ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವಸಂಸ್ಕಾರಕ್ಕೆ ಪರದಾಡುವ ಕುಟುಂಬಗಳಿಗೆ ‘ಎಕೊ ಫ್ರೆಂಡ್ಲಿ‘ ಆಸರೆ !

ಪುಣೆಯ ಇಎಫ್‌ಎಲ್‌ಎಫ್‌ ಸಂಘಟನೆಯ ಸಾಮಾಜಿಕ ಕಳಕಳಿ
Last Updated 28 ಏಪ್ರಿಲ್ 2021, 7:57 IST
ಅಕ್ಷರ ಗಾತ್ರ

ನಾಗಪುರ (ಪಿಟಿಐ): ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸಹಜವಾಗಿ ಸತ್ತರೂ ಆ ಶವವನ್ನು ಸಂಸ್ಕಾರ ಮಾಡಲು ಜನ ಬಾರದಿರುವ ಪರಿಸ್ಥಿತಿ ಇದೆ. ಇನ್ನು ಕೋವಿಡ್‌ನಿಂದಲೇ ಸಾವು ಸಂಭವಿಸಿದರೆ, ಮುಗಿದೇ ಹೋಯಿತು. ಆ ಶವ ಅಕ್ಷರಶಃ ಅನಾಥವಾಗುತ್ತದೆ !

ಸೋಂಕಿನ ಭಯದ ಜತೆಗೆ, ಆಚಾರ–ವಿಚಾರ–ಸಂಪ್ರದಾಯದಂತಹ ತಡೆಗೋಡೆಗಳಿಂದಾಗಿ ಅನೇಕರು ಶವಸಂಸ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ. ಹೀಗಾಗಿ ಎಲ್ಲರೂ ಇದ್ದು ಸತ್ತ ವ್ಯಕ್ತಿಗಳು ‘ಅನಾಥ ಶವ‘ವಾಗುವ ಪರಿಸ್ಥಿತಿ ಬಂದೊದಗಿದೆ.

ಇಂಥ ಸಂಕಷ್ಟದ ಸಂದರ್ಭದಲ್ಲಿ ಪುಣೆಯ ಎಕೊ ಫ್ರೆಂಡ್ಲಿ ಲಿವಿಂಗ್‌ ಫೌಂಡೇಷನ್‌(ಇಎಫ್‌ಎಲ್ಎಫ್‌) ಸಂಘ ಟನೆಶವಸಂಸ್ಕಾರಕ್ಕಾಗಿ ಪರದಾಡುವ ಕುಟುಂಬಗಳಿಗೆ ಆಸರೆಯಾಗುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದೆ. ಈ ಸಂಘಟನೆಯ ಸದಸ್ಯರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ.

ಶವಸಾಗಿಸುವುದರಿಂದ ಹಿಡಿದು ಚಿತಾಗಾರಕ್ಕೆ ಕೊಂಡೊಯ್ದು, ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ರಕ್ತಸಂಬಂಧಿಗಳಲ್ಲದಿದ್ದರೂ, ಕುಟುಂಬ ಸದಸ್ಯರ ಜಾಗದಲ್ಲಿ ನಿಂತು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರು, ಸಹಜವಾಗಿ ಸಾವನ್ನಪ್ಪಿದವರು, ಆರ್ಥಿಕ ಸಂಕಷ್ಟದಿಂದಲೋ, ಜನರ ಬೆಂಬಲವಿಲ್ಲದೆಯೋ ಶವಸಂಸ್ಕಾರ ಮಾಡಲಾಗದೇ ಪರಿತಪಿಸುತ್ತಿರುವ ಸಣ್ಣ–ಪುಟ್ಟ ಕುಟುಂಬಗಳಿಗೆ ಇವರು ಆಸರೆಯಾಗುತ್ತಿದ್ದಾರೆ.

ಪರಿಸರ ಸ್ನೇಹಿ ಶವಸಂಸ್ಕಾರ :

ವಿಜಯ್‌ ಲಿಮಯೆ, ಈ ಸಂಘಟನೆಯನ್ನು ಮುನ್ನಡೆಸುತ್ತಿರುವ ವ್ಯಕ್ತಿ. ‘ನಮ್ಮ ಸಂಘಟನೆ ಸಂಕಷ್ಟದಲ್ಲಿದ್ದವರಿಗೆ ಶವಸಂಸ್ಕಾರಕ್ಕೆ ನೆರವಾಗುವುದರ ಜತೆಗೆ, ನಾಗಪುರದ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಸಿ) ಸಹಯೋಗದೊಂದಿಗೆ ಪರಿಸರ ಸ್ನೇಹಿ ಶವಸಂಸ್ಕಾರವನ್ನು ಉತ್ತೇಜಿಸುತ್ತಿದೆ. ಸದ್ಯ ನಾಗಪುರ ನಗರದ ಆರು ಚಿತಾಗಾರಗಳಲ್ಲಿ ಈ ರೀತಿ ಪರಿಸರ ಸ್ನೇಹಿ ಶವಸಂಸ್ಕಾರ ನಡೆಸುತ್ತಿದೆ‘ ಎನ್ನುತ್ತಾರೆ ಅವರು.

‘ಶವ ಸಂಸ್ಕಾರಕ್ಕೆ ಮರದ ತುಂಡು/ ಕಟ್ಟಿಗೆಗಳ ಬದಲಿಗೆ ಕೃಷಿ ತ್ಯಾಜ್ಯ ಮತ್ತು ಬೆಳೆಯ ಉಳಿಕೆಗಳಿಂದ ತಯಾರಿಸಿದ ಬ್ರಿಕೆಟ್‌ಗಳನ್ನು(ಕಟ್ಟಿಗೆ ರೂಪದ ವಸ್ತು) ಬಳಸುತ್ತೇವೆ. ಈ ಮೂಲಕ ಪರಿಸರ ಸ್ನೇಹಿ ಶವಸಂಸ್ಕಾರವನ್ನು ಉತ್ತೇಜಿಸುತ್ತಿದ್ದೇವೆ‘ ಎನ್ನುತ್ತಾರೆ ವಿಜಯ್.

‘ಕೆಲವರ ಮನೆಗಳಲ್ಲಿ ಶವಸಂಸ್ಕಾರ ಮಾಡಲು ಜನರೇ ಇರುವುದಿಲ್ಲ. ಅಂಥವರ ಮನೆಯವರು ಕರೆ ಮಾಡುತ್ತಾರೆ. ಆಗ ನಮ್ಮ ತಂಡದ ಸದಸ್ಯರು ಅವರ ಮನೆಗೆ ತೆರಳಿ, ಶವವನ್ನು ಚಿತಾಗಾರಕ್ಕೆ ಸಾಗಿಸಿ, ರಕ್ತಸಂಬಂಧಿಗಳ ಅನುಪಸ್ಥಿತಿಯಲ್ಲಿ ಅಂತಿ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಸಂಕಷ್ಟದಲ್ಲಿರುವ ಕುಟುಂಬಗಳೊಂದಿಗೆ ನಮ್ಮ ತಂಡದವರು ಆತ್ಮೀಯರಾಗಿ, ಬಂಧುಗಳಾಗಿ ಮೃತರ ಅಂತ್ಯಕ್ರಿಯೆ ನೆರವೇರಿಸಲು ಸಹಾಯ ಮಾಡುತ್ತಿದ್ದಾರೆ. ನಿತ್ಯ ಇಂಥ ಹಲವು ಕರೆಗಳು ನಮ್ಮ ಪ್ರತಿಷ್ಠಾನಕ್ಕೆ ಬರುತ್ತವೆ‘ ಎಂದು ವಿಜಯ್ ಸುದ್ದಿ ಸಂಸ್ಥೆಗೆ ವಿವರಿಸಿದರು.

ಇತ್ತೀಚೆಗೆ ನಡೆದ ಘಟನೆಗಳು :

‘ಮೊನ್ನೆ ಒಬ್ಬರು ತೀರಿಕೊಂಡರು. ಅದು ಕೋವಿಡ್‌ನಿಂದಾದ ಸಾವಲ್ಲ. ಆದರೂ ಆ ವ್ಯಕ್ತಿಯ ಶವಸಂಸ್ಕಾರಕ್ಕೆ ಯಾರೂ ಮುಂದೆ ಬರಲಿಲ್ಲ. ಮೃತ ವ್ಯಕ್ತಿಯ ಪತ್ನಿ ಮತ್ತು ಮಗಳು ಶವಸಂಸ್ಕಾರ ಮಾಡಲು ಪರದಾಡುತ್ತಿದ್ದರು. ಆಗ ಪುಣೆಯಲ್ಲಿದ್ದ ಅವರ ಸಂಬಂಧಿಕರು, ನಮ್ಮ ಸಂಸ್ಥೆಯ ಚಟುವಟಿಕೆ ಬಗ್ಗೆ ತಿಳಿಸಿ, ಸಂಪರ್ಕ ನೀಡಿದರು. ಮುಂದೆ ನಮ್ಮ ಸಂಘಟನೆಯ ಸದಸ್ಯರು ಶವಸಂಸ್ಕಾರ ನಡೆಸಿಕೊಟ್ಟರು‘ ಎಂದು ಇತ್ತೀಚೆಗೆ ನಡೆದಿದ್ದ ಘಟನೆಯೊಂದನ್ನು ವಿಜಯ್ ವಿವರಿಸಿದರು.

‘62 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟ ತನ್ನ 90 ವರ್ಷದ ತಾಯಿಯ ಕಳೇಬರವನ್ನು ಚಿತಾಗಾರಕ್ಕೆ ಕೊಂಡೊಯ್ಯಲು ಪರದಾಡುತ್ತಿದ್ದಾಗ, ಅವರ ಸಂಬಂಧಿಕರು ನನ್ನನ್ನು ಸಂಪರ್ಕಿಸಿದರು. ನಂತರ ನಾನು, ನನ್ನ ತಂಡವನ್ನು ಮೃತರ ಮನೆಗೆ ಕಳಿಸಿ, ಶವಸಂಸ್ಕಾರಕ್ಕೆ ನೆರವಾದೆ‘ ಎಂದು ವಿಜಯ್ ತಿಳಿಸಿದರು.

ಕಳೆದ ವರ್ಷ ಏಪ್ರಿಲ್‌ನಿಂದ ಮಾರ್ಚ್ 31, 2021ರವರೆಗೆ ಇಎಫ್ಎಲ್ಎಫ್ ಸಂಸ್ಥೆ 5,040 ಶವಗಳನ್ನು ಪರಿಸರ ಸ್ನೇಹಿ ವಿಧಾನದಲ್ಲಿ ಸಂಸ್ಕಾರ ಮಾಡಿದೆ. ಈ ಹತ್ತು ದಿನಗಳಲ್ಲಿ 8 ರಿಂದ 9 ಶವಗಳನ್ನು ಇದೇ ರಿತಿ ಸಂಸ್ಕಾರ ಮಾಡಿದ್ದಾರೆ.

ಮಂಗಳವಾರ ನಾಗಪುರ ಜಿಲ್ಲೆಯಲ್ಲಿ ಕೋವಿಡ್‌ನಿಂದ 101 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT