ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಡಿತರೇ ಕಾಶ್ಮೀರ ತೊರೆಯಿರಿ: ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ ಒತ್ತಾಯ

Last Updated 16 ಆಗಸ್ಟ್ 2022, 11:54 IST
ಅಕ್ಷರ ಗಾತ್ರ

ಶ್ರೀನಗರ: ತಮ್ಮ ಮೇಲಿನ ಭಯೋತ್ಪಾದಕರ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರ ತೊರೆಯುವಂತೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು(ಕೆಪಿಎಸ್‌ಎಸ್‌), ಸಮುದಾಯದ ಸದಸ್ಯರನ್ನು ಒತ್ತಾಯಿಸಿದೆ.

‘ಕಾಶ್ಮೀರಿ ಪಂಡಿತರ ಮೇಲೆ ಇಂದು ಮತ್ತೊಂದು ಮಾರಣಾಂತಿಕ ದಾಳಿ ನಡೆಸುವ ಮೂಲಕ ಕಾಶ್ಮೀರಿ ಕಣಿವೆಯ ಎಲ್ಲ ಕಾಶ್ಮೀರಿ ಪಂಡಿತರನ್ನು ಕೊಲ್ಲುವುದಾಗಿ ಭಯೋತ್ಪಾದಕರು ಸ್ಪಷ್ಟ ಸಂದೇಶ ನೀಡಿದ್ದಾರೆ’ಎಂದು ಕೆಪಿಎಸ್ಎಸ್‌ ಮುಖ್ಯಸ್ಥ ಸಂಜಯ್ ಟಿಕೂ ಹೇಳಿದ್ಧಾರೆ.

ಕಾಶ್ಮೀರಿ ಕಣಿವೆಯನ್ನು ಬಿಟ್ಟು ಜಮ್ಮು ಮತ್ತು ದೆಹಲಿಯಂತಹ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಟಿಕೂ ಅವರು ಎಲ್ಲ ಕಾಶ್ಮೀರಿ ಪಂಡಿತರಿಗೆ ಒತ್ತಾಯಿಸಿದ್ದಾರೆ.

‘ನಾವು ಇದನ್ನು ಕಳೆದ 32 ವರ್ಷಗಳಿಂದ ನೋಡುತ್ತಿದ್ದೇವೆ. ಅಲ್ಪಸಂಖ್ಯಾತರಿಗೆ, ಅದರಲ್ಲೂ ಕಾಶ್ಮೀರಿ ಪಂಡಿತರಿಗೆ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ನಾವು ಎಷ್ಟು ದಿನ ಹೀಗೇ ಸಾಯಬೇಕು? ಸಾಕು ಸಾಕು’ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಭಯೋತ್ಪಾದಕರು ಅಲ್ಪಸಂಖ್ಯಾತ ಸಮುದಾಯದ ಇನ್ನಷ್ಟು ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮಂಗಳವಾರ ದಾಳಿಗೀಡಾದ ಸಂತ್ರಸ್ತರು ಈ ಮೊದಲೇ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎಂದು ಕೆಪಿಎಸ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.

‘ಆದರೆ, ಅಧಿಕಾರಿಗಳು ತಮ್ಮ ಹಳ್ಳಿಗಳಲ್ಲೇ ವಾಸಿಸುವಂತೆ ಅವರಿಗೆ ಹೇಳಿರುವುದು ವಿಪರ್ಯಾಸ. ಇಲ್ಲಿ ಏನು ಆಗುತ್ತಿದೆ? ಅಧಿಕಾರಿಗಳು ಸಂಭವನೀಯ ದಾಳಿಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ. ಆದರೆ, ನಮಗೆ ಭದ್ರತೆ ನೀಡುತ್ತಿಲ್ಲ’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಿ ಪಂಡಿತರನ್ನೇ ಉಗ್ರರು ಗುರಿಯಾಗಿಸಿಕೊಂಡಿರುವ ಬಗ್ಗೆ ಟಿಕೂ ಆಶ್ಚರ್ಯ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ಸಂದರ್ಭದಲ್ಲಿ ಅವರು ಏಕೆ ದಾಳಿ ಮಾಡಲಿಲ್ಲ? ಅಮರನಾಥ ಯಾತ್ರೆಯ ಮೇಲೆ ಏಕೆ ದಾಳಿ ನಡೆಯಲಿಲ್ಲ? ಕಾಶ್ಮೀರದಲ್ಲಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಆದರೆ, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿರುವುದು ಹೇಗೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಶ್ಮೀರಿ ಪಂಡಿತರ ನಿರ್ಗಮನಕ್ಕೆ ಕರೆ ನೀಡಿದ ಪರಿಣಾಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟಿಕೂ, ಅದನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಸರ್ಕಾರವು ಸಾರ್ವಜನಿಕ ಸುರಕ್ಷತಾ ಕಾಯಿದೆ (ಪಿಎಸ್‌ಎ) ಅಡಿಯಲ್ಲಿ ನನ್ನ ಮೇಲೆ ಪ್ರಕರಣ ದಾಖಲಿಸಬಹುದು ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಚೋಟಿಪೊರಾ ಬಳಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಸಹೋದರಿಬ್ಬರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಸುನಿಲ್ ಕುಮಾರ್ ಎಂಬುವವರು ಮೃತಪಟ್ಟಿದ್ದಾರೆ. ಅವರ ತಮ್ಮ ಪಿಂಟು ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಸೋಫಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಯಲ್ಲಿ ಉಗ್ರನೊಬ್ಬ ರಾಹುಲ್‌ ಭಟ್‌ ಎಂಬ ಕಾಶ್ಮೀರಿ ಪಂಡಿತರೊಬ್ಬರನ್ನು ಹತ್ಯೆಗೈದಿದ್ದ.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT