ಮಂಗಳವಾರ, ಆಗಸ್ಟ್ 3, 2021
20 °C

ಏಳು ವರ್ಷಗಳಲ್ಲಿ ಹಲವು ಹೆಮ್ಮೆ: ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಮ್ಮ ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ದೇಶ ಹಲವಾರು ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಬಿಜೆಪಿ ನೇತೃತ್ವದ  ಸರ್ಕಾರದ ಏಳನೇ ವಾರ್ಷಿಕೋತ್ಸವ ಸಂದರ್ಭದಲ್ಲಿ, ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನದ ಮಾತು’ ಮೂಲಕ ರಾಷ್ಟ್ರೀಯ ಭದ್ರತೆ ಸೇರಿದಂತೆ ಸರ್ಕಾರದ ಹಲವು ಅಭಿವೃದ್ಧಿ ಕಾರ್ಯಗಳನ್ನು ಅವರು ಮೆಲುಕು ಹಾಕಿದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಯಶಸ್ಸಿನ ಹಲವು ಪ್ರಯೋಗಗಳು ನಡೆದಿವೆ. ಯಶಸ್ಸಿನ ಜತೆಗೆ ಕೆಲವು ಹಿನ್ನಡೆಗಳೂ ಆಗಿವೆ. ಕೋವಿಡ್‌ ಪಿಡುಗು ಜನರ ಜೀವನಕ್ಕೆ ತೀವ್ರ ಹಾನಿ ಮಾಡಿ, ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ’ ಎಂದರು. ಭಾರತವು ಈ ಪಿಡುಗಿನ ವಿರುದ್ಧ ಮೇಲುಗೈ ಸಾಧಿಸುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ಮಾತುಕತೆಯ ಮಧ್ಯದಲ್ಲಿ ಅವರು ಆಮ್ಲಜನಕದ ಟ್ಯಾಂಕರ್‌ನ ಚಾಲಕ ದಿನೇಶ್ ಉಪಾಧ್ಯಾಯ, ಸರಕು ಸಾಗಾಟ ವಿಮಾನ ಚಾಲಕಿ ಶಿರಿಶಾ ಗಜನಿ, ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಪಟ್ನಾಯಕ್‌ ಹಾಗೂ ಕೊರೊನಾ ಪರೀಕ್ಷೆ ನಡೆಸುವ ಪ್ರಯೋಗಾಲಯದ ತಂತ್ರಜ್ಞ ಪ್ರಕಾಶ್‌ ಕಂದಪಾಲ್‌ ಜತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ, ಅವರ ಸೇವೆಯನ್ನು ಶ್ಲಾಘಿಸಿದರು.

‌ಮೋದಿ ಹೇಳಿದ್ದು...

*ಭಾರತ ಈಗ ಬೇರೆ ದೇಶಗಳ ಒತ್ತಡದಲ್ಲಿ ಮುನ್ನಡೆಯುತ್ತಿಲ್ಲ. ಬದಲಿಗೆ ತನ್ನದೇ ನಂಬಿಕೆ–ವಿಶ್ವಾಸಗಳೊಂದಿಗೆ ಮುನ್ನಡೆಯುತ್ತಿದೆ. ಇದರಿಂದ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಾಗಿದೆ

* ತನ್ನ ವಿರುದ್ಧ ಪಿತೂರಿ ಮಾಡುವವರಿಗೆ ಭಾರತ ಸೂಕ್ತ ಉತ್ತರ ನೀಡುತ್ತಿದೆ. ನಮ್ಮ ವಿಶ್ವಾಸ ಹೆಚ್ಚುತ್ತದೆ. ಹಾಗೆಯೇ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದಿದ್ದಾಗ, ನಮ್ಮ ಸಶಸ್ತ್ರ ಪಡೆಗಳ ಬಲ ಹೆಚ್ಚಾಗುತ್ತದೆ

* ಹಲವು ಹಳೆಯ ವಿವಾದಗಳು ಶಾಂತಿ ಮತ್ತು ಸೌಹಾರ್ದದಿಂದ ಬಗೆಹರಿದಿವೆ. ಈಶಾನ್ಯ ಭಾರತದಿಂದ ಕಾಶ್ಮೀರದವರೆಗೂ ಶಾಂತಿ ಮತ್ತು ಅಭಿವೃದ್ಧಿಯು ಹೊಸ ವಿಶ್ವಾಸವನ್ನು ಹುಟ್ಟುಹಾಕಿದೆ

*‘ಆಯುಷ್ಮಾನ್‌ ಯೋಜನೆ’ಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ಪಡೆದು ಏಳು ದಶಕಗಳ ನಂತರ ಅನೇಕ ಗ್ರಾಮಗಳು ವಿದ್ಯುತ್‌ ಸಂಪರ್ಕ ಪಡೆದಿವೆ. ಸುಸಜ್ಜಿತ ರಸ್ತೆಯ ಮೂಲಕ ಗ್ರಾಮಗಳನ್ನು ನಗರಕ್ಕೆ ಸಂಪರ್ಕಿಸಲಾಗಿದೆ

*ಕೊರೊನಾ ಪಿಡುಗು ನಮ್ಮನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸುತ್ತಿದೆ. ಎಷ್ಟೋ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇದರ ನಡುವೆಯೂ ಭಾರತ ಸೇವೆ ಮತ್ತು ಸಹಕಾರದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ

‘ರೈತರು ಹೆಚ್ಚು ದರ ಪಡೆದಿದ್ದಾರೆ’: ಪಿಡುಗಿನ ಸಂದರ್ಭದಲ್ಲೂ ರೈತರು ದಾಖಲೆಯ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದಾರೆ. ಕೃಷಿ ಕ್ಷೇತ್ರವು ಪಿಡುಗಿನಿಂದ ತನ್ನನ್ನು ರಕ್ಷಿಸಿಕೊಂಡಿದೆ. ಸರ್ಕಾರವು ರೈತರಿಂದ ದಾಖಲೆ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿದೆ. ಅನೇಕ ಕಡೆಗಳಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರವನ್ನು ಪಡೆದಿದ್ದಾರೆ ಎಂದು ಮೋದಿ ಹೇಳಿದರು.

ರೈತರ ಉತ್ಪನ್ನಗಳ ಸಾಗಾಟಕ್ಕೆ ಸರ್ಕಾರವು ಆರಂಭಿಸಿದ ‘ಕಿಸಾನ್‌ ರೈಲ್‌’ ಸೇವೆಯನ್ನು ಉಲ್ಲೇಖಿಸುತ್ತಾ, ‘ಸುಮಾರು ಎರಡು ಲಕ್ಷ ಟನ್‌ನಷ್ಟು ಉತ್ಪನ್ನಗಳನ್ನು ಕಿಸಾನ್‌ ರೈಲ್‌ ಮೂಲಕ ದೇಶದ ಬೇರೆಬೇರೆ ಭಾಗಗಳಿಗೆ ಸಾಕಾಣಿಕೆ ಮಾಡಲಾಗಿದೆ. ತಾವು ಬೆಳೆದ ತರಕಾರಿ, ಹಣ್ಣು–ಹಂಪಲವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ದೇಶದ ಹಳ್ಳಿಹಳ್ಳಿಗೆ ಕಳುಹಿಸಲು ಈಗ ರೈತರಿಗೆ ಸಾಧ್ಯವಾಗಿದೆ’ ಎಂದರು.

ಕೆಲವು ಉತ್ಪನ್ನಗಳ ರಫ್ತು ಸಹ ಆರಂಭವಾಗಿದೆ. ತ್ರಿಪುರಾದ ಹಲಸಿನಹಣ್ಣುಗಳು, ಬಿಹಾರದ ಲಿಚಿಯನ್ನು ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ. ದಕ್ಷಿಣ ಭಾರತದ ವಿಜಯನಗರದಲ್ಲಿ ಬೆಳೆಯುವ ರಸಭರಿತ ಮಾವಿನ ಹಣ್ಣಿನ ರುಚಿಯನ್ನು ಈಗ ಉತ್ತರ ಭಾರತದವರೂ ಸವಿಯುತ್ತಿದ್ದಾರೆ ಎಂದರು.

‘ಈಗಿನ ಕೇಂದ್ರ ಸರ್ಕಾರ ದೇಶಕ್ಕೆ ಮಾರಕ’: ಏಳನೇ ವಾರ್ಷಿಕೋತ್ಸವ ಆಚರಿಸಿಕೊಂಡ ಬೆನ್ನಲ್ಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ. ಜನರು ಪ್ರಧಾನಿ ಮೇಲೆ ಇಟ್ಟಿದ್ದ ಭರವಸೆಗೆ ದ್ರೋಹ ಬಗೆದಿರುವ ಈ ಸರ್ಕಾರ ದೇಶಕ್ಕೇ ಮಾರಕವಾಗಿದೆ ಎಂದಿದೆ.

‘ಮೋದಿ ನೇತೃತ್ವದ ಸರ್ಕಾರದ ಏಳು ವರ್ಷಗಳ ಆಡಳಿತದಲ್ಲಿ ದೇಶವು ಹಿಂದೆಂದೂ ಕಂಡಿಲ್ಲದ ವಿನಾಶಕ್ಕೆ ಸಾಕ್ಷಿಯಾಗಿದೆ. ಈ ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಂಡಿದೆ ಮತ್ತು  ಜನರು ತೋರಿದ ಪ್ರೀತಿಗೆ ದ್ರೋಹ ಬಗೆದಿದೆ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದಾರೆ. ಅಸಂಖ್ಯ ಭರವಸೆಗಳ ಆಧಾರದ ಮೇಲೆ ಸರ್ಕಾರವನ್ನು ಚುನಾಯಿಸಿದ ದೇಶದ 140 ಕೋಟಿ ಜನರನ್ನು ಈ ಸರ್ಕಾರವು ಅತ್ಯಂತ ಕೆಟ್ಟ ರೀತಿಯಲ್ಲಿ ವಂಚಿಸಿದೆ. ಏಳು ವರ್ಷಗಳ ಬಳಿಕ ದೇಶ ಏಕೆ ಇಷ್ಟೊಂದು ಸಂಕಷ್ಟ ಅನುಭವಿಸುತ್ತಿದೆ ಎಂದು ಕೇಳುವ ಸಮಯ ಬಂದಿದೆ ಎಂದಿದ್ದಾರೆ. 

ಸರ್ಕಾರದ ವೈಫಲ್ಯಗಳನ್ನು ಕುರಿತು ‘ಏಳು ಅಂಶಗಳ ಪ್ರಮಾದ ಪಟ್ಟಿ’ಯನ್ನು ಕಾಂಗ್ರೆಸ್‌ ಹೊರತಂದಿದೆ. ಅದರಲ್ಲಿ ಕೋವಿಡ್‌–19 ಸಾಂಕ್ರಾಮಿಕ ನಿರ್ವಹಣೆ, ಆರ್ಥಿಕ ಕುಸಿತ, ನಿರುದ್ಯೋಗ ಹೆಚ್ಚಳ, ಹಣದುಬ್ಬರಗಳಂಥ ವಿಷಯಗಳನ್ನು ಮುಖ್ಯವಾಗಿರಿಸಿಕೊಂಡಿದೆ. ಜೊತೆಗೆ, ಜಿಎಸ್‌ಟಿ, ನೋಟು ರದ್ದತಿ ಮತ್ತು ಇತರ ಹಲವಾರು ಉಪಕ್ರಮಗಳು ಮೋದಿ ತಂದಿಟ್ಟಿರುವ ವಿಪತ್ತುಗಳು ಎಂದು ಟೀಕಿಸಿದೆ.

ಹಿಂದಿನ ಸರ್ಕಾರಗಳು ಏಳು ದಶಕಗಳಲ್ಲಿ ಮಾಡಲಾಗದ ಕೆಲಸಗಳನ್ನು ತಮ್ಮ ಸರ್ಕಾರ ಏಳು ವರ್ಷಗಳಲ್ಲಿ ಮಾಡಿದೆ ಎಂದು ಮೋದಿ ಅವರು ತಮ್ಮ ಮನದ ಮಾತು ಬಾನುಲಿ ಕಾರ್ಯಕ್ರಮದಲ್ಲಿ ಹೇಳಿದ್ದರು. ಅದಕ್ಕೆ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದೆ. 60 ವರ್ಷಗಳ ಕಾಂಗ್ರೆಸ್‌ ಸಾಧನೆ ಮತ್ತು ಏಳು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಹಾನಿ ಕುರಿತ ‘ಭಾರತ್‌ ಮಾತಾ ಕಿ ಕಹಾನಿ’ ಎಂಬ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಇದಲ್ಲದೇ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡಾ ಸರ್ಕಾರದ ವೈಫಲ್ಯವನ್ನು ಟೀಕಿಸಿ ಟ್ವೀಟ್‌ ಮಾಡಿದ್ದಾರೆ. ‘ಕೊರೊನಾ ವಿರುದ್ಧ ಹೋರಾಡಲು ಸರಿಯಾದ ಆಶಯ, ದೃಢ ನಿರ್ಧಾರ ಮತ್ತು ನೀತಿಯ ಅಗತ್ಯವಿದೆಯೇ ಹೊರತು ತಿಂಗಳಿಗೊಮ್ಮೆ ಮಾಡುವ ರೇಡಿಯೊ ಭಾಷಣಗಳಲ್ಲ’ ಎಂದಿದ್ದಾರೆ.

ಈ ಎಲ್ಲಾ ಆರೋಪಗಳಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು ಜನರಿಗೆ ನೆರವು ನೀಡುವ ಕೆಲಸಗಳಲ್ಲಿ ತೊಡಗಿದ್ದಾಗ ವಿರೋಧ ಪಕ್ಷಗಳು ಕ್ವಾರಂಟೈನ್‌ನಲ್ಲಿ ಇದ್ದವು. ಆನ್‌ಲೈನ್‌ ಮಾಧ್ಯಮಗೋಷ್ಠಿಗಳಲ್ಲಿ ಮಾತ್ರ ವಿರೋಧ ಪಕ್ಷದ ನಾಯಕರು ಕಾಣಿಸಿಕೊಂಡರು. ಇನ್ನೂ ಕೆಲವು ರಾಜಕೀಯ ಮುಖಂಡರು ಲಾಕ್‌ಡೌನ್‌ ಕುರಿತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವಲ್ಲಿ ನಿರತರಾಗಿದ್ದರು ಎಂದು ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು