ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾಗೆ ಭಾರಿ ಗೆಲುವು

Last Updated 3 ಅಕ್ಟೋಬರ್ 2021, 20:31 IST
ಅಕ್ಷರ ಗಾತ್ರ

ಕೋಲ್ಕತ್ತ: ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 58,389 ಮತಗಳ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದಾರೆ.

ಈ ಗೆಲುವಿನೊಂದಿಗೆ, ಅವರು ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಮಮತಾ 84,709 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪ್ರಿಯಾಂಕಾ ತಿಬ್ರೆವಾಲ್ 26,320 ಮತ ಪಡೆದಿದ್ದಾರೆ. ಸಿಪಿಎಂ ಅಭ್ಯರ್ಥಿ ಶ್ರಿಜಿಬ್‌ ಬಿಸ್ವಾಸ್‌ ಅವರಿಗೆ ಕೇವಲ 4201 ಮತ ಪಡೆಯಲು ಸಾಧ್ಯವಾಗಿದೆ.

ಜಂಗೀಪುರ ಹಾಗೂ ಸಂಶೇರ್‌ಗಂಜ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಮಮತಾ ಅವರ ತೃಣಮೂಲ ಕಾಂಗ್ರೆಸ್‌ ಪಕ್ಷವು ಜಯಭೇರಿ ಬಾರಿಸಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಪರಾಭವಗೊಂಡಿದ್ದರು. ಆದರೂ ಮೇ 5ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕಾದರೆ, ಆರು ತಿಂಗಳ ಒಳಗಾಗಿ ವಿಧಾನಸಭೆಗೆ ಆಯ್ಕೆಯಾಗುವುದು ಮಮತಾಗೆ ಅನಿವಾರ್ಯವಾಗಿತ್ತು.

ಅವರಿಗಾಗಿ ಭವಾನಿಪುರದ ಕ್ಷೇತ್ರದ ಶಾಸಕ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರವಾಗಿತ್ತು.

2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಭವಾನಿಪುರದಿಂದ ಸ್ಪರ್ಧಿಸಿದ್ದ ಮಮತಾ, 54,213 ಮತಗಳಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದೀಗ 84 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು 25,301 ಮತಗಳ ಅಂತರದಿಂದ ಗೆದ್ದಿದ್ದರು.

ಭವಾನಿಪುರದ ಜನತೆಯಿಂದ ತಕ್ಕ ಉತ್ತರ:ಗೆಲುವಿನ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, ‘ನಂದಿಗ್ರಾಮದಲ್ಲಿ ತಮ್ಮ ವಿರುದ್ಧ ಸಂಚು ರೂಪಿಸಿ, ಸೋಲಿಗೆ ಕಾರಣರಾದವರಿಗೆ ಭವಾನಿಪುರದ ಜನರು ತ‌ಕ್ಕ ಉತ್ತರ ನೀಡಿದ್ದಾರೆ’ ಎಂದರು.

ಪ್ರತಿಯೊಂದು ವಾರ್ಡ್‌ನಲ್ಲಿಯೂ ತಮಗೆ ಗೆಲುವು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಭವಾನಿಪುರ ಹಾಗೂ ಪಶ್ಚಿಮ ಬಂಗಾಳದ ಜನತೆಗೆ ಧನ್ಯವಾದ ಹೇಳಿದರು.

‘ಭವಾನಿಪುರದ ಶೇ 46 ರಷ್ಟು ಜನರು ಬಂಗಾಳಿಯೇತರರು. ಅವರೆಲ್ಲರೂ ನನಗೆ ಮತ ಹಾಕಿದ್ದಾರೆ. ಅದರೊಂದಿಗೆ, ಇಡೀ ಪಶ್ಚಿಮ ಬಂಗಾಳದ ಜನರೆಲ್ಲ ಭವಾನಿಪುರದತ್ತಲೇ ನೋಡುತ್ತಿದ್ದುದು ನನಗೆ ಹುಮ್ಮಸ್ಸನ್ನು ನೀಡಿತು’ ಎಂದರು.

‘ಟಿಎಂಸಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಬಿಜೆಪಿ ಏನೆಲ್ಲ ಪಿತೂರಿ ನಡೆಸಿತು. ನಾನು ಚುನಾವಣೆಗೆ ನಿಲ್ಲುವುದನ್ನೇ ತಪ್ಪಿಸುವುದಕ್ಕಾಗಿ ಅವರು ನನ್ನ ಕಾಲಿಗೆ ಗಾಯ ಮಾಡಿದರು’ ಎಂದು ಆರೋಪಿಸಿದ ಮಮತಾ, ಬಹುಮತದಿಂದ ತಮ್ಮನ್ನು ಗೆಲ್ಲಿಸಿದ ಜನರಿಗೆ ಹಾಗೂ ಆರು ತಿಂಗಳ ಒಳಗಾಗಿ ಉಪ ಚುನಾವಣೆ ನಡೆಸಿದ ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದರು.

‘ಜನರಿಗೆ ಮುಕ್ತ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದರೆ ಚಿತ್ರಣವೇ ಬೇರೆ ಇರುತ್ತಿತ್ತು’ ಎಂದು ಪರಾಜಿತ ಅಭ್ಯರ್ಥಿ ಬಿಜೆಪಿಯ ಪ್ರಿಯಾಂಕಾ ತಿಬ್ರೆಬಾಲ್‌ ಆರೋಪಿಸಿದ್ದಾರೆ. ಭವಾನಿಪುರದಲ್ಲಿ ಚುನಾವಣಾ ಅಕ್ರಮ ಹಾಗೂ ನಕಲಿ ಮತದಾನ ನಡೆದಿದೆ ಎಂದು ದೂರಿದ್ದಾರೆ.

ಮುರ್ಷಿದಾಬಾದ್‌: ಕಾಂಗ್ರೆಸ್ ಪ್ರಾಬಲ್ಯ ಮುರಿದ ಟಿಎಂಸಿ

ಮುರ್ಷಿದಾಬಾದ್ ಜಿಲ್ಲೆಯ ಜಂಗೀಪುರ ಹಾಗೂ ಸಂಶೇರ್‌ಗಂಜ್‌ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲೂ ಟಿಎಂಸಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಜಂಗೀಪುರದ ಜಾಕಿರ್‌ ಹುಸೇನ್‌, 1,36,444 ಮತ ಪಡೆದಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸುಜಿತ್‌ ದಾಸ್ 43,964 ಮತಗಳನ್ನು ಪಡೆದಿದ್ದಾರೆ. ಹುಸೇನ್‌ ಅವರು 92,480 ಮತಗಳ ಅಂತರದ ಭರ್ಜರಿ ಗೆಲುವು ಕಂಡಿದ್ದಾರೆ.

ಸಂಶೇರ್‌ಗಂಜ್‌ನಲ್ಲಿ ಟಿಎಂಸಿ ಅಭ್ಯರ್ಥಿ ಅಮರುಲ್‌ ಇಸ್ಲಾಂ ಅವರು 26,379 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು 96,417 ಮತಗಳನ್ನು ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದ ಜೈದುರ್‌ ರೆಹಮಾನ್‌ 70,038 ಮತಗಳನ್ನು ಪಡೆದಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ ಪ್ರಾಬಲ್ಯವಿದ್ದ ಮುರ್ಷಿದಾಬಾದ್‌ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಟಿಎಂಸಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT