ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ ಹಿಂಸಾಚಾರದಲ್ಲಿ ಒಬ್ಬ ರೈತ ಗುಂಡೇಟಿಗೆ ಬಲಿ: ಮೃತನ ಕುಟುಂಬ ಸದಸ್ಯರ ಆರೋಪ

Last Updated 5 ಅಕ್ಟೋಬರ್ 2021, 21:51 IST
ಅಕ್ಷರ ಗಾತ್ರ

ಲಖಿಂಪುರ ಖೇರಿ/ಬಹರೈಚ್‌: ಉತ್ತರ ಪ‍್ರದೇಶದ ಲಖಿಂಪುರ–ಖೇರಿಯ ಹಿಂಸಾಚಾರವು ಮಂಗಳವಾರ ಬೇರೊಂದು ತಿರುವು ಪಡೆದಿದೆ. ಭಾನುವಾರ ಮೃತಪಟ್ಟ ನಾಲ್ವರಲ್ಲಿ ಒಬ್ಬರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಅವರು ವಾಹನಕ್ಕೆ ಸಿಲುಕಿ ಮೃತಪಟ್ಟಿಲ್ಲ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಕುಟುಂಬವು ಒ‍ಪ್ಪಿಲ್ಲ. ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

‘ಎರಡನೇ ಮರಣೋತ್ತರ ಪರೀಕ್ಷೆ ನಡೆಸದೆಗುರ್‌ವಿಂದರ್ ಸಿಂಗ್‌ (22) ಅಂತ್ಯ ಸಂಸ್ಕಾರ ಮಾಡುವುದಿಲ್ಲ. ಈಗ ಸಿಕ್ಕಿರುವುದು ಹುಸಿ ಮರಣೋತ್ತರ ಪರೀಕ್ಷೆ ವರದಿ’ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ರೈತರ ಪ್ರತಿಭಟನೆಗೆ ಆರಂಭದಿಂದಲೂ ಬೆಂಬಲ ನೀಡಿರುವ ಪಂಜಾಬಿ ಸಿನಿಮಾ ನಟಿ ಸೋನಿಯಾ ಮಾನ್‌ ಅವರು ಸ್ಥಳಕ್ಕೆ ಬಂದಿದ್ದಾರೆ. ಕುಟುಂಬದ ಬೇಡಿಕೆಗೆ ಅವರೂ ಬೆಂಬಲ ಕೊಟ್ಟಿದ್ದಾರೆ.

ಭಾನುವಾರ ಮೃತಪಟ್ಟ ಲವ್‌ಪ್ರೀತ್‌ ಸಿಂಗ್‌ (19), ನಚ್ತರ್‌ ಸಿಂಗ್‌ (65) ಮತ್ತು ದಲ್ಜೀತ್‌ ಸಿಂಗ್‌ (42) ಅವರ ಅಂತ್ಯ ಸಂಸ್ಕಾರ ಮಂಗಳವಾರ ನಡೆದಿದೆ. ಪೊಲೀಸ್‌ ಅಧಿಕಾರಿಗಳು ಮತ್ತು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಅವರ ನಡುವೆ ಹಲವು ತಾಸು ಮಾತುಕತೆಯ ಬಳಿಕ ಅಂತ್ಯ ಸಂಸ್ಕಾರ ನಡೆಯಿತು.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ಚಲಾಯಿಸಿದ್ದಾರೆ ಎನ್ನಲಾದ ಎಸ್‌ಯುವಿ ಹರಿದು ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ರೈತರು ಭಾನುವಾರ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಹಿಂಸಾಚಾರ ನಡೆಸಿದ್ದರು. ಈ ಹಿಂಸೆಯಲ್ಲಿ ನಾಲ್ವರು ಮೃತರಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹45 ಲಕ್ಷ ಪರಿಹಾರ ಮತ್ತು ನ್ಯಾಯಾಂಗ ತನಿಖೆಯ ಭರವಸೆಯ ಬಳಿಕ ರೈತರು ಪ್ರತಿಭಟನೆಯನ್ನು ಸೋಮವಾರ ಹಿಂದಕ್ಕೆ ಪಡೆದಿದ್ದಾರೆ. ಆಶಿಶ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರನ್ನು ಇನ್ನೂ ಬಂಧಿಸಲಾಗಿಲ್ಲ.

ಛತ್ತೀಸಗಡ ಮುಖ್ಯಮಂತ್ರಿಗೆ ತಡೆ:ಉತ್ತರ ಪ್ರದೇಶದ ರಾಜಧಾನಿ ಲಖನೌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ತಡೆದರು. ಅದನ್ನು ವಿರೋಧಿಸಿ ಬಘೆಲ್ ಅವರು ವಿಮಾನ ನಿಲ್ದಾಣದಲ್ಲಿಯೇ ಧರಣಿ ನಡೆಸಿದರು.

ನಿಷೇಧಾಜ್ಞೆ ಇರುವ ಲಖಿಂಪುರ–ಖೇರಿಗೆ ಹೋಗುತ್ತಿಲ್ಲ. ಸೀತಾಪುರದಲ್ಲಿ ಬಂಧನದಲ್ಲಿರುವ ಪ್ರಿಯಾಂಕಾ ಗಾಂಧಿ ಅವರನ್ನು ನೋಡಲು ಹೋಗುತ್ತಿರುವೆ ಎಂದರೂ ಪೊಲೀಸರು ಅವರನ್ನು ನಿಲ್ದಾಣದಿಂದ ಹೊರಬರಲು ಬಿಡಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT