ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಲೋಪಗಳಿಂದ ಅತ್ಯಾಚಾರಿಗಳಿಗೆ ಜಾಮೀನು ಸಿಗುತ್ತಿದೆ: ತೆಲಂಗಾಣ ಸಚಿವ ಕೆಟಿಆರ್

Last Updated 19 ಆಗಸ್ಟ್ 2022, 13:24 IST
ಅಕ್ಷರ ಗಾತ್ರ

ಹೈದರಾಬಾದ್‌: ಕಾನೂನು ವ್ಯವಸ್ಥೆಗಳಲ್ಲಿರುವ ಲೋಪದೋಷಗಳಿಂದ ಅತ್ಯಾಚಾರಿಗಳಿಗೆ ಜಾಮೀನು ಸಿಗುತ್ತಿದೆ ಎಂದು ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮ ರಾವ್‌ ಆರೋಪಿಸಿದ್ದಾರೆ.

'ಬಾಲ ನ್ಯಾಯ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ನಡಾವಳಿ ಸಂಹಿತೆ (ಸಿಆರ್‌ಪಿಸಿ) ಗಳಲ್ಲಿರುವ ಲೋಪದೋಷಗಳಿಂದ ಅತ್ಯಾಚಾರಿಗಳಿಗೆ ಜಾಮೀನು ಸಿಗುತ್ತಿದೆ. ಆದ್ದರಿಂದ ಈ ಕಾಯ್ದೆಗಳನ್ನು ತಿದ್ದುಪಡಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದೇನೆ. ಇದರಿಂದ ಯಾವೊಬ್ಬ ಅತ್ಯಾಚಾರಿಗೂ ಜಾಮೀನು ಸಿಗುವುದಿಲ್ಲ. ಸಾಯುವ ವರೆಗೆ ಜೈಲು ಶಿಕ್ಷೆ ಅನುಭವಿಸುವಂತಾಗುತ್ತದೆ' ಎಂದು ಕೆ.ಟಿ. ರಾಮ ರಾವ್‌ ಟ್ವೀಟ್‌ ಮಾಡಿದ್ದಾರೆ.

ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಮಂದಿ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿರುವ ರಾಮ ರಾವ್‌, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಮತ್ತು ಗುಜರಾತ್‌ ಸರ್ಕಾರದ ನಿರ್ಧಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದರು.

ಇದರ ಬೆನ್ನಲ್ಲೇ, ಜುಬ್ಲಿ ಹಿಲ್ಸ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವ ಬಗೆಗಿನ ಆರೋಪಕ್ಕೆ ರಾಮ ರಾವ್‌ ಪ್ರತಿಕ್ರಿಯಿಸಿದ್ದಾರೆ. ಅತ್ಯಾಚಾರಿಗಳನ್ನು ಶೀಘ್ರವಾಗಿ ಬಂಧಿಸಲಾಗಿದೆ ಮತ್ತು ಜೈಲಿಗೆ ಹಾಕಲಾಗಿದೆ ಎಂದಿದ್ದಾರೆ.

'ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಸರ್ಕಾರ ಏನು ಮಾಡಿದೆ ಎಂದು ಟ್ರೋಲ್‌ ಮಾಡುತ್ತಿರುವವರಿಗೆ ಉತ್ತರವಿದು. ಅತ್ಯಾಚಾರಿಗಳನ್ನು ಶೀಘ್ರದಲ್ಲೇ ಬಂಧಿಸಲಾಗಿದೆ ಮತ್ತು ಜೈಲಿಗೆ ಕಳುಹಿಸಲಾಗಿದೆ. ಬಳಿಕ 45 ದಿನಗಳಲ್ಲಿ ಹೈಕೋರ್ಟ್‌ ಅವರಿಗೆ ಜಾಮೀನು ನೀಡಿದೆ. ಅತ್ಯಾಚಾರಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವ ವರೆಗೆ ಹೋರಾಟ ಮಾಡುತ್ತೇವೆ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮೇ 28ರಂದು ಪಬ್‌ ಒಂದಕ್ಕೆ ಭೇಟಿ ನೀಡಿ ವಾಪಸ್‌ ಆಗುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ವಾಹನದಲ್ಲಿ ಲೈಂಗಿಕ ಶೋಷಣೆ ನಡೆದಿದ್ದು. 18 ವರ್ಷದ ಹುಡುಗನು ಸೇರಿದಂತೆ ಐವರು ಅಪ್ರಾಪ್ತ ವಯಸ್ಸಿನ ಆರೋಪಿಗಳು ಆಕೆಯನ್ನು ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದು ಕೃತ್ಯ ಎಸಗಿದ್ದರು. ಇದೀಗ 6 ಮಂದಿ ಆರೋಪಿಗಳು ಜಾಮೀನು ಪಡೆದು ಹೊರಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT