ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಮಳೆ:129 ಸಾವು; 1.35 ಲಕ್ಷ ಜನರ ಸ್ಥಳಾಂತರ

ಕೊಲ್ಹಾಪುರ, ಸಾಂಗ್ಲಿ, ಸತಾರಾ ಜಿಲ್ಲೆಗಳಲ್ಲಿ ಮುಂದುವರಿದ ಪ್ರವಾಹ; 59 ಜನ ನಾಪತ್ತೆ
Last Updated 24 ಜುಲೈ 2021, 16:46 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸತಾರಾ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಶನಿವಾರವೂಮುಂದುವರಿದಿದ್ದು, ಈವರೆಗೆ 1.35 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 129 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು ಮಾಹಿತಿ ನೀಡಿವೆ.

ಮೂರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ ಮಹಾರಾಷ್ಟ್ರ ಮತ್ತು ಪಕ್ಕದ ಕರ್ನಾಟಕದ ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಮೂರು ಜಿಲ್ಲೆಗಳ ಬಹುಪಾಲು ಅಣೆಕಟ್ಟುಗಳು ತುಂಬಿರುವ ಪರಿಣಾಮ, ಹಲವಾರು ಗ್ರಾಮಗಳು ಮುಳುಗಡೆಯಾಗಿವೆ.

‘ಈ ಪ್ರವಾಹ, ನಾವು ನೋಡುತ್ತಿರುವ ದೊಡ್ಡ ಅನಿರೀಕ್ಷಿತ ದುರಂತ‘ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ, ಮಹಾಬಲೇಶ್ವರ ಗಿರಿಧಾಮದಲ್ಲಿ 186 ಸೆಂ.ಮೀ ಮಳೆಯಾಗಿದೆ.

ರಾಜ್ಯದಲ್ಲಿ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ 59 ಜನರು ನಾಪತ್ತೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಹೇಳಿದ್ದಾರೆ. ಈ ಅವಘಡದಲ್ಲಿ 38 ಜನರು ಗಾಯಗೊಂಡಿದ್ದಾರೆ. ರಾಯಗಡ ಜಿಲ್ಲೆಯಲ್ಲಿ ಅತಿಹೆಚ್ಚು ಹಾನಿ ಉಂಟಾಗಿದ್ದು, ಇಲ್ಲಿ 47 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ರಾಯಗಡದ ತಾಲಿಯೆ ಎಂಬಲ್ಲಿ 37 ಜನರು ಮೃತಪಟ್ಟಿದ್ದರು.

ಕರಾವಳಿ ಕೊಂಕಣ ಪ್ರದೇಶದ ರಾಯಗಡ ಮತ್ತು ರತ್ನಾಗಿರಿ ಜಿಲ್ಲೆಗಳ ಭಾಗಗಳು ಮತ್ತು ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ಈ ಮಧ್ಯೆ ಸತಾರಾ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಮಾಣದ ಮಳೆಯಾಗುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್) 21 ತಂಡಗಳು, ಸೇನೆ, ಕರಾವಳಿ ರಕ್ಷಣಾ ಪಡೆಗಳ 14 ತಂಡಗಳುಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪವಾರ್ ಹೇಳಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಾಲ್ಕು ತಂಡಗಳೂ ಸಹ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

*ಅಂಬೆಗಾಂವ್‌ನ ಐದು ಪ್ರದೇಶಗಳು, ಮಾವಲ್‌ ಹಾಗೂ ಖೇಡ್‌ನಲ್ಲಿ ತಲಾ ಎರಡು, ಭೋರ್‌ನಲ್ಲಿ ಮೂರು, ಮುಲ್ಶಿ, ಜುನ್ನಾರ್ ಮತ್ತು ವೆಲ್ಹಾದಲ್ಲಿ ತಲಾ ಒಂದು ಪ್ರದೇಶಗಳೂ ಸೇರಿದಂತೆ ಪುಣೆ ಜಿಲ್ಲೆಯ 23 ಪ್ರದೇಶಗಳಲ್ಲಿ ಭೂಕುಸಿತ.

*ರಾಯಗಡದಲ್ಲಿ 47, ಸತಾರಾದಲ್ಲಿ 6, ಮುಂಬೈನಲ್ಲಿ 4, ರತ್ನಾಗಿರಿಯಲ್ಲಿ 11, ಕೊಲ್ಹಾಪುರದಲ್ಲಿ 5, ಸಿಂಧುದುರ್ಗದಲ್ಲಿ ಇಬ್ಬರು ಹಾಗೂಪುಣೆಯಲ್ಲಿ ಒಬ್ಬರ ಸಾವು

*ಶನಿವಾರ ಬೆಳಿಗ್ಗೆವರೆಗಿನ ಮಾಹಿತಿ ಪ್ರಕಾರ,ರಾಯಗಡದಲ್ಲಿ 53, ಸತಾರಾದಲ್ಲಿ ನಾಲ್ಕು ಮತ್ತು ಠಾಣೆಯಲ್ಲಿ ಇಬ್ಬರು ಕಾಣೆಯಾಗಿದ್ದಾರೆ.

*ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಬಂಧಿಗಳಿಗೆ ರಾಜ್ಯ ಸರ್ಕಾರ ತಲಾ ₹5 ಲಕ್ಷ ಹಾಗೂ ಕೇಂದ್ರ ಸರ್ಕಾರ ತಲಾ ₹2 ಲಕ್ಷ ಪರಿಹಾರ ಘೋಷಣೆ

*ಸತಾರಾ ಜಿಲ್ಲೆಯ ಅಂಬೇಘರ್ ಗ್ರಾಮದಲ್ಲಿ ಭೂಕುಸಿತ ಸ್ಥಳದಲ್ಲಿ 13 ಶವಗಳ ಪತ್ತೆ

*ಕೊಲ್ಹಾಪುರ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ತಗ್ಗಿದ ಮಳೆ ತೀವ್ರತೆ; ಪಂಚಗಂಗಾ ನದಿಯ ನೀರಿನ ಮಟ್ಟದಲ್ಲಿ ಸ್ವಲ್ಪ ಇಳಿಕೆ

*ಪ್ರವಾಹಪೀಡಿತ ಗ್ರಾಮಗಳಲ್ಲಿ ಪಡಿತರ ವಿತರಿಸಲು ಸರ್ಕಾರ ನಿರ್ಧರಿಸಿದೆ. ‘ಶಿವಭೋಜನ ಥಾಲಿ ಕೇಂದ್ರ‘ ನಡೆಸಲು ಸಾಮಾಜಿಕ ಸಂಘಟನೆಗಳು ಮುಂದೆ ಬರಬೇಕು: ಅಜಿತ್ ಪವಾರ್ ಕರೆ

*ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಂದ ಮಾಹಿತಿ ಪಡೆದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌; ಮಳೆ– ಪ್ರವಾಹದಿಂದಾಗಿ ರಾಜ್ಯದಲ್ಲಿ ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಕಳವಳ

*ರಕ್ಷಣಾ ಕಾರ್ಯಾಚರಣೆ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತನ್ನ ತಂಡಗಳ ಸಂಖ್ಯೆ 18 ರಿಂದ 26ಕ್ಕೆ ಹೆಚ್ಚಳ

*ಮಧ್ಯಪ್ರದೇಶದ 24 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ

*ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ

ಕಾಯಂ ಸ್ಥಳಾಂತರಕ್ಕೆ ಯೋಜನೆ: ಠಾಕ್ರೆ

ಭೂಕುಸಿತವನ್ನು ಗಮನದಲ್ಲಿಟ್ಟುಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಕಾಯಂ ಆಗಿ ಸ್ಥಳಾಂತರಿಸುವ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ತಿಳಿಸಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರ ಪ್ರದೇಶವು ಪ್ರವಾಹಕ್ಕೀಡಾಗುವುದರಿಂದ ನೀರಿನ ನಿರ್ವಹಣೆಗೆ ನೀತಿಯನ್ನು ರೂಪಿಸಲಾಗುವುದು ಎಂದರು.

ಭೂಕುಸಿತದ ದುರ್ಘಟನೆ ಸಂಭವಿಸಿದ ರಾಯಗಡ ಜಿಲ್ಲೆಯ ತಾಲಿಯೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗೋವಾ–ಕರ್ನಾಟಕ ಮಧ್ಯೆ ರೈಲು ಸಂಚಾರ ಅಸ್ತವ್ಯಸ್ತ

ಪಣಜಿ: ಸತತ ಮಳೆಯಿಂದಾಗಿ ಗೋವಾ–ಕರ್ನಾಟಕ ಗಡಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ ಉಭಯ ರಾಜ್ಯಗಳ ನಡುವೆ ಎರಡನೇ ದಿನವೂ ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

***

ಪ್ರವಾಹಪೀಡಿತ ಕೊಲ್ಹಾಪುರ ಜಿಲ್ಲೆಯ ಜನರಿಗೆ ನೆರವು ನೀಡಲು ಮಹಾರಾಷ್ಟ್ರ ಸರ್ಕಾರವು ಕರ್ನಾಟಕ ಸರ್ಕಾರದ ಜತೆ ಸಮನ್ವಯ ಸಾಧಿಸುತ್ತಿದೆ

- ಅಜಿತ್‌ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT