ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಲಕ್ಕಿ ಡ್ರಾ ಯೋಜನೆ: ಕೇಂದ್ರದ ಚಿಂತನೆ

Last Updated 22 ನವೆಂಬರ್ 2021, 4:24 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಲಸಿಕೆ ಪಡೆಯುವಂತೆ ಜನರನ್ನು ಉತ್ತೇಜಿಸುವ ಸಲುವಾಗಿ ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದವರಿಗೆ ಲಕ್ಕಿ ಡ್ರಾ ಯೋಜನೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಲಕ್ಕಿ ಡ್ರಾ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಚೇರಿಗಳಲ್ಲಿ ಲಸಿಕೆ ನೀಡಿಕೆ ಅಭಿಯಾನ ನಡೆಸುವುದು, ಲಸಿಕೆ ಪಡೆದುಕೊಂಡ ಉದ್ಯೋಗಿಗಳಿಗೆ ಬ್ಯಾಡ್ಜ್ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಈಗಾಗಲೇ ಹಮ್ಮಿಕೊಂಡಿದೆ. ಇಂಥದ್ದೇ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಶೀಘ್ರದಲ್ಲೇ ಸೂಚಿಸುವ ನಿರೀಕ್ಷೆ ಇದೆ.

ಜಿಲ್ಲೆ ಮತ್ತು ಗ್ರಾಮಗಳ ಮಟ್ಟದಲ್ಲಿ ಲಸಿಕೆ ಪಡೆದ ಪ್ರಭಾವಿ ವ್ಯಕ್ತಿಗಳ ಮೂಲಕ ಇತರರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಅಂಥ ಪ್ರಭಾವಿ ವ್ಯಕ್ತಿಗಳನ್ನು ‘ಹರ್ ಘರ್ ದಸ್ತಕ್ (ಮನೆ ಮನೆ ಲಸಿಕಾ ಅಭಿಯಾನ)’ ಕಾರ್ಯಕ್ರಮದಡಿ ರಾಯಭಾರಿಗಳನ್ನಾಗಿ ನೇಮಕ ಮಾಡಲಾಗುತ್ತದೆ. ಅವರು ಎರಡೂ ಡೋಸ್ ಲಸಿಕೆ ಪಡೆಯುವುದರ ಪ್ರಯೋಜನದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲಿದ್ದಾರೆ.

ಇನ್ನೂ ಮೊದಲ ಡೋಸ್ ಲಸಿಕೆ ಪಡೆಯದವರು ಮತ್ತು ಎರಡನೇ ಡೋಸ್ ಪಡೆಯಬೇಕಿದ್ದವರ ಮನೆ–ಮನೆಗಳಿಗೆ ತೆರಳಿ ಲಸಿಕೆ ನೀಡಲು ‘ಹರ್ ಘರ್ ದಸ್ತಕ್’ ಎಂಬ ಅಭಿಯಾನವನ್ನು ಸರ್ಕಾರ ಈಗಾಗಲೇ ಆರಂಭಿಸಿದೆ.

ಲಸಿಕೆ ಪಡೆದ ಉದ್ಯೋಗಿಗಳನ್ನು ಮುಂದಿಟ್ಟುಕೊಂಡು ಕಚೇರಿ ಮಟ್ಟದಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಬಹುದು. ಲಸಿಕೆ ಪಡೆದಿರುವ ಖಾಸಗಿ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ‘ನಾನು ಸಂಪೂರ್ಣವಾಗಿ ಲಸಿಕೆ ಪಡೆದಿದ್ದೇನೆ, ನೀವೂ ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದೀರಾ’ ಎಂಬ ಸಂದೇಶವುಳ್ಳ ಬ್ಯಾಡ್ಜ್ ನೀಡಿ ಇತರರನ್ನು ಉತ್ತೇಜಿಸುವಂತೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT