ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ; ಬಾಳಾ ಠಾಕ್ರೆ ಹೇಳಿದ್ದೇನು?–ರಾಜ್ ವಿಡಿಯೊ ಟ್ವೀಟ್

ಅಕ್ಷರ ಗಾತ್ರ

ಮುಂಬೈ: ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸಿದ್ದ ರಾಜ್‌ ಠಾಕ್ರೆ, ಅದಕ್ಕೆ ಮೇ 3 ಕೊನೆಯ ದಿನವೆಂದು ಸಾರಿದ್ದರು. ಅದು ಸಾಧ್ಯವಾಗದಿದ್ದರೆ, ಮಸೀದಿಗಳ ಎದುರು ಹನುಮಾನ್‌ ಚಾಲೀಸಾ ಪಠಣ ಆರಂಭಿಸುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ಈ ನಡುವೆ ರಾಜ್‌ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ತಂದೆ ಬಾಳಾಸಾಹೇಬ್‌ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರ ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

36 ಸೆಕೆಂಡ್‌ಗಳ ವಿಡಿಯೊದಲ್ಲಿ ಬಾಳಾ ಠಾಕ್ರೆ, ಧ್ವನಿವರ್ಧಕಗಳ ಬಳಕೆ ವಿರುದ್ಧ ಎಚ್ಚರಿಕೆ ನೀಡಿರುವುದು ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಸ್ತೆಗಳಲ್ಲಿ ನಮಾಜ್‌ ಮಾಡುವುದನ್ನು ತಡೆಯಲಾಗುತ್ತದೆ ಎಂದಿರುವುದನ್ನು ಕೇಳಬಹುದು.

14 ವರ್ಷಗಳ ಹಿಂದಿನ ಪ್ರಕರಣದ ಸಂಬಂಧ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೋರ್ಟ್‌ವೊಂದು ರಾಜ್‌ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. ಮುಂಬೈ ಪೊಲೀಸರು ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಿಆರ್‌ಪಿಸಿ ಸೆಕ್ಷನ್‌ ಅಡಿಯಲ್ಲಿ ಠಾಕ್ರೆ ಹಾಗೂ ನೂರಾರು ಮಂದಿಗೆ ನೋಟಿಸ್‌ ನೀಡಿದ್ದಾರೆ. ಇದರೊಂದಿಗೆ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ಔರಂಗಾಬಾದ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅದರ ಬೆನ್ನಲ್ಲೇ ರಾಜ್‌ ಠಾಕ್ರೆ ಅವರ ಮುಂಬೈ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.

ಇಂದು ಬೆಳಿಗ್ಗೆ 5 ಗಂಟೆಯ ಆಜಾನ್‌ ಸಮಯದಲ್ಲಿ ಕಟ್ಟಡ ಮೇಲಿಂದ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸಾ ಕೇಳುವಂತೆ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹರಿದಾಡುತ್ತಿರುವುದಾಗಿ ವರದಿಯಾಗಿದೆ.

ಪುಣೆಯ ಪುಣೇಶ್ವರ ಹನುಮಾನ್‌ ದೇವಾಲಯದಲ್ಲಿ 'ಮಹಾ ಆರತಿ' ನಡೆಸುವುದಾಗಿ ಎಂಎನ್‌ಎಸ್‌ ಪ್ರಕಟಿಸಿರುವ ಹಿನ್ನೆಲೆ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ, ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯಬೇಕು. ಇಲ್ಲದಿದ್ದರೆ ಮಸೀದಿಗಳ ಎದುರು ಹನುಮಾನ್‌ ಚಾಲೀಸಾ ಪಠಣ ಆರಂಭಿಸುವಂತೆ ಕರೆ ನೀಡಿದ್ದರು. ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸಿ ನೀಡಿದ್ದ ಗಡುವು ಕೊನೆಯಾಗಿರುವುದರಿಂದ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರವಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಆಜಾನ್‌–ಹನುಮಾನ್‌ ಚಾಲೀಸಾ ವಿವಾದ

* ಏಪ್ರಿಲ್‌ 2: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯದಿದ್ದರೆ ಅವುಗಳಲ್ಲಿ ಹನುಮಾನ್‌ ಚಾಲೀಸಾ ಹಾಕಲಾಗುತ್ತದೆ ಎಂದ ಎಂಎನ್‌ಎಸ್‌.

* ಏಪ್ರಿಲ್‌ 13: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯಲು ಮೇ 3ರ ಗಡಿ ನೀಡಿದ ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ.

* ಧಾರ್ಮಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆಯೇ ಧ್ವನಿವರ್ಧಕಗಳ ಬಳಕೆಯನ್ನು ನಾಸಿಕ್‌ ಪೊಲೀಸರು ನಿರ್ಬಂಧಿಸಿದರು. ಆಜಾನ್‌ ಕೂಗಿದ 15 ನಿಮಿಷಗಳ ಒಳಗೆ ಅಥವಾ ಅದಕ್ಕಿಂತ 15 ನಿಮಿಷ ಮುಂಚೆ ಹನುಮಾನ್‌ ಚಾಲೀಸಾ ಪಠಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದರು.

* ಮಹಾರಾಷ್ಟ್ರದ ಗೃಹ ಇಲಾಖೆ ಸಹ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯಲು ಮೇ 3ರ ಗಡಿ ನಿಗದಿ ಮಾಡಿತ್ತು.

* ಮೇ 1ರಂದು ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಬೃಹತ್‌ ರ್‍ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದ ರಾಜ್‌ ಠಾಕ್ರೆ, ಬುಧವಾರದೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯದಿದ್ದರೆ, ಆ ಧ್ವನಿವರ್ಧಕಗಳಲ್ಲಿ ಎರಡು ಪಟ್ಟು ಜೋರಾಗಿ ಹನುಮಾನ್‌ ಚಾಲೀಸಾ ಕೇಳುವಂತೆ ಮಾಡುವುದಾಗಿ ಘೋಷಿಸಿದ್ದರು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಮಂಗಳವಾರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

* ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಿಸುವುದಾಗಿ ಘೋಷಿಸಿ ಬಂಧನಕ್ಕೆ ಒಳಗಾಗಿದ್ದ ಸಂಸದೆ ನವನೀತ್‌ ರಾಣಾ ಮತ್ತು ಶಾಸಕ ರವಿ ರಾಣಾ ಅವರನ್ನು ಮುಂಬೈ ಕೋರ್ಟ್‌ ಮೇ 6ರ ವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಏಪ್ರಿಲ್‌ 23ರಂದು ದಂಪತಿಯನ್ನು ಪೊಲೀಸರು ಬಂಧಿಸಿದ್ದರು. ದೇಶದ್ರೋಹ ಕಾಯ್ದೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

* ಹನುಮಾನ್‌ ಚಾಲೀಸಾ ಪಠಿಸುವುದು ಸಮಸ್ಯೆ ಅಲ್ಲ, ಆದರೆ 'ದಾದಾಗಿರಿ' ನಡೆಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಏಪ್ರಿಲ್‌ 25ರಂದು ಎಚ್ಚರಿಕೆ ನೀಡಿದ್ದರು.

* ಮೇ 3ರಂದು ಈದ್‌ ಆಚರಣೆ ಇರುವುದರಿಂದ ಅದಕ್ಕೆ ಅಡಚಣೆಯಾಗುವಂತಹ ಯಾವುದೇ ಕ್ರಮವಹಿಸದಂತೆ ಪಕ್ಷದ ಕಾರ್ಯಕರ್ತರಿಗೆ ರಾಕ್‌ ಠಾಕ್ರೆ ಮೇ 2ರಂದು ಮನವಿ ಮಾಡಿದ್ದರು. ಆರತಿ ಬೆಳಗುವುದು ಅಥವಾ ಇನ್ನಾವುದೇ ರೀತಿಯ ಆಚರಣೆಗಳನ್ನು ನಡೆಸದಂತೆ ಸೂಚಿಸಿದ್ದರು.

* ರಾಜ್‌ ಠಾಕ್ರೆ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಮುಂಬೈನ ಅವರ ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಸಿಆರ್‌ಪಿಸಿ 149ರ ಅಡಿಯಲ್ಲಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

* ಬುಧವಾರ ಧ್ವನಿವರ್ಧಕಗಳ ಮೂಲಕ ಆಜಾದ್‌ ಕೇಳಿಬಂದರೆ, ಅಲ್ಲಿ ಹನುಮಾನ್‌ ಚಾಲೀಸಾ ಕೇಳಿಸುವಂತೆ ಮಾಡಲು ರಾಜ್ ಠಾಕ್ರೆ ಮಂಗಳವಾರ ಮತ್ತೆ ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT