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ತನಿಖೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದ್ದಾರೆ.

‘ಪ್ರಕರಣದ ಮುಖ್ಯ ಆರೋಪಿ ಮುಹಮ್ಮದ್ ಶಾಫಿ, ಅಶ್ಲೀಲ ಚಿತ್ರದಲ್ಲಿ ಅಭಿನಯಿಸಿದರೆ ದುಡ್ಡು ನೀಡುವುದಾಗಿ ಈ ಮಹಿಳೆಯರಿಗೆ ಆಮಿಷ ಒಡ್ಡಿ ಅವರನ್ನು ಭಗವಲ್ ಸಿಂಗ್ ಮತ್ತು ಆತನ ಹೆಂಡತಿ ಲೈಲಾ ಅವರ ಬಳಿಗೆ ಕರೆತಂದಿದ್ದ. ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗಲು ಮಹಿಳೆಯರನ್ನು ನರಬಲಿ ನೀಡುವಂತೆ ಸಿಂಗ್ ದಂಪತಿಗೆ ಶಾಫಿ ಸಲಹೆ ನೀಡಿದ್ದ’ ಎಂದೂ ಪೊಲೀಸರು ವಿವರಿಸಿದ್ದಾರೆ.

‘ಬಾಲ್ಯದಲ್ಲೇ ಶಾಲೆ ಬಿಟ್ಟಿದ್ದ ಶಾಫಿ ವಿಕೃತಿಕಾಮಿಯಾಗಿದ್ದು, ಕ್ರೌರ್ಯದಲ್ಲಿ ಸಂತೋಷಪಡುವ ಮನೋಭಾವ ಹೊಂದಿದ್ದ. ಈ ಹಿಂದೆ 75 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಶಾಫಿ, 2020ರಲ್ಲಿ ಜಾಮೀನಿನ ಮೇರೆಗೆ ಹೊರಗೆ ಬಂದಿದ್ದ. ಪದ್ಮಾ ಅವರ ಕತ್ತು ಹಿಸುಕಿ, ಶಿರಚ್ಛೇದ ಮಾಡಿದ್ದ ಆತ ಆಕೆಯ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿದ್ದ. ಸಿಂಗ್ ಪತ್ನಿ ಲೈಲಾ,ರೋಸ್ಲಿನ್ ಅವರ ಕತ್ತು ಹಿಸುಕಿ, ಸ್ತನಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾಳೆ’ ಎಂದೂ ಅವರು ತಿಳಿಸಿದ್ದಾರೆ.

ಆರೋಪಿಗೆ ಸಿಪಿಎಂ ಜತೆಗೆ ನಂಟು:

ಭಗವಲ್ ಸಿಂಗ್ ಮಸಾಜ್ ಥೆರಪಿಸ್ಟ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯನಾಗಿದ್ದ. ಈತ ಆಡಳಿತಾರೂಢ ಸಿಪಿಎಂ ಪಕ್ಷದ ಸದಸ್ಯನಾಗಿದ್ದ ಎನ್ನಲಾಗಿದೆ. ಆದರೆ, ಸಿಪಿಎಂ ಆತ ಪಕ್ಷದ ಸದಸ್ಯನಲ್ಲ ಎಂದು ಸ್ಪಷ್ಟಪಡಿಸಿದೆ.

‘ಆತ ನಮ್ಮೊಂದಿಗೆ ಕೆಲಸ ಮಾಡಿದ್ದಾನೆ. ಆದರೆ, ಆತ ನಮ್ಮ ಪಕ್ಷದ ಸದಸ್ಯನಲ್ಲ. ಹಿಂದೆ ಆತ ಪ್ರಗತಿಪರನಾಗಿದ್ದ. ಆದರೆ, ಆತನ ಎರಡನೇ ಮದುವೆಯ ಬಳಿಕ ಆತ ಧಾರ್ಮಿಕ ವ್ಯಕ್ತಿಯಾಗಿ ಬದಲಾದ. ಬಹುಶಃ ಆತನ ಪತ್ನಿಯ ಪ್ರಭಾವ ಇರಬಹುದು’ ಎಂದು ಸಿಪಿಎಂ ನಾಯಕ ಪಿ.ಆರ್. ಪ್ರದೀಪ್ ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಜೂನ್ ತಿಂಗಳಿನಲ್ಲಿ ರೋಸ್ಲಿನ್ ಹಾಗೂ ಸೆಪ್ಟೆಂಬರ್‌ನಲ್ಲಿ ಪದ್ಮಾ ನಾಪತ್ತೆಯಾಗಿದ್ದರು. ಇಬ್ಬರನ್ನೂ ಕ್ರಮವಾಗಿ ಜೂನ್ 6 ಮತ್ತು ಸೆಪ್ಟೆಂಬರ್ 26ರಂದು ಹತ್ಯೆ ಮಾಡಲಾಗಿದೆ. ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಈ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

ಮಹಿಳೆಯರಿಬ್ಬರ ಫೋನ್‌ಗಳು ಶಾಫಿ ಬಳಿ ದೊರೆತಿದ್ದವು. ಮಹಿಳೆಯರನ್ನು ಶಾಫಿ ಕಾರಿನಲ್ಲಿ ಕರೆತಂದಿದ್ದು ಸಿಸಿ ಟಿವಿಯ ದೃಶ್ಯಾವಳಿಯಲ್ಲಿ ಪತ್ತೆಯಾಗಿದ್ದು, ಇದನ್ನು ಅನುರಿಸರಿಸಿ, ತನಿಖೆಯ ಭಾಗವಾಗಿ ಪೊಲೀಸರು ಪತ್ತನಂತಿಟ್ಟ ಜಿಲ್ಲೆಯ ಎಲಂಥೂರಿನ ಸಿಂಗ್ ದಂಪತಿ ಮನೆಗೆ ಹೋದಾಗ ಅವರು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ.

‘ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಹುಡುಕಲು ಶಾಫಿ ತನ್ನ ಪತ್ನಿಯ ಫೇಸ್‌ಬುಕ್ ಖಾತೆಯನ್ನು ಬಳಸುತ್ತಿದ್ದ. ಹೀಗೆ ಹುಡುಕುತ್ತಿದ್ದಾಗ ಸಿಂಗ್–ಲೈಲಾ ದಂಪತಿ ಪರಿಚಯವಾಗಿದ್ದರು. 15 ವರ್ಷಗಳಲ್ಲಿ ಶಾಫಿ ವಿರುದ್ಧ 10 ಪ್ರಕರಣಗಳು ದಾಖಲಾಗಿದ್ದು, ಕೆಲ ಪ್ರಕರಣಗಳಲ್ಲಿ ಮಹಿಳೆಯರನ್ನು ಒಂದೇ ಮಾದರಿಯಲ್ಲಿ ಹತ್ಯೆ ಮಾಡಲಾಗಿದೆ‌’ ಎಂದುಕೊಚ್ಚಿ ನಗರ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ತಿಳಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಕೋರಿದ ಪೊಲೀಸರು

ಕೊಚ್ಚಿ: ‘ನರಬಲಿ’ ಪ್ರಕರಣದ ಮೂವರು ಆರೋಪಿಗಳನ್ನು ಬುಧವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಪೊಲೀಸರು 10 ದಿನಗಳ ಕಸ್ಟಡಿಗೆ ಕೋರಿದ್ದಾರೆ.

ಆರೋಪಿಗಳ ಪರ ವಕಾಲತ್ತು ವಹಿಸಿದ್ದ ವಕೀಲ ಬಿ.ಎ. ಆಲೂರ್ ಅವರು ಮೂವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT