ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ಒಡಿಶಾ ಕರಾವಳಿಯತ್ತ ಇಂದು ಚಂಡಮಾರುತ ‘ಜವಾದ್‌’

Last Updated 3 ಡಿಸೆಂಬರ್ 2021, 19:20 IST
ಅಕ್ಷರ ಗಾತ್ರ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಚಂಡಮಾರುತ ‘ಜವಾದ್’ ತೀವ್ರಗೊಳ್ಳುತ್ತಿದ್ದು, ಶನಿವಾರ ಬೆಳಿಗ್ಗೆ ವೇಳೆಗೆ ಬಂಗಾಳಕೊಲ್ಲಿಯ ಪಶ್ಚಿಮದ ಕೇಂದ್ರ ಭಾಗ ಅಂದರೆ ಆಂಧ್ರಪ್ರದೇಶ, ಒಡಿಶಾದ ಕರಾವಳಿ ತೀರವನ್ನು ತಲುಪಲಿದೆ.

ಭಾರತೀಯ ಹವಾಮಾನ ಇಲಾಖೆ ಈ ವಿವರ ನೀಡಿದ್ದು, ಚಂಡಮಾರುತವು ತದನಂತರ ಒಡಿಶಾ, ಆಂಧ್ರಪ್ರದೇಶದ ಕರಾವಳಿಗೆ ಹೊಂದಿಕೊಂಡಂತೆ ಈಶಾನ್ಯ ದಿಕ್ಕಿನೆಡೆಗೆ ಸಾಗಲಿದೆ. ಡಿ.5ರ ವೇಳೆಗೆ ಪುರಿ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದೆ. ‘ಜವಾದ್‌’ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದ ದಕ್ಷಿಣ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಲಿದೆ. ಶನಿವಾರ ಮಳೆಯ ತೀವ್ರತೆಯೂ ಹೆಚ್ಚಿರಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮುಂಜಾಗ್ರತೆಯಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ ಜಿಲ್ಲೆಗಳು ಮತ್ತು ಒಡಿಶಾದ ಗಜಪತಿ, ಗಂಜಾಂ, ಪುರಿ, ಜಗತ್ತ್ಸಿಂಗ್‌ಪುರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೆಡ್‌ ಅಲರ್ಟ್‌ ನೀಡಲಾಗಿದೆ ಎಂದು ತಿಳಿಸಿದೆ.

ಎನ್‌ಡಿಆರ್‌ಎಫ್‌ನ 64 ತಂಡಗಳು ಸಜ್ಜು

ನವದೆಹಲಿ (ಪಿಟಿಐ): ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ‘ಜವಾದ್’ ಚಂಡಮಾರುತದ ಸಂಭವನೀಯ ಪರಿಣಾಮಗಳನ್ನು ಎದುರಿಸಲು ಎನ್‌ಡಿಆರ್‌ಎಫ್‌ ಒಟ್ಟು 64 ತಂಡಗಳನ್ನು ಸಜ್ಜುಗೊಳಿಸಿದೆ. ಎನ್‌ಡಿಆರ್‌ಎಫ್‌ ಮಹಾ ನಿರ್ದೇಶಕ (ಡಿ.ಜಿ) ಅತುಲ್‌ ಕರ‍್ವಾಲ್ ಅವರು, ಪರಿಣಾಮ ಉಂಟಾಗಬಹುದಾದ ರಾಜ್ಯಗಳಲ್ಲಿ ಪರಿಹಾರ ಕಾರ್ಯಗಳಿಗೆ 46 ತಂಡಗಳನ್ನು ನಿಯೋಜಿಸಿದ್ದು, 18 ತಂಡಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ ಎಂದರು.

ಎನ್‌ಡಿಆರ್‌ಎಫ್‌ನ ಪ್ರತಿ ತುಕಡಿಯಲ್ಲಿ 30 ಸಿಬ್ಬಂದಿ ಇರಲಿದ್ದು, ವಿದ್ಯುತ್ ಚಾಲಿತ ಗರಗಸ, ಮರ ಕಡಿಯುವ ಪರಿಕರಗಳು, ದೋಣಿ ಹಾಗೂ ಇತರೆ ಪರಿಹಾರ ಸಾಮಗ್ರಿಗಳ ಜೊತೆಗೆ ಸಜ್ಜಾಗಿರಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT