ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಪ್ರವಾಹ: ಪರಿಹಾರ ಕ್ರಮಗಳಿಗಾಗಿ ಕಾರ್ಯಪಡೆ ರಚನೆ

Last Updated 9 ಆಗಸ್ಟ್ 2021, 5:57 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಪ್ರವಾಹ ‍ಪೀಡಿತ ಪ್ರದೇಶಗಳಲ್ಲಿ ಜನರಿಗೆ ನೆರವು ಒದಗಿಸಲು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಹಲವು ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಅಲ್ಲದೆ ಈ ಪರಿಹಾರ ಕಾರ್ಯಗಳ ಮೇಲೆ ನಿಗಾಯಿಡಲು ಸಂಪುಟದ12 ಸಚಿವರುಗಳನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿದ್ದಾರೆ.

‘ಪ್ರವಾಹದಲ್ಲಿಮೃತಪಟ್ಟವರ ಪರವಾಗಿ ಸಂತ್ರಸ್ತ ಕುಟುಂಬಗಳಿಗೆ ತಲಾ ₹4 ಲಕ್ಷ ಆರ್ಥಿಕ ನೆರವು ನೀಡಲಾಗುವುದು’ ಎಂದು ಚೌಹಾಣ್‌ ಅವರು ಭಾನುವಾರ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಪ್ರವಾಹ ಪೀಡಿತ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ 8,900 ಮಂದಿಯನ್ನು ವಾಯುಪಡೆ, ಸೇನೆ, ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ರಕ್ಷಿಸಿದೆ. 32,900 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕಾರ್ಯಗಳ ಮೇಲೆ ನಿಗಾಯಿಡಲು ಪ್ರಮುಖ ಇಲಾಖೆಯ ಅಧಿಕಾರಿಗಳು ಮತ್ತು ಸಂಪುಟ ಸಚಿವರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿದ್ದೇನೆ. ನಾನು ಸ್ವತಃ ಪುನರ್ವಸತಿ ಮತ್ತು ದುರಸ್ತಿ ಕಾಮಗಾರಿಗಳ ಮೇಲೆ ಗಮನವಹಿಸುತ್ತೇನೆ’ ಎಂದು ಚೌಹಾಣ್‌ ತಿಳಿಸಿದರು.

‘ಪ್ರವಾಹದಿಂದ ತೊಂದರೆಗೆ ಸಿಲುಕಿದ ಕುಟುಂಬಗಳಿಗೆ ‍ಪಡಿತರದೊಂದಿಗೆ ಹೆಚ್ಚುವರಿಯಾಗಿ 50 ಕೆ.ಜಿ ಆಹಾರ ಧಾನ್ಯಗಳನ್ನು ನೀಡಲಾಗುವುದು. ಜತೆಗೆ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಲು ತಕ್ಷಣದ ಪರಿಹಾರ ರೂಪದಲ್ಲಿ ₹6,000 ನೀಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ಬಳಿಕ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೂ ರಾಜ್ಯ ಸರ್ಕಾರ ಸಹಾಯವನ್ನು ನೀಡಲಿದೆ. ಅಲ್ಲದೆ ಪ್ರವಾಹದಲ್ಲಿ ನಾಶಗೊಂಡ ಮನೆಗಳ ನಿರ್ಮಾಣಕ್ಕಾಗಿ ಆರ್ಥಿಕ ನೆರವನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಪ್ರವಾಹದಲ್ಲಿ ಜಾನುವಾರುಗಳನ್ನು ಕಳೆದುಕೊಂಡವರಿಗೆ ₹ 25,000 ನೀಡಲಾಗುವುದು. ಜತೆಗೆ ಬೆಳೆ ಹಾನಿಗೂ ಪರಿಹಾರವನ್ನು ಕಲ್ಪಿಸಲಾಗುವುದು’ ಎಂದು ಅವರು ಹೇಳಿದರು.

ಈ ನಡುವೆ ಮಧ್ಯಪ್ರದೇಶದ ಕಾಂಗ್ರೆಸ್‌ ಮುಖ್ಯಸ್ಥ ಕಮಲ್ ನಾಥ್ ಅವರು,‘ ರಾಜ್ಯದಲ್ಲಿ ‍ಪ್ರವಾಹದಿಂದಾಗಿ ತೊಂದರೆ ಅನುಭವಿಸಿದವರಿಗೆ ಪರಿಹಾರ ಒದಗಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ’ ಎಂದು ದೂರಿದ್ದಾರೆ.

ಕಾಂಗ್ರೆಸ್‌ ಶಾಸಕರೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು,‘ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರೂ ಸರ್ಕಾರವೇಕೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT