ಸೋಮವಾರ, ಸೆಪ್ಟೆಂಬರ್ 20, 2021
20 °C

ಮಹಾರಾಷ್ಟ್ರದ ಪ್ರವಾಹ: ಅಮೆರಿಕದ ಸ್ವಯಂ ಸೇವಾ ಸಂಸ್ಥೆಯಿಂದ ಸಂತ್ರಸ್ತರಿಗೆ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರಿ ಮಳೆ, ಪ್ರವಾಹ, ಭೂಕುಸಿತದಿಂದ ಇನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಹಾರಾಷ್ಟ್ರದ ಮೂರು ಜಿಲ್ಲೆಗಳ ಜನರಿಗೆ ವೈದ್ಯಕೀಯ ನೆರವು ನೀಡುವುದಕ್ಕಾಗಿ ಅಮೆರಿಕದ ‘ಅಮೆರಿಕೇರ್ಸ್‌ ಸ್ವಯಂ ಸೇವಾ ಸಂಸ್ಥೆ ಮುಂದಾಗಿದೆ.

ಈ ಸಂಬಂಧ ಅಮೆರಿಕೇರ್ಸ್ ಸಂಸ್ಥೆ, ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಮತ್ತು ರತ್ನಗಿರಿ ಜಿಲ್ಲೆಗಳಿಗೆ ಮೂರು ವೈದ್ಯಕೀಯ ತಂಡಗಳನ್ನು ನಿಯೋಜಿಸಿದೆ. ಈ ತಂಡಗಳು ಈಗಾಗಲೇ ಮಹಾರಾಷ್ಟ್ರದತ್ತ ಪ್ರಯಾಣ ಬೆಳೆಸಿವೆ‘ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರದವರೆಗಿನ ಮಾಹಿತಿ ಪ್ರಕಾರ, ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹ, ಭೂಕುಸಿತದಲ್ಲಿ ಸತ್ತವರ ಸಂಖ್ಯೆ 213. ರಾಯಗಡ ಜಿಲ್ಲೆ ಒಂದರಲ್ಲೇ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಅನಾರೋಗ್ಯಕ್ಕೆ ಒಳಗಾಗಿರುವವರಿಗೆ ವೈದ್ಯಕೀಯ ತಂಡಗಳು ಚಿಕಿತ್ಸೆ ನೀಡಲಿವೆ.

ಮುಂಬೈನಲ್ಲಿರುವ ಅಮೆರಿಕೇರ್ಸ್‌ ಇಂಡಿಯಾ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿ, ಸ್ಥಳೀಯ ಆರೋಗ್ಯ ರಕ್ಷಣಾ ಸಮೂಹಗಳ ಸಹಭಾಗಿತ್ವದಲ್ಲಿ ತುರ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ ಮತ್ತು ಹತ್ತು ದಿನಗಳವರೆಗೆ ಕೋವಿಡ್‌–19 ಸಾಂಕ್ರಾಮಿಕದ ಕುರಿತು ಜಾಗೃತಿ ಮೂಡಿಸಲಿದ್ದಾರೆ.

ಸಂಸ್ಥೆಯು ಹೇಳಿರುವ ಪ್ರಕಾರ, ಈ ವಾರಾಂತ್ಯದಲ್ಲಿ ಇನ್ನೂ ಎರಡು ಹೆಚ್ಚುವರಿ ವೈದ್ಯಕೀಯ ತಂಡಗಳು ಕೊಲ್ಹಾಪುರ ಮತ್ತು ರಾಯಗಡಕ್ಕೆ ತೆರಳಲಿದ್ದು, ಪ್ರವಾಹದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲಿವೆ.

‘ಪ್ರವಾಹ ಪೀಡಿತ ಪ್ರದೇಶಗಳಿಂದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿರುವ ಸಂತ್ರಸ್ತ ಕುಟುಂಬಗಳಿಗೆ ಕೋವಿಡ್‌–19 ಸೋಂಕು ಸೇರಿದಂತೆ ನೀರಿನಿಂದ ಉಂಟಾಗುವ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ನಮ್ಮ ವೈದ್ಯಕೀಯ ತಂಡಗಳು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ತುರ್ತು ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಿ, ಅಪಾಯದಿಂದ ಪಾರು ಮಾಡುವತ್ತ ಗಮನ ಹರಿಸುತ್ತಾರೆ' ಎಂದು ಅಮೆರಿಕೇರ್ಸ್‌ ಸಂಸ್ಥೆಯ ತುರ್ತು ಸೇವಾ ವಿಭಾಗದ ಉಪಾಧ್ಯಕ್ಷ ಕೇಟ್ ಡಿಸ್ಚಿನೊ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು