ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್, ಪತ್ನಿ ರಾಬ್ಡಿ ದೇವಿಗೆ ಜಾಮೀನು

Last Updated 15 ಮಾರ್ಚ್ 2023, 7:41 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್, ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಪುತ್ರಿ ಮಿಸಾ ಭಾರತಿ ಅವರಿಗೆ ದೆಹಲಿ ಕೋರ್ಟ್‌ ಬುಧವಾರ ಜಾಮೀನು ನೀಡಿದೆ.

ಇಲ್ಲಿನ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಲಾಲು ಪ್ರಸಾದ್, ರಾಬ್ಡಿ ದೇವಿ, ಮಿಸಾ ಭಾರತಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್ ಜಾಮೀನು ನೀಡಿದ್ದಾರೆ. ಮೂವರಿಂದ ತಲಾ ₹ 50 ಸಾವಿರದ ವೈಯಕ್ತಿಕ ಬಾಂಡ್‌ ಪಡೆದು ನ್ಯಾಯಾಲಯ ಜಾಮೀನು ನೀಡಿದೆ.

ಜಾಮೀನಿಗೆ ಸಿಬಿಐ ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲ. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮಾರ್ಚ್ 29ಕ್ಕೆ ಮುಂದೂಡಿದೆ. ಇತ್ತೀಚೆಗಷ್ಟೇ ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡಿರುವ 74ರ ಹರೆಯದ ಲಾಲು ಪ್ರಸಾದ್ ಗಾಲಿಕುರ್ಚಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರೊಂದಿಗೆ ರಾಬ್ಡಿ ದೇವಿ ಹಾಗೂ ಪುತ್ರಿ ಮಿಸಾ ಭಾರತಿ ಇದ್ದರು‌.

2004 ಮತ್ತು 2009ರ ನಡುವೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಲಾಲು ಯಾದವ್ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿದೆ ಎಂದು ಸಿಬಿಐ ತನ್ನ ತನ್ನ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಿದೆ.

ನೇಮಕಾತಿಗಾಗಿ ಭಾರತೀಯ ರೈಲ್ವೆ ನಿಯಮಗಳು ಮತ್ತು ಮಾನದಂಡಗಳನ್ನು ಉಲ್ಲಂಘಿಸಲಾಗಿದೆ. ರೈಲ್ವೆಯಲ್ಲಿ ಉದ್ಯೋಗ ಪಡೆದ ಅಭ್ಯರ್ಥಿಗಳು ನೇರವಾಗಿ ಅಥವಾ ಲಾಲು ಪ್ರಸಾದ್‌ ಕುಟುಂಬ ಸದಸ್ಯರು, ಸಂಬಂಧಿಕರು ಅಥವಾ ಆಪ್ತರಿಗೆ ಹೆಚ್ಚು ರಿಯಾಯಿತಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.

ಶನಿವಾರ (ಮಾ.11) ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರ ನಿವಾಸಗಳಲ್ಲಿ ಶೋಧ ನಡೆಸಿ ದಾಖಲೆ ಇಲ್ಲದ ₹ 1 ಕೋಟಿ ನಗದು ಜಪ್ತಿ ಮಾಡಿದ್ದು, ₹ 600 ಕೋಟಿ ಅಕ್ರಮ ವಹಿವಾಟು ನಡೆಸಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT