ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಮಠ: ಅಸುರಕ್ಷಿತ 2 ಹೋಟೆಲ್‌ಗಳ ಕಟ್ಟಡಗಳ ತೆರವು ಶುರು

ಮುನ್ನೆಚ್ಚರಿಕೆ ಕಾರ್ಯಾಚರಣೆ ಪುನರಾರಂಭಿಸಿದ ಉತ್ತರಾಖಂಡ ಸರ್ಕಾರ
Last Updated 12 ಜನವರಿ 2023, 19:31 IST
ಅಕ್ಷರ ಗಾತ್ರ

ನವದೆಹಲಿ/ಹೈದರಾಬಾದ್/ಜೋಶಿಮಠ: ಮುಳುಗುತ್ತಿರುವ ಉತ್ತರಾಖಂಡದ ಜೋಶಿಮಠದಲ್ಲಿ ಅಸುರಕ್ಷಿತವೆಂದು ಪರಿಗಣಿಸಿದ ಎರಡು ಹೋಟೆಲ್‌ಗಳ ಕಟ್ಟಡಗಳ ತೆರವು ಕಾರ್ಯಾಚರಣೆ, ಸಂತ್ರಸ್ತರ ಜತೆಗಿನ ಪರಿಹಾರ ಒಪ್ಪಂದದ ನಂತರ ಗುರುವಾರ ಸಂಜೆ ಪುನಃ ಆರಂಭವಾಗಿದೆ.

‘ಮಲಾರಿ ಇನ್’ ಮತ್ತು ‘ಮೌಂಟ್ ವ್ಯೂ’ ಹೋಟೆಲ್‌ಗಳ ಕಟ್ಟಡಗಳಲ್ಲಿ ಭಾರಿ ಬಿರುಕು ಕಾಣಿಸಿ, ಅಕ್ಕಪಕ್ಕದ ಜನವಸತಿಗೆ ಅಪಾಯಕಾರಿಯಾಗಿ ವಾಲಿದ್ದವು. ಇವುಗಳ ತೆರವಿಗೆ ಸರ್ಕಾರ ಸೋಮವಾರ ನಿರ್ಧಾರ ತೆಗೆದುಕೊಂಡಿತ್ತು.

ಮಂಗಳವಾರ ತೆರವಿಗೆ ಮುಂದಾದಾಗ, ಸೂಕ್ತ ಪರಿಹಾರ ನೀಡದೆ ಕಟ್ಟಡ ತೆರವು ಮಾಡದಂತೆ ಹೋಟೆಲ್‌ ಮಾಲೀಕರು ಮತ್ತು ಸ್ಥಳೀಯರು ಪಟ್ಟು ಹಿಡಿದು ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದರು. ಇದರ ಜತೆಗೆ ಬದರೀನಾಥ ಮಾರ್ಗದ ನಿವಾಸಿಗಳೂ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು. ಇದರಿಂದ ತೆರವು ಕಾರ್ಯಾಚರಣೆ ಸ್ಥಗಿತವಾಗಿತ್ತು.

‘ಮಲಾರಿ ಇನ್’ ಹೋಟೆಲ್ ತೆರವು ಕಾರ್ಯ ರೂರ್ಕೀಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಸಿಬಿಆರ್‌ಐ) ತಾಂತ್ರಿಕ ಮೇಲ್ವಿಚಾರಣೆಯಲ್ಲಿ ಪ್ರಾರಂಭವಾಗಿದೆ. ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿಯಾಗದಂತೆ ಮೊದಲು, ಹೋಟೆಲ್‌ ಮೇಲ್ಛಾವಣಿಯ ಶೀಟ್‌ ಮತ್ತು ಕಬ್ಬಿಣವನ್ನು ಜೆಸಿಬಿಯಿಂದ ತೆರವು ಮಾಲಾಗುವುದು’ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಸಿನ್ಹಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಯನಕ್ಕೆ ತಜ್ಞರ ತಂಡ: ಜೋಶಿಮಠದ ಭೂಕುಸಿತ ಅಧ್ಯಯನ ನಡೆಸಲು ಕ್ಕೆ ಹೈದರಾಬಾದ್‌ನ ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಹತ್ತು ವಿಜ್ಞಾನಿಗಳ ತಂಡ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಿದೆ. ಶುಕ್ರವಾರ ಸ್ಥಳ ತಲುಪಲಿದ್ದು, ಎರಡು ವಾರ ಅಧ್ಯಯನ ನಡೆಯಲಿದೆ ಎಂದು ಹಿರಿಯ ವಿಜ್ಞಾನಿ ಆನಂದ್ ಕೆ. ಪಾಂಡೆ ತಿಳಿಸಿದ್ದಾರೆ.

ಮಾರುಕಟ್ಟೆ ದರದ ಪರಿಹಾರ– ಸಿ.ಎಂ
ಜೋಶಿಮಠದ ಸಂತ್ರಸ್ತರ ಬೇಡಿಕೆಯಂತೆ ಮಾರುಕಟ್ಟೆ ದರದ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಧ್ಯಂತರ ಪರಿಹಾರಕ್ಕಾಗಿ ಈಗಾಗಲೇ ₹45 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ಸಂತ್ರಸ್ತರ ಬ್ಯಾಂಕ್‌ ಖಾತೆಗೆ ತಲಾ ₹1.50 ಲಕ್ಷ ಮಧ್ಯಂತರ ಪರಿಹಾರ ಶುಕ್ರವಾರ ಸಂಜೆಯೊಳಗೆ ಜಮೆಯಾಗಲಿದೆ. ಅಂತಿಮ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್‌ ರೂಪಿಸಲಾಗುತ್ತಿದೆ. ಸಂತ್ರಸ್ತರಿಗೆ ಮಾರುಕಟ್ಟೆ ದರದ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಗುರುವಾರ ಹೇಳಿದರು.

ಹಾನಿಗೀಡಾದ ಮನೆ, ಜಮೀನುಗಳ ಪ್ರಸ್ತುತ ಮಾರುಕಟ್ಟೆ ದರ ನಿಗದಿಗೆ ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ನೇತೃತ್ವದ 19 ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಧಾಮಿ ಹೇಳಿದರು.

‘ಜೋಶಿಮಠದ ಸ್ಥಿತಿಯನ್ನು ಅಪಾಯಕಾರಿಯಾಗಿ ಬಿಂಬಿಸುವುದು ತಪ್ಪು. ಇದು ಸ್ಥಳೀಯರ ಜೀವನೋಪಾಯ, ಸ್ಥಳೀಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಪಟ್ಟಣದಲ್ಲಿ ಶೇ 20ರಿಂದ 25ರಷ್ಟು ಅಂದರೆ 600ರಿಂದ 700 ಮನೆಗಳಿಗೆ ಹಾನಿಯಾಗಿದೆ ಅಷ್ಟೇ. ಇಡೀ ಪಟ್ಟಣ ಮುಳುಗುತ್ತಿದೆ ಎನ್ನುವುದು ನಿಜವಲ್ಲ. ’ ಎಂದು ಧಾಮಿ ಹೇಳಿದ್ದಾರೆ.

ಕೇಂದ್ರ ಸಚಿವರ ಭೇಟಿ: ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಾಲ್ವರು ಸಂಪುಟ ಸಹೋದ್ಯೋಗಿಗಳ ಜತೆ ಜೋಶಿಮಠಕ್ಕೆ ಭೇಟಿ ನೀಡಿ, ಉಲ್ಬಣಿಸುತ್ತಿರುವ ಪರಿಸ್ಥಿತಿ ಮತ್ತು ಸಂತ್ರಸ್ತರ ಸಂಕಷ್ಟ ಪರಿಹರಿಸಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

ಅಮಿತ್‌ ಶಾ ಅವರ ಜತೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಇಂಧನ ಸಚಿವ ಆರ್‌.ಕೆ. ಸಿಂಗ್‌, ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್‌, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಇದ್ದರು.

ಸೇನಾ ತುಕಡಿಗಳ ಸ್ಥಳಾಂತರ: ಮನೋಜ್‌ ಪಾಂಡೆ
ಚೀನಾ ಗಡಿಯ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಸಮೀಪದ ಜೋಶಿಮಠದ ಸುತ್ತಮುತ್ತಲಿನಿಂದ ಕೆಲವು ಸೈನಾ ತುಕಡಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ತಿಳಿಸಿದರು.

ಜೋಶಿಮಠದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಸೇನಾ ನೆಲೆಗಳಲ್ಲಿ ಸಣ್ಣ, ಮಧ್ಯಮ ಪ್ರಮಾಣದ ಹಾನಿಯಾಗಿದೆ. ಸೇನೆ ಸನ್ನದ್ಧತೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದರು.

ಚೀನಾ ಜತೆಗಿನ ಎಲ್‌ಎಸಿ ಗಡಿ ರಕ್ಷಣೆಗೆ ಜೋಶಿಮಠ ಭಾರತೀಯ ಸೇನೆಗೆ ಕಾರ್ಯತಂತ್ರದ ನೆಲೆ ಎನಿಸಿದೆ. ಇಲ್ಲಿ 20,000ಕ್ಕೂ ಹೆಚ್ಚು ಸೈನಿಕರು, ಫಿರಂಗಿ ಮತ್ತು ಕ್ಷಿಪಣಿ ವ್ಯವಸ್ಥೆಗಳು, ಸೇನಾ ಯಂತ್ರೋಪಕರಣ ನಿಯೋಜಿಸಲಾಗಿದೆ.

‘ಸಂತ್ರಸ್ತರಿಗೆ ಪುನರ್ವಸತಿಗೆ ವ್ಯವಸ್ಥೆ’
‘ಸಂತ್ರಸ್ತರ ಪುನರ್ವಸತಿ ಕಲ್ಪಿಸಲು ಆಡಳಿತ ಕಾರ್ಯನಿರತವಾಗಿದ್ದು, ಪುನರ್ವಸತಿ ಪ್ಯಾಕೇಜ್ ಸಿದ್ಧವಾಗುತ್ತಿದೆ’ ಎಂದು ಉತ್ತರಾಖಂಡ ಸರ್ಕಾರವು ಗುರುವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ.

ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಗಳನ್ನು ಇಲ್ಲಿಗೆ ನಿಯೋಜಿಸಿದ್ದು ಸಾಕಷ್ಟು ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ರಾಜ್ಯ ಸರ್ಕಾರವು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣಿಯಂ ಪ್ರಸಾದ್‌ ಅವರಿದ್ದ ಪೀಠಕ್ಕೆ ತಿಳಿಸಿತು.

ಪರಿಹಾರ ಪ್ಯಾಕೇಜ್‌ ರೂಪಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಲು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಪೀಠ, ಫೆ.3ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT