ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

Last Updated 24 ಡಿಸೆಂಬರ್ 2022, 12:49 IST
ಅಕ್ಷರ ಗಾತ್ರ

ಲಖನೌ: ಶ್ರೀಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಸಮೀಕ್ಷೆಗೆ ಮಥುರಾದ ಜಿಲ್ಲಾ ನ್ಯಾಯಾಲಯವು ಶನಿವಾರ ಆದೇಶ ನೀಡಿದೆ.

ಹಿಂದೂ ಸೇನಾದ ಅಧ್ಯಕ್ಷ ವಿಷ್ಣು ಗುಪ್ತಾ ಮತ್ತು ಉಪಾಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೂರನೇ ಸಿವಿಲ್ ನ್ಯಾಯಾಧೀಶರಾದ ಸೋನಿಕಾ ವರ್ಮಾ ಅವರು ಈ ಆದೇಶ ನೀಡಿದ್ದಾರೆ. ವಿವಾದಿತ ಸ್ಥಳದ ಸರ್ವೆಯನ್ನು ನಡೆಸಿ ಜ.20ರೊಳಗೆ ವರದಿ ಸಲ್ಲಿಸುವಂತೆ ‘ಅಮಿನ್’ಗೆ (ಕಂದಾಯ ಅಧಿಕಾರಿ) ನ್ಯಾಯಾಲಯವು ಅದೇಶಿಸಿದ್ದು, ಈ ಪ್ರಕರಣವು ಮತ್ತೆ ವಿಚಾರಣೆಗೆ ಬರಲಿದೆ.

ಶ್ರೀಕೃಷ್ಣ ಜನ್ಮಭೂಮಿಯ ಒಂದು ಭಾಗವನ್ನು ಕೆಡವಿ, ಮೊಘಲ್ ದೊರೆ ಔರಂಗಜೇಬನು ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಅರ್ಜಿದಾರರಾದ ಗುಪ್ತಾ ಮತ್ತು ಯಾದವ್ ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.

ಅರ್ಜಿದಾರರು ತಾವು ವಾಸಿಸುತ್ತಿರುವ 13.37 ಎಕರೆ ಪ್ರದೇಶದ ಮಾಲೀಕತ್ವವನ್ನು ಪ್ರತಿಪಾದಿಸಿದ್ದಾರೆ. ಶಾಹಿ ಈದ್ಗಾ ಮಸೀದಿ ಅಸ್ತಿತ್ವದಲ್ಲಿರಲು ಹಾಗೂ ಅದರ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ನೀಡಿರುವ ಶಾಹಿ ಈದ್ಗಾ ಮಸೀದಿ ಸಮಿತಿ ಮತ್ತು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ನ 1968ರ ಒಪ್ಪಂದವನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

‘ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ವೀಡಿಯೋಗ್ರಾಫಿ ಸಮೀಕ್ಷೆಯ ಮಾದರಿಯಲ್ಲಿಯೇ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ವೀಡಿಯೊಗ್ರಾಫಿ ಸಮೀಕ್ಷೆ ಮಾಡಬೇಕು’ ಎಂದೂ ಅರ್ಜಿದಾರರು ಕೋರಿದ್ದಾರೆ.

ಶ್ರೀಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದಂತೆ ಮಥುರಾ ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು ಒಂಬತ್ತು ಅರ್ಜಿಗಳು ಬಾಕಿ ಉಳಿದಿವೆ. ಎಲ್ಲಾ ಅರ್ಜಿಗಳನ್ನು ಹಿಂದೂ ಪಕ್ಷಗಳು ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT