ಮಂಗಳವಾರ, ಮಾರ್ಚ್ 2, 2021
18 °C

ಭಾರತದ ತಾಳ್ಮೆ ಪರೀಕ್ಷಿಸುವ ತಪ್ಪು ಮಾಡಬೇಡಿ: ಚೀನಾಗೆ ಎಂ.ಎಂ.ನರವಣೆ ಖಡಕ್‌ ಸಂದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಖಡಾನ್‌ನಲ್ಲಿ ಗಡಿ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಚೀನಾಗೆ ಖಡಕ್‌ ಸಂದೇಶ ನೀಡಿರುವ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ, ‘ಭಾರತದ ತಾಳ್ಮೆಯನ್ನು ಪರೀಕ್ಷಿಸುವ ತಪ್ಪನ್ನು ಯಾರೂ ಮಾಡಬಾರದು’ ಎಂದಿದ್ದಾರೆ. ಜೊತೆಗೆ ಏಕಪಕ್ಷೀಯವಾಗಿ ವಾಸ್ತವ ನಿಯಂತ್ರಣ ರೇಖೆಯನ್ನು(ಎಲ್‌ಎಸಿ) ಬದಲಾಯಿಸುವ ಸಂಚಿಗೆ ಭಾರತವು ತಕ್ಕ ಪ್ರತ್ಯುತ್ತರವನ್ನು ನೀಡಿದೆ ಎಂದರು.

ಮಾತುಕತೆಯ ಮೂಲಕವೇ ಕಳೆದ ಎಂಟು ತಿಂಗಳಿಂದ ಚೀನಾ ಜೊತೆ ಮುಂದುವರಿದಿರುವ ಸೇನಾ ಬಿಕ್ಕಟ್ಟನ್ನು ಪರಿಹರಿಸಲು ಭಾರತವು ಬದ್ಧವಾಗಿದೆ ಎಂದು ನರವಣೆ ಇದೇ ವೇಳೆ ಹೇಳಿದರು. 

ದೆಹಲಿ ಕಂಟೋನ್ಮೆಂಟ್‌ನಲ್ಲಿ ಸೇನಾ ದಿನದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ ಜೂನ್‌ನಲ್ಲಿ ಪೂರ್ವ ಲಡಾಖ್‌ನಲ್ಲಿ ‘ಗಲ್ವಾನ್‌ ಹೀರೊ’ಗಳ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ದೇಶದ ಸಾರ್ವಭೌಮತೆ ಹಾಗೂ ಭದ್ರತೆಗೆ ಯಾವುದೇ ಹಾನಿಯಾಗಲು ಭಾರತೀಯ ಸೇನೆಯು ಬಿಡುವುದಿಲ್ಲ’ ಎಂದರು.

ಇದನ್ನೂ ಓದಿ: 

‘ಬಿಕ್ಕಟ್ಟನ್ನು ಮಾತುಕತೆ ಹಾಗೂ ರಾಜಕೀಯ ಪ್ರಯತ್ನದ ಮುಖಾಂತರವೇ ಪರಿಹರಿಸಲು ನಾವು ಬದ್ಧರಾಗಿದ್ದೇವೆ. ಆದರೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ತಪ್ಪು ಮಾಡಬೇಡಿ’ ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಹಾಗೂ ವಾಯುಪಡೆ ಮುಖ್ಯಸ್ಥ ಏರ್ ಚೀಫ್‌ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಅವರ ಸಮ್ಮುಖದಲ್ಲೇ ನರವಣೆ ಹೇಳಿದರು. 

ಎಲ್‌ಒಸಿಯಲ್ಲಿನ ಸ್ಥಿತಿಯ ಕುರಿತು ಪ್ರಸ್ತಾಪಿಸಿದ ಅವರು, ‘ಪಾಕಿಸ್ತಾನವು ಉಗ್ರರಿಗೆ ಆಶ್ರಯ ನೀಡುವುದನ್ನು ಮುಂದುವರಿಸಿದೆ. ಎಲ್‌ಒಸಿಯ ಪಾಕಿಸ್ತಾನದ ಕಡೆಯಲ್ಲಿರುವ ಶಿಬಿರಗಳಲ್ಲಿ 300–400 ಉಗ್ರರಿದ್ದು, ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ’ ಎಂದರು. ‘ಕದನ ವಿರಾಮ ಉಲ್ಲಂಘನೆಯು ಶೇ 44 ಹೆಚ್ಚಳವಾಗಿದ್ದು, ಉಗ್ರರು ಒಳನುಸುಳಲು ಸಹಾಯವಾಗುವಂತೆ ಈ ಕೃತ್ಯವನ್ನು ನೆರೆ ರಾಷ್ಟ್ರವು ನಡೆಸುತ್ತಿರುವುದಕ್ಕೆ ಸಾಕ್ಷ್ಯವಾಗಿದೆ. ಡ್ರೋನ್‌ ಹಾಗೂ ಸುರಂಗದ ಮುಖಾಂತರ ಜಮ್ಮು ಮತ್ತು ಕಾಶ್ಮೀರದೊಳಗೆ ಶಸ್ತ್ರಗಳನ್ನು ಸಾಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡುತ್ತಿದೆ. ಎಲ್‌ಒಸಿಯಲ್ಲಿ ಕಳೆದ ವರ್ಷ, ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ 200ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು