ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ದುವಿನಲ್ಲಿ ‘ಮನ್‌ ಕಿ ಬಾತ್‌’ ಪುಸ್ತಕ: ಮುಸ್ಲಿಮರ ತಲುಪಲು ಬಿಜೆಪಿ ಕ್ರಮ

Last Updated 24 ಮಾರ್ಚ್ 2023, 5:53 IST
ಅಕ್ಷರ ಗಾತ್ರ

ಲಖನೌ: 2024ರ ಲೋಕಸಭೆ ಚುನಾವಣೆ ವೇಳೆಗೆ ಪಶ್ಚಿಮ ಉತ್ತರಪ್ರದೇಶದ ಮುಸ್ಲಿಂ ಮತದಾರರನ್ನು ತಲುಪು ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ‘ಮನ್‌ ಕಿ ಬಾತ್‌’ ಕಾರ್ಯಕ್ರಮವನ್ನು ಉರ್ದು ಭಾಷೆಯಲ್ಲಿ ಪುಸ್ತಕ ರೂಪದಲ್ಲಿ ತಂದಿದೆ. ಇದನ್ನು ಮುಸ್ಲಿಂ ಸಮುದಾಯದ ಸದಸ್ಯರಿಗೆ ಹಂಚುವ ಯೋಜನೆ ಹಮ್ಮಿಕೊಂಡಿದೆ.

ಪಶ್ಚಿಮ ಉತ್ತರಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಧರ್ಮದ ಆಧಾರದ ಮೇಲೆ ಮುಸ್ಲಿಮರ ವಿರುದ್ಧ ತಾರತಮ್ಯ ನೀತಿ ಅನುಸರಿಸಿಲ್ಲ ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ಬಿಜೆಪಿ ಈ ಯೋಜನೆ ಹಮ್ಮಿಕೊಂಡಿದೆ.

2022ರಲ್ಲಿ ನಡೆದ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿರುವ ಪ್ರತಿ ಮಾತನ್ನೂ ಅಕ್ಷರ ರೂಪಕ್ಕೆ ಇಳಿಸಲಾಗಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳನ್ನು ಅಚ್ಚು ಮಾಡಲಾಗಿದೆ. ಈ ಪುಸ್ತಕಗಳ ಪ್ರತಿಗಳನ್ನು ಪ್ರಮುಖ ಮುಸ್ಲಿಂ ಮೌಲ್ವಿಗಳು ಮತ್ತು ಚಿಂತಕರಿಗೆ ಕಳಿಸಲಾಗಿದೆ. ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

ಈ ಪುಸ್ತಕವು 114 ಪುಟಗಳನ್ನು ಹೊಂದಿದೆ. ಮೋದಿ ಭಾಷಣವನ್ನು ಡಾ. ತಬೀಶ್‌ ಫರೀದಿ ಎಂಬುವವರು ಉರ್ದುಗೆ ಅನುವಾದ ಮಾಡಿದ್ದಾರೆ.

ಈ ಪುಸ್ತಕವನ್ನು ಆದಷ್ಟು ಬೇಗ ಬಿಡುಗಡೆ ಮಾಡಿ, ಮುಸ್ಲಿಮರಿಗೆ ವಿತರಿಸಲಾಗುವುದು. ಮುಸ್ಲಿಂ ಸಮುದಾಯವೂ ಕೇಂದ್ರದ ಯೋಜನೆಗಳ ಪ್ರಯೋಜನ ಪಡೆದಿದೆ ಎಂದು ಮುಸ್ಲಿಮರಿಗೆ ಮನವರಿಕೆ ಮಾಡಿಕೊಡುವುದು ಈ ಪುಸ್ತಕದ ಉದ್ದೇಶ ಎಂದು ಅವರು ಹೇಳಿದರು.

ದೇಶದ ಎಲ್ಲರ ಡಿಎನ್‌ಎ ಕೂಡ ಒಂದೇ ಎಂದು ಸಾರುವ ನಿಟ್ಟಿನಲ್ಲಿ ಪಶ್ಚಿಮ ಉತ್ತರಪ್ರದೇಶ ಜಿಲ್ಲೆಗಳಲ್ಲಿ ಮುಂದಿನ ತಿಂಗಳು ‘ಸ್ನೇಹ ಮಿಲನ– ಒಂದು ದೇಶ, ಒಂದು ಡಿಎನ್‌ಎ ಸಮ್ಮೇಳನ’ ಕಾರ್ಯಕ್ರಮ ಹಮ್ಮಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಬೆನ್ನಲ್ಲೇ ಪುಸ್ತಕ ಕುರಿತೂ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT