ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ

ದೆಹಲಿ ಅಬಕಾರಿ ನೀತಿ ಅನುಷ್ಠಾನದಲ್ಲಿ ಅಕ್ರಮ ಆರೋಪ: ಲೆಫ್ಟಿನೆಂಟ್‌ ಗವರ್ನರ್ ಶಿಫಾರಸು
Last Updated 23 ಜುಲೈ 2022, 1:05 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಸರ್ಕಾರದ ‘ಅಬಕಾರಿ ನೀತಿ: 2021–22’ ಕುರಿತು ತನಿಖೆ ನಡೆಸುವಂತೆದೆಹಲಿ ಲೆಫ್ಟಿನೆಂಟ್‌ (ಎಲ್‌.ಜಿ) ಗವರ್ನರ್ ವಿ.ಕೆ.ಸಕ್ಸೇನಾ ಅವರು ಸಿಬಿಐಗೆ ಶಿಫಾರಸು ಮಾಡಿದ್ದಾರೆ. ಈ ನೀತಿಯ ಅನುಷ್ಠಾನದಲ್ಲಿ ಅಬಕಾರಿ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ತಮ್ಮ ಶಿಫಾರಸಿನಲ್ಲಿ ವಿವರಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅವರ ಈ ಕ್ರಮವನ್ನು ಎಎಪಿ ಟೀಕಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಅಬಕಾರಿ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಸಿಸೋಡಿಯಾ ಅವರನ್ನು ಸಿಲುಕಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.

‘ದೆಹಲಿ ಸರ್ಕಾರದ ‘ಅಬಕಾರಿ ನೀತಿ’ಗೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ವರದಿ ಆಧಾರದಲ್ಲಿ ಈ ಶಿಫಾರಸು ಮಾಡಲಾಗಿದೆ. ಅಬಕಾರಿ ನೀತಿಯ ಅನುಷ್ಠಾನದ ಸಂದರ್ಭದಲ್ಲಿ ಜಿಎನ್‌ಸಿಟಿಡಿ ಕಾಯ್ದೆ–1991, ಟಿಒಬಿಆರ್‌ ನಿಯಮಗಳು–1993, ದೆಹಲಿ ಅಬಕಾರಿ ಕಾಯ್ದೆ–2009 ಮತ್ತು ದೆಹಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಲೆಫ್ಟಿನೆಂಟ್‌ ಗವರ್ನರ್ ಅವರ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ವರದಿಯ ಒಂದು ಪ್ರತಿಯನ್ನು ಮುಖ್ಯಮಂತ್ರಿಗಳ ಕಚೇರಿಗೂ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಗಳು

* ಅಬಕಾರಿ ಸಚಿವರ ಕೆಲವು ಕ್ರಮಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ನಷ್ಟವಾಗಿದೆ. ಅವರು ಅಬಕಾರಿ ಸನ್ನದುದಾರರಿಗೆ ಟೆಂಡರೋತ್ತರ ಅನುಕೂಲ ಮಾಡಿಕೊಡುವ ಮೂಲಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ

* ಅಬಕಾರಿ ಸನ್ನದುದಾರರು ನೀಡಬೇಕಿದ್ದ ₹144.36 ಕೋಟಿ ಪರವಾನಗಿ ಶುಲ್ಕವನ್ನು ಕೋವಿಡ್‌–19 ಸಾಂಕ್ರಾಮಿಕದ ನೆಪದಲ್ಲಿ ಮನ್ನಾ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ

* ‘ವಿಮಾನ ನಿಲ್ದಾಣ ವಲಯ’ದಲ್ಲಿ ಮದ್ಯ ಮಾರಾಟ ಮಾಡಲು ಪರವಾನಗಿ ಪಡೆದಿದ್ದವರು ಸರ್ಕಾರಕ್ಕೆ ಪಾವತಿಸಿದ್ದ ₹30 ಕೋಟಿ ಶುಲ್ಕವನ್ನು ವಾಪಸ್‌ ಮಾಡಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯಲು ವಿಫಲವಾದ ಕಾರಣವನ್ನು ನೀಡಿ, ಶುಲ್ಕವನ್ನು ಹಿಂತಿರುಗಿಸಲಾಗಿದೆ. ಆದರೆ ದೆಹಲಿ ಅಬಕಾರಿ ನಿಯಮಗಳ ಪ್ರಕಾರ ಒಮ್ಮೆ ಪಾವತಿಸಿದ್ದ ಶುಲ್ಕವನ್ನು ವಾಪಸ್ ಮಾಡಲು ಅವಕಾಶವಿಲ್ಲ. ಈ ನಿಯಮವನ್ನು ಉಲ್ಲಂಘಿಸಲಾಗಿದೆ

* ಆಮದು ಮಾಡಿಕೊಳ್ಳಲಾದ ಬಿಯರ್‌ಗಳ ಪ್ರತಿ ಕೇಸ್‌ನ ಮೇಲೆ ವಿಧಿಸಲಾಗುತ್ತಿದ್ದ ₹50ರ ‘ಆಮದು ಪಾಸ್‌ ಶುಲ್ಕ’ವನ್ನು ಅಬಕಾರಿ ಇಲಾಖೆಯು ರದ್ದುಪಡಿಸಿದೆ. ಇದರಿಂದ ಮಾರಾಟಗಾರರಿಗೆ ಹೆಚ್ಚು ಲಾಭವಾಗುತ್ತಿದೆ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇಂತಹ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವಾಗ ಸಂಬಂಧಿತ ಪ್ರಾಧಿಕಾರದ ಅನುಮತಿಯನ್ನು ಅಬಕಾರಿ ಇಲಾಖೆಯು ಪಡೆದುಕೊಂಡಿಲ್ಲ

* ಮದ್ಯ ಮಾರಾಟ ಪರವಾನಗಿ ನೀಡುವಾಗ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಟೆಂಡರ್‌ನಲ್ಲಿ ಹಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇದರಿಂದ ಮಾರಾಟಗಾರರಿಗೆ ಅನುಕೂಲವಾಗಿದೆ

* ದೆಹಲಿಯಲ್ಲಿ ಮದ್ಯ ಮಾರಾಟದ 32 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಕಂಪನಿಗಳಿಗೆ, ಇಂತಹ ಎರಡು ವಲಯಗಳನ್ನು ಹಂಚಿಕೆ ಮಾಡಲಾಗಿದೆ

* ಅಬಕಾರಿ ಇಲಾಖೆಯು ತೆಗೆದುಕೊಂಡ ಕೆಲವು ಕಾನೂನುಬಾಹಿರ ನಿರ್ಧಾರಗಳಿಗೆ ಸಚಿವ ಸಂಪುಟದ ಒಪ್ಪಿಗೆಯನ್ನು ಘಟನೋತ್ತರವಾಗಿ ಪಡೆದುಕೊಳ್ಳಲಾಗಿದೆ. ಇದೂ ಅಕ್ರಮ

ಬಿಜೆಪಿ ಪರವಾಗಿ ಎಲ್‌.ಜಿ ಕೆಲಸ: ಎಎಪಿ

‘ಸುಳ್ಳು ಪ್ರಕರಣದಲ್ಲಿ ಮನೀಷ್ಸಿಸೋಡಿಯಾ ಅವರನ್ನು ಕೇಂದ್ರ ಸರ್ಕಾರವು ಕೆಲವೇ ದಿನಗಳಲ್ಲಿ ಬಂಧಿಸಲಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ. ಸಿಸೋಡಿಯಾ ಅವರು ಅತ್ಯಂತ ಪ್ರಾಮಾಣಿಕ ಮತ್ತು ದೇಶಭಕ್ತ ವ್ಯಕ್ತಿ ಎಂದಿದ್ದಾರೆ.

ಅಬಕಾರಿ ನೀತಿ ಅನುಷ್ಠಾನದ ತನಿಖೆ ನಡೆಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ಸಿಬಿಐಗೆ ಶಿಫಾರಸು ಮಾಡಿದ ಬೆನ್ನಲ್ಲೇ, ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಮನೀಷ್ ಸಿಸೋಡಿಯಾ ವಿರುದ್ಧ ಒಂದು ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅವರನ್ನು ಸಿಬಿಐ ಬಂಧಿಸಲಿದೆ. ಇದೊಂದು ಸುಳ್ಳು ಪ್ರಕರಣ. ಈ ಪ್ರಕರಣದಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ. ಸಿಸೋಡಿಯಾ ಅವರನ್ನು 22 ವರ್ಷಗಳಿಂದ ಬಲ್ಲೆ. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ.ನ್ಯಾಯಾಲಯದಲ್ಲಿ ಈ ಪ್ರಕರಣ ನಿಲ್ಲುವುದಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಎಎಪಿ ಸಚಿವರಲ್ಲಿ ಯಾರೊಬ್ಬರೂ ತಪ್ಪು ಮಾಡಿಲ್ಲ, ಹಾಗಾಗಿಯೇ ಜೈಲಿಗೆ ಹೋಗಲು ಯಾರಿಗೂ ಭಯ ಇಲ್ಲ ಎಂದೂ ಅವರು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಿನ್ಹಾ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.

‘ದೆಹಲಿ ಸರ್ಕಾರದ ಎಲ್ಲಾ ಸಚಿವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಬಿಜೆಪಿಯ ಗುರಿ ಆಗಿದೆ’ ಎಂದು ಎಎಪಿ ಮುಖ್ಯ ವಕ್ತಾರ ಸೌರವ್ ಭಾರದ್ವಾಜ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT