ಗುರುವಾರ , ಅಕ್ಟೋಬರ್ 22, 2020
22 °C

ಶ್ರೀಕೃಷ್ಣ ಜನ್ಮಭೂಮಿ: ಅರ್ಜಿ ವಿಚಾರಣೆಗೆ ಕೋರ್ಟ್‌ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಮಥುರಾದ ಶ್ರೀಕೃಷ್ಣ ಜನ್ಮಸ್ಥಳ ಭೂಮಾಲೀಕತ್ವವನ್ನು ನೀಡುವಂತೆ ಕೋರಿ ‘ಶ್ರೀಕೃಷ್ಣ ವಿರಾಜಮಾನ್‌’ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ವಿಚಾರಣೆಗೆ ಪರಿಗಣಿಸಲು ಶುಕ್ರವಾರ ನಿರ್ಧರಿಸಿದೆ.

ನವೆಂಬರ್‌ 18ರಂದು ಈ ಅರ್ಜಿಯ ವಿಚಾರಣೆ ಆರಂಭಿಸುವುದಾಗಿ ಹೇಳಿರುವ ನ್ಯಾಯಾಲಯವು ಉತ್ತರ ಪ್ರದೇಶದ ಸುನ್ನಿ ಕೇಂದ್ರೀಯ ವಕ್ಫ್‌ ಮಂಡಳಿ, ಶಾಹಿ ಮಸೀದಿ ಈದ್ಗಾ ಟ್ರಸ್ಟ್‌ ಮತ್ತಿತರರಿಗೆ ನೋಟಿಸ್‌ ಜಾರಿಮಾಡಿದೆ.

‘ಅರ್ಜಿಯನ್ನು ಕುರಿತ ನಮ್ಮ ವಾದವನ್ನು ನ್ಯಾಯಾಧೀಶರು ಒಪ್ಪಿದ್ದಾರೆ. ಇನ್ನು ಅರ್ಜಿಯ ವಿಚಾರಣೆ ಆರಂಭವಾಗಲಿದೆ’ ಎಂದು ಶ್ರೀಕೃಷ್ಣ ವಿರಾಜಮಾನ್‌ ಪರ ವಕೀಲ ವಿಷ್ಣುಶಂಕರ ಜೈನ್‌ ಹೇಳಿದ್ದಾರೆ.

ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು, ಮಥುರಾದ ಸಿವಿಲ್‌ ನ್ಯಾಯಾಲಯವು ಈ ಹಿಂದೆ ಅರ್ಜಿಯನ್ನು ತಿರಸ್ಕರಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಜೈನ್‌ ಅವರು ಜಿಲ್ಲಾ ನ್ಯಾಯಾಲಯದ ಮೊರೆಹೋಗಿದ್ದರು.

ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿ ಆಡಳಿತ ಸಮಿತಿಗಳ ನಡುವೆ 1968ರಲ್ಲಿ ನಡೆದ ಒಪ್ಪಂದವನ್ನು ಪ್ರಶ್ನಿಸಿರುವ ಶ್ರೀಕೃಷ್ಣ ವಿರಾಜಮಾನ್‌, ಇಡೀ 13.37 ಎಕರೆ ಜಮೀನನ್ನು ತನ್ನ ಸ್ವಾಧೀನಕ್ಕೆ ಒಪ್ಪಿಸಬೇಕು ಮತ್ತು ದೇವಸ್ಥಾನದ ಆವರಣದಲ್ಲಿರುವ ಮಸೀದಿಯನ್ನು
ತೆರವುಗೊಳಿಸಬೇಕು ಎಂದು ಒತ್ತಾಯಿಸಿದೆ.

ಮಸೀದಿ ಇರುವ ಜಾಗವನ್ನು ಬಳಸಿಕೊಳ್ಳಲು ಹಾಗೂ ಮಸೀದಿಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು 1968ರ ಒಪ್ಪಂದದಲ್ಲಿ ಅನುಮತಿ ನೀಡಲಾಗಿದೆ. ‘ಮಸೀದಿ ಸಮಿತಿಯ ಜತೆ ಒಪ್ಪಂದವನ್ನು ಮಾಡಿಕೊಳ್ಳುವ ಅಧಿಕಾರ ಸಂಸ್ಥಾನಕ್ಕೆ ಇಲ್ಲ. ಆದ್ದರಿಂದ ಆ ಒಪ್ಪಂದವನ್ನೇ ರದ್ದುಪಡಿಸಬೇಕು’ ಎಂದು ಅರ್ಜಿದಾರರು ವಾದಿಸಿದ್ದಾರೆ.

‘ಶ್ರೀಕೃಷ್ಣ ಜನ್ಮಭೂಮಿ ಹೋರಾಟವು ನಮ್ಮ ಕಾರ್ಯಸೂಚಿಯಲ್ಲಿ ಇಲ್ಲ’ ಎಂದು ರಾಮಜನ್ಮಭೂಮಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿಶ್ವ ಹಿಂದೂ ಪರಿಷತ್ತು ಈಗಾಗಲೇ ಹೇಳಿದೆ. ಆದರೆ, ದೇಶದ ಹಲವು ಸಂತರನ್ನು ಒಳಗೊಂಡಿರುವ ಆಲ್‌ ಇಂಡಿಯಾ ಅಖಾಡಾ ಪರಿಷತ್‌ (ಎಐಎಪಿ) ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ವಾರಾಣಸಿಯ ಕಾಶಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತಿರುವ ಗ್ಯಾನವಾಪಿ ಮಸೀದಿಯನ್ನೂ ತೆರವುಗೊಳಿಸಬೇಕು ಎಂದು ಎಐಎಪಿ ಒತ್ತಾಯಿಸಿದೆ. ವಾರಾಣಸಿಯ ನ್ಯಾಯಾಲಯವೊಂದರಲ್ಲಿ ಈ ಕುರಿತ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು