ಬುಧವಾರ, ಜನವರಿ 26, 2022
26 °C

ದೆಹಲಿ ವಿಧಾನಸಭೆ ಆವರಣದಲ್ಲಿ ಕೊರೊನಾ ವಾರಿಯರ್ಸ್ ಸ್ಮಾರಕ: ರಾಮ್ ನಿವಾಸ್ ಗೋಯಲ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಸೇವೆ ಸಲ್ಲಿಸಿ ಪ್ರಾಣ ತ್ಯಾಗ ಮಾಡಿದ 'ಕೊರೊನಾ ವಾರಿಯರ್ಸ್‌'ಗಳ ಸ್ಮರಣಾರ್ಥ ವಿಧಾನಸಭೆ ಆವರಣದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಭಾನುವಾರ ತಿಳಿಸಿದ್ದಾರೆ.

ವೈದ್ಯರು, ದಾದಿಯರು, ಸ್ಯಾನಿಟೈಸೇಷನ್ ಕಾರ್ಯಕರ್ತರು ಮತ್ತು ಶಿಕ್ಷಕರು ಸೇರಿದಂತೆ ಸಾಕಷ್ಟು ಮಂದಿ ಕೋವಿಡ್ ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಅವರೆಲ್ಲ ಜನರ ಜೀವ ಉಳಿಸುವುದಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಅತ್ಯುನ್ನತ ಸೇವೆಯನ್ನು ಪರಿಗಣಿಸಿ, ದೆಹಲಿ ವಿಧಾನಸಭೆ ಆವರಣದಲ್ಲಿ ಕೊರೊನಾ ವಾರಿಯರ್ಸ್ ಸ್ಮಾರಕ ನಿರ್ಮಿಸಲಾಗುವುದು. ವಾರಿಯರ್‌ಗಳ ಕರ್ತವ್ಯದ ಬಗೆಗಿನ ಮಾಹಿತಿಯನ್ನು ಹೊಂದಿರುವ ಶಾಸನಗಳನ್ನು ನಿರ್ಮಿಸಲಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ.

ಶಾಸನಗಳು ಕೊರೊನಾ ವಾರಿಯರ್ಸ್‌ಗಳ ಸೇವೆಯನ್ನು ಪ್ರತಿನಿಧಿಸುವ ಸೂಚಕಗಳನ್ನು ಹೊಂದಿರಲಿವೆ. ಈ ಬಗ್ಗೆ ಮಾತನಾಡಿರುವ ಗೋಯಲ್, 'ಸಣ್ಣ ಗೋಡೆ ಮಾದರಿಯ ವಿನ್ಯಾಸದ ಮೇಲೆ ಕೊರೊನಾ ವಾರಿಯರ್ಸ್‌ಗಳನ್ನು ಪ್ರತಿನಿಧಿಸುವ ಸ್ಟೆಥೋಸ್ಕೋಪ್, ರಕ್ತದೊತ್ತಡ ಪರೀಕ್ಷಿಸುವ ಯಂತ್ರ, ಪುಸ್ತಕ, ಪೊರಕೆ, ಇಂಜೆಕ್ಷನ್‌ ಹಾಗೂ ಇತ್ಯಾದಿ ಗುರುತುಗಳನ್ನು ಕೆತ್ತಲಾಗುತ್ತದೆ. ಸಿದ್ಧತೆ ಪೂರ್ಣಗೊಂಡಿದ್ದು, ಯೋಜನೆಯ ಕಾರ್ಯ ಆರಂಭವಾಗಿದೆ. ಸ್ಮಾರಕದ ಉದ್ಘಾಟನೆ ಮುಂದಿನ ವರ್ಷ ಜನವರಿ 26ಕ್ಕೆ ನೆರವೇರುವ ವಿಶ್ವಾಸವಿದೆ' ಎಂದಿದ್ದಾರೆ.

ಸ್ಮಾರಕವನ್ನು ವಿಧಾನಸಭೆ ಪ್ರವೇಶ ದ್ವಾರದ ಬಳಿ ಇರುವ ವಿಠಲ್‌ಭಾಯ್ ಪಟೇಲ್ ಪ್ರತಿಮೆಯ ಹಿಂದೆ ನಿರ್ಮಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು