ಭಾರತ್ ಜೋಡೊ ಯಾತ್ರೆ ಸಮಾರೋಪದ ರ್‍ಯಾಲಿಗೆ ಪ್ರಮುಖ ಪಕ್ಷಗಳು ಗೈರು ಸಾಧ್ಯತೆ

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಸಮಾರೋಪದ ಅಂಗವಾಗಿ ಜ.30ರಂದು ಶ್ರೀನಗರದಲ್ಲಿ ನಡೆಯಲಿರುವ ರ್‍ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್, ಸಿಪಿಎಂ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕರು ಗೈರು ಹಾಜರಾಗುವ ಸಾಧ್ಯತೆಯಿದೆ.
2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ನಡುವೆ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನವಾಗಿ ನಡೆಯುವ ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ 23 ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.
ಎಎಪಿ, ಬಿಆರ್‌ಎಸ್, ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ, ಎಐಯುಡಿಎಫ್ ಮತ್ತು ಅಕಾಲಿದಳವನ್ನು ಕಾರ್ಯಕ್ರಮಕ್ಕೆ ಕಾಂಗ್ರೆಸ್ ಆಹ್ವಾನಿಸಿಲ್ಲ.
‘ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಥವಾ ಪಕ್ಷದ ಬೇರೆ ಯಾರಾದರೂ ಶ್ರೀನಗರಕ್ಕೆ ಹೋಗುತ್ತಾರೆಯೇ’ ಎಂಬ ಪ್ರಶ್ನೆಗೆ ‘ಬಹುಶಃ ಇಲ್ಲ’ ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು.
‘ಶ್ರೀನಗರ ರ್‍ಯಾಲಿಯಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ’ ಎಂದು ಪಕ್ಷದೊಳಗೆ ಚರ್ಚಿಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅಥವಾ ಇತರ ಯಾವುದೇ ನಾಯಕ ಭಾಗವಹಿಸುತ್ತಾರೆಯೇ ಎಂಬುದನ್ನು ಹಿರಿಯ ಆರ್‌ಜೆಡಿ ನಾಯಕರೊಬ್ಬರು ಖಚಿತಪಡಿಸಲಿಲ್ಲ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ಅವರನ್ನು ಕಾಂಗ್ರೆಸ್ ಸಭೆಗೆ ಆಹ್ವಾನಿಸಿತ್ತು.
‘ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಜ. 30ರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ’ ಎಂದು ಸಿಪಿಎಂ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಕಾಶ್ಮೀರದ ಹಿರಿಯ ಸಿಪಿಎಂ ನಾಯಕ ಮೊಹಮ್ಮದ್ ಯೂಸುಫ್ ತಾರಿಗಾಮಿ ತಮ್ಮ ಉಪಸ್ಥಿತಿ ದೃಢಪಡಿಸಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.