ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಚಿಂತೆ ಹೆಚ್ಚಿಸಿದ ಮುಸ್ಲಿಂ ಮತ ಬ್ಯಾಂಕ್‌

Last Updated 14 ಏಪ್ರಿಲ್ 2021, 19:37 IST
ಅಕ್ಷರ ಗಾತ್ರ

ಕೋಲ್ಕತ್ತ: ಶೇ 30ರಷ್ಟಿರುವ ಮುಸ್ಲಿಂ ಮತದಾರರು ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಸದಾ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ. 2011ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಲ್ಲಿಂದ ಈ ವರ್ಗವು ಟಿಎಂಸಿಯ ಜತೆಗೆ ದೃಢವಾಗಿ ನಿಂತಿದೆ. ಆದರೆ, ಈವರೆಗೆ ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ (ಐಎಸ್‌ಎಫ್‌) ಮತ್ತು ಎಐಎಂಐಎಂನಂತಹ ಮುಸ್ಲಿಮರೇ ನಾಯಕ ಸ್ಥಾನದಲ್ಲಿರುವ ಪಕ್ಷಗಳು ಇರಲಿಲ್ಲ. ಮುಸ್ಲಿಂ ಸಮುದಾಯದ ಮೇಲೆ ಮಮತಾ ಹೊಂದಿರುವ ಪ್ರಭಾವಕ್ಕೆ ಈ ಬಾರಿ ಈ ಎರಡೂ ಪಕ್ಷಗಳು ಸವಾಲು ಒಡ್ಡುವ ಸಾಧ್ಯತೆ ಇದೆ.

ಪ್ರಭಾವಿ ಮೌಲ್ವಿ ಅಬ್ಬಾಸ್‌ ಸಿದ್ದಿಕಿಯು ಐಎಸ್‌ಎಫ್‌ ಸ್ಥಾಪಿಸುವುದರೊಂದಿಗೆ, ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣ ಬದಲಾಗತೊಡಗಿತು. ಮುಸ್ಲಿಂ ಸಮುದಾಯದ ಮೇಲೆ ಅದರಲ್ಲೂ ವಿಶೇಷವಾಗಿ ಬಂಗಾಳದ ದಕ್ಷಿಣದ ಜಿಲ್ಲೆಗಳಲ್ಲಿ ಸಿದ್ದಿಕಿಯ ಪ್ರಭಾವವು ಟಿಎಂಸಿ ಮತಬ್ಯಾಂಕ್‌ಗೆ ಕನ್ನ ಕೊರೆಯಲಿದೆ ಎಂಬುದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಅರಿವಾಗಿದೆ. ಹಾಗಾಗಿಯೇ ‘ಸಿದ್ದಿಕಿಯು ಬಿಜೆಪಿಯ ಏಜೆಂಟ್‌. ಮುಸ್ಲಿಂ ಮತಗಳ ವಿಭಜನೆಗಾಗಿಯೇ ಅವರು ಕಣದಲ್ಲಿದ್ದಾರೆ’ ಎಂದು ಮಮತಾ ಅವರು ತೀವ್ರ ವಾಗ್ದಾಳಿನಡೆಸುತ್ತಿದ್ದಾರೆ.

ಅಂಫನ್‌ ಚಂಡಮಾರುತದ ಬಳಿಕ ಪರಿಹಾರ ಹಂಚಿಕೆಯಲ್ಲಿ ಟಿಎಂಸಿ ಮುಖಂಡರು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪವು ಐಎಸ್‌ಎಫ್‌ಗೆ ವರವಾಗಿದೆ. ಈ ಆರೋಪದಿಂದಾಗಿ ಮುಸ್ಲಿಮರಲ್ಲಿ ಟಿಎಂಸಿ ಬಗ್ಗೆ ಅಸಮಾಧಾನ ಮೂಡಿದೆ.

ಬಿಜೆಪಿ ಮತ್ತು ಟಿಎಂಸಿ ನಡುವೆ ಒಳ ಒಪ್ಪಂದ ಇದೆ ಎಂದು ಐಎಸ್‌ಎಫ್‌ ಅಧ್ಯಕ್ಷ ನೌಷಾದ್‌ ಸಿದ್ದಿಕಿ ಆರೋ‍ಪಿಸಿದ್ದಾರೆ.

ಮುರ್ಷಿದಾಬಾದ್‌ ಜಿಲ್ಲೆಯ 13 ಕ್ಷೇತ್ರಗಳಲ್ಲಿಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇದು ಕೂಡ ಮುಸ್ಲಿಂ ಬಾಹುಳ್ಯದ ಜಿಲ್ಲೆ. ಕಾಂಗ್ರೆಸ್‌ನ ಮತಬ್ಯಾಂಕ್‌ ಅನ್ನು ವಶಕ್ಕೆ ಪಡೆಯುವ ಮಮತಾ ಯತ್ನಕ್ಕೆ ಎಐಎಂಐಎಂ ಹೊಡೆತ ಕೊಡಬಹುದು.

ತನ್ನಲ್ಲಿರುವ ಮುಸ್ಲಿಂ ಮುಖಂಡರನ್ನು ಮುನ್ನೆಲೆಗೆ ತಂದು ಮತ್ತು ಐಎಸ್‌ಎಫ್‌, ಎಐಎಂಐಎಂಗಳೆರಡೂ ಬಿಜೆಪಿ ಏಜೆಂಟ್‌ ಎನ್ನುವ ಮೂಲಕ ಮುಸ್ಲಿಂ ಮತಬ್ಯಾಂಕ್‌ ಉಳಿಸಿಕೊಳ್ಳುವ ಯತ್ನ ನಡೆದಿದೆ ಎಂದು ಟಿಎಂಸಿ ಮೂಲಗಳು ಹೇಳುತ್ತಿವೆ.

‘ಮುಸ್ಲಿಂ ಮತಗಳು ವಿಭಜನೆಯಾದರೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಚಿಂತೆ ಟಿಎಂಸಿಗೆ ಇದೆ ಎಂಬುದುಮಮತಾ ಅವರ ಪ್ರತಿಕ್ರಿಯೆ ಗಮನಿಸಿದರೆ ಸ್ಪಷ್ಟವಾಗುತ್ತದೆ. ಕೂಚ್‌ಬಿಹಾರ್‌ ಗೋಲಿಬಾರ್‌ಗೆ ಟಿಎಂಸಿಯ ಪ್ರತಿಕ್ರಿಯೆ ಅತ್ಯಂತ ಉತ್ಕಟವಾಗಿತ್ತು. ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಪ್ರತಿಕ್ರಿಯೆ ನೀರಸವಾಗಿತ್ತು. ಟಿಎಂಸಿಯ ಉತ್ಕಟ ಪ್ರತಿಕ್ರಿಯೆಯೇ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಟಿಎಂಸಿ ಪರವಾಗಿ ಕ್ರೋಡೀಕರಿಸಬಹುದು’ ಎಂದು ರಾಜಕೀಯ ವಿಶ್ಲೇಷಕ ಸಿಗ್ಧೇಂದು ಭಟ್ಟಾಚಾರ್ಯ ಹೇಳುತ್ತಾರೆ.

ಈವರೆಗೆ ಟಿಎಂಸಿ ಬೆನ್ನಿಗೆ

ಇಲ್ಲಿನ 294 ಕ್ಷೇತ್ರಗಳ ಪೈಕಿ 125ರಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಫಲಿತಾಂಶ ಗಮನಿಸಿದರೆ, ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳಲು ಮಮತಾ ಏಕೆ ಇಷ್ಟೊಂದು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯದ 125 ಕ್ಷೇತ್ರಗಳ ಪೈಕಿ 85ರಲ್ಲಿ ಟಿಎಂಸಿ ಗೆದ್ದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ, ಈ 125 ಕ್ಷೇತ್ರಗಳ ಪೈಕಿ 98ರಲ್ಲಿ ಟಿಎಂಸಿ ಮುನ್ನಡೆ ಪಡೆದಿತ್ತು. ಒಟ್ಟು ಶೇ 46.90 ಮತಗಳನ್ನೂ ಗಳಿಸಿತ್ತು.

ದಕ್ಷಿಣ 24 ಪರಗಣ ಜಿಲ್ಲೆಯ ಮುಸ್ಲಿಮರ ನಡುವೆ ಸಿದ್ದಿಕಿಯ ಜನಪ್ರಿಯತೆಯು ಮಮತಾ ಅವರ ಚಿಂತೆಗೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಜಿಲ್ಲೆಯ ಎಲ್ಲ 31 ಕ್ಷೇತ್ರಗಳಲ್ಲಿ ಟಿಎಂಸಿಗೆ ಮುನ್ನಡೆ ಸಿಕ್ಕಿತ್ತು. ಆದರೆ, ಸಿದ್ದಿಕಿಯ ಪ್ರಭಾವದಿಂದಾಗಿ ಒಂದಷ್ಟು ಮತಗಳು ಟಿಎಂಸಿ ಕೈಬಿಡುವ ಸಾಧ್ಯತೆಯೇ ಅಧಿಕ.

ಇದರಿಂದಾಗಿ ಕೆಲವು ಕ್ಷೇತ್ರಗಳು ಐಎಸ್‌ಎಫ್‌ಗೆ ದಕ್ಕಬಹುದು. ಅಥವಾ ಮುಸ್ಲಿಮರ ಮತ ವಿಭಜನೆಯಾಗಿ ಬಿಜೆಪಿಗೆ ಲಾಭ ಆಗಬಹುದು. ಐಎಸ್‌ಎಫ್‌ನಿಂದಾಗಿ ಇನ್ನೊಂದು ಸಾಧ್ಯತೆಯೂ ಇದೆ. ಹಿಂದೂ ಮತಗಳು ಬಿಜೆಪಿ ಪರವಾಗಿ ಕ್ರೋಡೀಕರಣಗೊಳ್ಳಬಹುದು. ಈ ಮೂರೂ ಸಾಧ್ಯತೆಗಳಿಂಲೂ ಮಮತಾ ಅವರಿಗೆ ನಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT