ಮಂಗಳವಾರ, ಡಿಸೆಂಬರ್ 1, 2020
17 °C

ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರದ್ದು: ಅಜಿತ್ ಪವಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು’ ಎಂದು ಆ ರಾಜ್ಯದ ಉಪಮುಖ್ಯಮಂತ್ರಿಯೂ ಆಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್‌ ಹೇಳಿದ್ದಾರೆ.

ಮುಂಬೈನಲ್ಲಿ ಮಂಗಳವಾರ ನಡೆದ ಶಿವಸೇನೆ ನಾಯಕ ದಿ.ಬಾಳಾಠಾಕ್ರೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮರಾಠಿ ಮಾತನಾಡುವವರು ಹೆಚ್ಚಾಗಿರುವ ಈ ಪ್ರದೇಶಗಳನ್ನು ಸೇರಿದ ಅಖಂಡ ಮಹಾರಾಷ್ಟ್ರದ ಅಭಿವೃದ್ಧಿ ಬಾಳಾ ಠಾಕ್ರೆ ಕನಸಾಗಿತ್ತು. ಅದನ್ನು ನನಸು ಮಾಡಬೇಕಿದೆ’ ಎಂದಿದ್ದಾರೆ.

ಅವರ ಈ ಹೇಳಿಕೆಗೆ ಬೆಳಗಾವಿಯಲ್ಲಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬೆಲೆ ಕೊಡಬೇಕಿಲ್ಲ: ಬುಧವಾರಪತ್ರಕರ್ತರೊಂದಿಗೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ‘ಮಹಾರಾಷ್ಟ್ರದವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಅದಕ್ಕೆ ಬೆಲೆ ಕೊಡಬೇಕಿಲ್ಲ’ ಎಂದು ಹೇಳಿದರು.

ಗಡಿ ಉಸ್ತುವಾರಿ ಸಚಿವರ ನೇಮಕದ ಪ್ರಶ್ನೆಗೆ, ‘ಜಿಲ್ಲೆಯವರೇ ನಾಲ್ವರು ಸಚಿವರಿದ್ದಾರೆ. ಈ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.

ನಿಪ್ಪಾಣಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ಕರ್ನಾಟಕದ ಯಾವುದೇ ಭಾಗವನ್ನೂ ಅವರಿಗೆ ಬಿಟ್ಟು ಕೊಡಲು ತಯಾರಿಲ್ಲ. ಮಹಾರಾಷ್ಟ್ರದವರ ಹೇಳಿಕೆಯಿಂದ ನಮ್ಮ– ನಮ್ಮಲ್ಲಿ ಜಗಳ ಆಗಬಾರದು’ ಎಂದರು.

ಅವರಪ್ಪನದಲ್ಲ: ‘ಕರ್ನಾಟಕ ಉಸ್ಕಾ ಬಾಪ್ ಕಾ ನಹೀ... ಏ ಹಮಾರಾ ಹೈ (ಕರ್ನಾಟಕ ಅವರಪ್ಪನದಲ್ಲ, ಇದು ನಮ್ಮದು)’ ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಕೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು