ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ| ವೈರಿ ಬಿಜೆಪಿಯೇ ಟಿಎಂಸಿಯೇ: ಎಡರಂಗಕ್ಕೆ ಗೊಂದಲ

Last Updated 21 ನವೆಂಬರ್ 2020, 2:36 IST
ಅಕ್ಷರ ಗಾತ್ರ

ಕೋಲ್ಕತ್ತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಮಾತುಕತೆಯನ್ನು ಎಡರಂಗ ಆಗಲೇ ಆರಂಭಿಸಿದೆ. ಆದರೆ, ಚುನಾವಣೆಯಲ್ಲಿ ಯಾವ ಪಕ್ಷವನ್ನು ಪ್ರಮುಖ ಪ್ರತಿಸ್ಪರ್ಧಿಯಾಗಿ ಪರಿಗಣಿಸಬೇಕು– ಬಿಜೆಪಿಯೇ ಅಥವಾ ತೃಣಮೂಲ ಕಾಂಗ್ರೆಸ್‌ ಪಕ್ಷವೇ ಎಂಬ ಗೊಂದಲ ಎಡರಂಗವನ್ನು ಕಾಡುತ್ತಿದೆ. ಈ ವಿಚಾರದಲ್ಲಿ ಮುಖಂಡರಲ್ಲಿ ಭಿನ್ನಾಭಿಪ್ರಾಯವೂ ಕಾಣಿಸಿಕೊಂಡಿದೆ.

‘ಬಿಜೆಪಿಯೇ ದೊಡ್ಡ ಅಪಾಯ’, ಹಾಗಾಗಿ, ಎಡಪಕ್ಷಗಳು ಬಿಜೆಪಿಯನ್ನು ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಬೇಕೇ ವಿನಾ ಟಿಎಂಸಿಯನ್ನು ಅಲ್ಲ ಎಂದು ಸಿಪಿಐ (ಎಂಎಲ್‌) ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಹೇಳುತ್ತಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ಈ ವಾದವನ್ನು ಒಪ್ಪುವುದಿಲ್ಲ. ಬಿಜೆಪಿಯನ್ನಷ್ಟೇ ಗುರಿ ಮಾಡಿಕೊಂಡರೆ, ಆಡಳಿತವಿರೋಧಿ ಮತಗಳೆಲ್ಲವೂ ಬಿಜೆಪಿಯ ಪಾಲಾಗುತ್ತದೆ. ಇದರಿಂದ ಬಿಜೆಪಿಗೆ ಅನುಕೂಲವೇ ಆಗುತ್ತದೆ ಎಂಬುದು ಅವರ ಪ್ರತಿಪಾದನೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದಿರುವ ಸಿಪಿಐ(ಎಂಎಲ್‌), ಬಿಜೆಪಿಯೇ ಪ್ರಧಾನ ಎದುರಾಳಿ ಎನ್ನುತ್ತಿದೆ. ಟಿಎಂಸಿ ಅಥವಾ ಇನ್ನಾವುದೇ ಪಕ್ಷವನ್ನು ಬಿಜೆಪಿಯೊಂದಿಗೆ ಸಮೀಕರಿಸಿ ನೋಡಲಾಗದು ಎಂಬುದು ಭಟ್ಟಾಚಾರ್ಯ ಅವರ ವಾದ.

‘ತ್ರಿಪುರಾ, ಅಸ್ಸಾಂ ಮತ್ತು ಬಿಹಾರದಲ್ಲಿ ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿತು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಅದನ್ನು ದೃಷ್ಟಿಯಲ್ಲಿ ಇರಿಸಿಕೊಂಡರೆ ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿಯೇ ಪ್ರಮುಖ ಎದುರಾಳಿ ಎಂಬುದು ಅರಿವಾಗುತ್ತದೆ’ ಎಂದು ಭಟ್ಟಾಚಾರ್ಯ ವಿವರಿಸುತ್ತಾರೆ.

‘ಟಿಎಂಸಿಯೂ ಸೇರಿದಂತೆ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಬಿಜೆಪಿಯನ್ನು ಸೋಲಿಸಲು ಯತ್ನಿಸುವುದು ಆತ್ಮಹತ್ಯೆಗೆ ಸಮಾನ. ಎಲ್ಲರೂ ಬಿಜೆಪಿಯ ವಿರುದ್ಧ ಒಂದಾದರೆ ಆಡಳಿತ ವಿರೋಧಿ ಮತಗಳೆಲ್ಲವೂ ಬಿಜೆಪಿಗೆ ಸಿಗುತ್ತದೆ. ಏಕೆಂದರೆ, ಬಿಜೆಪಿ ಮಾತ್ರ ಆಗ ವಿರೋಧ ಪಕ್ಷದಂತೆ ಕಾಣಿಸುತ್ತದೆ.
ಎಲ್ಲರೂ ಬಿಜೆಪಿಯನ್ನು ವಿರೋಧಿಸುವ ಕಾರ್ಯತಂತ್ರವು ಬಿಜೆಪಿಗೇ ಅನುಕೂಲಕರವಾಗಿ ಪರಿಣಮಿಸಬಹುದು’ ಎಂದು ಸಿಪಿಎಂ ಮುಖವಾಣಿ ‘ಗಣಶಕ್ತಿ’ಗೆ ನೀಡಿದ ಸಂದರ್ಶನದಲ್ಲಿ ಯೆಚೂರಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಇಡೀ ದೇಶದಲ್ಲಿ ಬಿಜೆಪಿಯೇ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿ. ಹಾಗಿದ್ದರೂ, ಟಿಎಂಸಿಯನ್ನು ಎಡಪಕ್ಷಗಳು ಟೀಕಿಸದೇ ಇದ್ದರೆ ಬಿಜೆಪಿಯನ್ನು ಸೋಲಿಸುವ ಉದ್ದೇಶವೇ ಈಡೇರುವುದಿಲ್ಲ ಎಂಬುದು ಅವರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT