ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲಗಳು ಕಲುಷಿತ: 100 ಕಾರ್ಖಾನೆಗಳಿಗೆ ₹ 186 ಕೋಟಿ ದಂಡ

Last Updated 29 ಜನವರಿ 2022, 13:27 IST
ಅಕ್ಷರ ಗಾತ್ರ

ಪಾಲ್ಗಾರ್, ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ತಾರಾಪುರ ಎಂಐಡಿಸಿ ವಲಯದಲ್ಲಿರುವ ಸುಮಾರು 100 ಕೈಗಾರಿಕಾ ಘಟಕಗಳಿಗೆ, ಜಲಮೂಲ ಕಲುಷಿತಗೊಳಿಸಿದ್ದಕ್ಕಾಗಿ ಒಟ್ಟು ₹ 186 ಕೋಟಿ ಪರಿಹಾರ ಭರಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿದೆ.

ಈ ಕೈಗಾರಿಕಾ ಘಟಕಗಳ ಜೊತೆಗೆ ತಾರಾಪುರ ಪರಿಸರ ರಕ್ಷಣಾ ಸೊಸೈಟಿಯ ಕೇಂದ್ರ ಶುದ್ಧೀಕರಣ ಘಟಕವು (ಸಿಇಟಿಪಿ) ₹ 91.79 ಕೋಟಿ ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮವು ₹ 2 ಕೋಟಿ ಪರಿಹಾರ ಪಾವತಿಸಬೇಕು ಎಂದೂ ಆದೇಶಿಸಿದೆ.

ಈ ಮೊತ್ತವನ್ನು ಬಳಸಿ ಈ ಭಾಗದಲ್ಲಿ ಪರಿಸರವನ್ನು ಸುಸ್ಥಿತಿಯಲ್ಲಿಡುವ ಹಾಗೂ ಸ್ಥಳೀಯ ಜನರ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಬಳಸಬೇಕು. ಇದರ ಮೇಲ್ವಿಚಾರಣೆಯನ್ನು ಸಮಿತಿಯು ನಡೆಸಬೇಕು ಎಂದು ತನ್ನ 500 ಪುಟಗಳ ಆದೇಶದಲ್ಲಿ ತಿಳಿಸಿದೆ.

ಜನವರಿ 24ರಂದು ಈ ಕುರಿತು ಆದೇಶ ಹೊರಬಿದ್ದಿದೆ. ಜಲಮೂಲಗಳಿಗೆ ಕಲುಷಿತ ನೀರು ಹರಿಸಿರುವ ಕೈಗಾರಿಕಾ ಘಟಕಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅನ್ವಯ ಕಠಿಣಕ್ರಮ ಜರುಗಿಸದ ಜಾರಿ ನಿರ್ದೇಶನಾಲಯದ ವಿರುದ್ಧವು ಎನ್‌ಜಿಟಿ ಹರಿಹಾಯ್ದಿದೆ.

‘ಕ್ರಮಕೈಗೊಳ್ಳದಿರುವುದು ಈ ಕಾರ್ಖಾನೆಗಳು ನಿಯಮವನ್ನು ಉಲ್ಲಂಘಿಸಲು ಪ್ರೇರೇಪಣೆ ನೀಡಿದಂತಾಗಿದೆ. ಪಿಎಂಎಲ್‌ಎ ಕಾಯ್ದೆಗೆ 2013ರಲ್ಲಿಯೇ ತಿದ್ದುಪಡಿ ಆಗಿದೆ. ಆದರೂ ಇ.ಡಿ ಕೆಲ ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಕ್ರಮಜರುಗಿಸುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿತು.

ಮಹಾರಾಷ್ಟ್ರದ ಮಾಲಿನ್ಯ ನಿಯಂತ್ರಣ ಮಂಡಳಿ (ಎಂಪಿಸಿಬಿ) ಅಧಿಕಾರಿಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಎನ್‌ಜಿಟಿ, ‘ಎಂಪಿಸಿಬಿ ಅತೀವ ನಿರ್ಲಕ್ಯ ತೋರಿದೆ. ಕರ್ತವ್ಯ ನಿರ್ವಹಿಸುವಲ್ಲಿ ಬೆನ್ನುಮೂಳೆ ಇಲ್ಲದಂತೆ ನಡೆದುಕೊಂಡಿದೆ’ ಎಂದು ಹೇಳಿದೆ.

ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿ ನಿಗಮವು (ಎಂಐಡಿಸಿ) ಅಧಿಕಾರಿಗಳೂ ನಿರ್ಲಕ್ಷ್ಯತೋರಿದ್ದಾರೆ. ಒಳಚರಂಡಿ ವ್ಯವಸ್ಥೆ ಕೊಳವೆ ಮಾರ್ಗ ಸುಸ್ಥಿತಿಯಲ್ಲಿಡುವುದು, ನಿಯಮಿತವಾಗಿ ಕಲ್ಮಶ ತೆಗೆಯುವ ಕಾರ್ಯವನ್ನು ಪರಿಶೀಲಿಸಿಲ್ಲ. ಇದು ಕೂಡಾ ಜಲಮೂಲ ಕಲುಷಿತಗೊಳ್ಳಲು ಕಾರಣವಾಗಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT