ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮತ ಗಳಿಕೆ ಹೆಚ್ಚಳ: ಮಮತಾ, ಸ್ಟ್ಯಾಲಿನ್ ಅಧಿಕಾರಕ್ಕೆ: ಸಮೀಕ್ಷೆ

Last Updated 19 ಜನವರಿ 2021, 10:43 IST
ಅಕ್ಷರ ಗಾತ್ರ

ನವದೆಹಲಿ: ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಎಬಿಪಿ–ಸಿವೋಟರ್ ಅಭಿಪ್ರಾಯ ಸಮೀಕ್ಷೆ ತಿಳಿಸಿದೆ. ಇದೇ ವೇಳೆ, ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷವನ್ನು ಸೋಲಿಸಿ ಡಿಎಂಕೆ ಅಧಿಕಾರಕ್ಕೆ ಬರಬಹುದು ಎಂದು ಸಮೀಕ್ಷೆ ಉಲ್ಲೇಖಿಸಿದೆ.

ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪುದುಚೇರಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್‌ಡಿಎ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಸಮೀಕ್ಷೆ ಹೇಳಿದ್ದರೂ, 294 ಕ್ಷೇತ್ರಗಳಲ್ಲಿ ಟಿಎಂಸಿ ಪಕ್ಷವನ್ನು ಹಣಿಯಲು ಅದು ಸಾಕಾಗುವುದಿಲ್ಲ ಎಂದು ಹೇಳಿದೆ.

ತೃಣಮೂಲ ಕಾಂಗ್ರೆಸ್ 154–162 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದರೆ, ಬಿಜೆಪಿ 98–106 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. ಇನ್ನೂ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಟ್ಟಿಗೆ 26–34 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಮತ ಗಳಿಕೆ ಸಮೀಕ್ಷೆಯಲ್ಲಿ ಬಿಜೆಪಿ ಗಳಿಸುವ ಮತಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುವ ಸೂಚನೆ ಸಿಕ್ಕಿದೆ. 2016ರ ಚುನಾವಣೆಯಲ್ಲಿ ಶೇಕಡಾ 10.2ರಷ್ಟಿದ್ದ ಬಿಜೆಪಿ ಮತ ಗಳಿಕೆ ಪ್ರಮಾಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 37.5ಕ್ಕೆ ಏರಲಿದೆ ಎಂದು ಸಮೀಕ್ಷೆ ತಿಳಿಸಿದೆ. ತೃಣಮೂಲ ಕಾಂಗ್ರೆಸ್ ಮತ ಗಳಿಕೆ ಶೇ. 1.9 ರಷ್ಟು ಕುಸಿಯಲಿದ್ದು, ಶೇ.43ರಷ್ಟು ಮತ ಪಡೆಯಬಹುದು. ಆದರೆ, ಐದು ವರ್ಷಗಳ ಹಿಂದೆ ಶೇಕಡಾ 32 ರಷ್ಟು ಮತಗಳನ್ನು ಪಡೆದಿದ್ದ ಎಡ-ಕಾಂಗ್ರೆಸ್ ಪಕ್ಷಗಳು, ಈ ಬಾರಿ 11.8 ಶೇಕಡಾ ಮತಗಳನ್ನು ಪಡೆಯಲಿವೆ ಎನ್ನುತ್ತಿದೆ ಸಮೀಕ್ಷೆ. ಈ ಎರಡೂ ಪಕ್ಷಗಳು ಕಳೆದುಕೊಳ್ಳುವ ಬಹುಪಾಲು ಮತವನ್ನು ಬಿಜೆಪಿ ಪಡೆದುಕೊಳ್ಳಬಹುದು.

ಇತ್ತ, ನೆರೆಯ ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿ ಬೀಸಲಿದ್ದು, ತಮಿಳುನಾಡಿನ 234 ಕ್ಷೇತ್ರಗಳ ಪೈಕಿ 158–166 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಎಂ.ಕೆ. ಸ್ಟ್ಯಾಲಿನ್ ನೇತೃತ್ವದ ಡಿಎಂಕೆ ಪಕ್ಷ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಅಣ್ಣಾಡಿಎಂಕೆ ಪಕ್ಷವು 60–68 ಸ್ಥಾನಕ್ಕೆ ಕುಸಿಯಲಿದೆ. ಕಮಲ್ ಹಾಸನ್ ಅವರ ಎಂಎನ್‌ಎಂ ಪಕ್ಷವು ನಾಲ್ಕು ಸ್ಥಾನ, ಟಿಟಿಕೆ ದಿನಕರನ್ ಮತ್ತು ವಿ ಕೆ ಶಶಿಕಲಾ ನೇತೃತ್ವದ ಎಎಂಎಂಕೆ 2-6 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳುತ್ತಿದೆ.

ಈ ಸಮೀಕ್ಷೆಯನ್ನು ನಂಬುವುದಾದರೆ, ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರಲಿದೆ. 140 ಸದಸ್ಯರ ವಿಧಾನಸಭೆಯಲ್ಲಿ ಎಲ್‌ಡಿಎಫ್ 80-89 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 49-57 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ.

ಕೇರಳದಲ್ಲಿ ಕಂಗ್ರೆಸ್ ಅಧಿಕಾರದ ಆಸೆಗೆ ಸಮೀಕ್ಷೆ ತಣ್ಣೀರೆರಚಿದ್ದು, ಎಡಿಎಫ್ ಮತ್ತು ಯುಡಿಎಫ್ ಎರಡರ ಮತ ಹಂಚಿಕೆ ಪಾಲು ಸಹ ಕಡಿತಗೊಳ್ಳಲಿದೆ ಎಂದು ಸಮೀಕ್ಷೆ ಹೇಳುತ್ತೆ. ಬಿಜೆಪಿ ಈ ಬಾರಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದು, ಹಿಂದೂ ವೋಟ್ ಬ್ಯಾಂಕ್ ಮೇಲೆ ನಿಗಾ ಇಟ್ಟಿದೆ. ಇದರ ಹೊಡೆತ ಎಲ್‌ಡಿಎಫ್ ಮೇಲೆ ಬೀರಲಿದೆ ಎನ್ನುತ್ತೆ ಸಮೀಕ್ಷೆ.

ಅಸ್ಸಾಂನ 126 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 73-81 ಸ್ಥಾನಗಳೊಂದಿಗೆ ಸುಗಮವಾಗಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದರೆ, ಯುಪಿಎ 36 ರಿಂದ 44 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು.

ಪುದುಚೇರಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಗೆ ಸಮೀಕ್ಷೆಯಲ್ಲಿ ಕಹಿ ಸುದ್ದಿ ಬಂದಿದೆ. 30 ಸದಸ್ಯರ ವಿಧಾನಸಭೆಯಲ್ಲಿ ಆಡಳಿತಾರೂಢ ಒಕ್ಕೂಟವು 14–18ಕ್ಕೆ ಕುಸಿಯಲಿದ್ದು, ಬಿಜೆಪಿ 14–18 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಇದೆ. ಇಲ್ಲಿ ಎಂಎನ್ಎಂ ಸಹ ಒಂದು ಸ್ಥಾನನ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT