ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯ ಕೊರತೆಯಿಂದ ಭದ್ರತಾ ಲೋಪ: ಪರಿಣತರ ಅಭಿಪ್ರಾಯ

ಪ್ರಧಾನಿಯ ಭದ್ರತೆ ಪೊಲೀಸ್‌, ಎಸ್‌ಪಿಜಿ, ಗುಪ್ತಚರ ಸಂಸ್ಥೆಗಳ ಹೊಣೆ
Last Updated 7 ಜನವರಿ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಉಂಟಾದ ಭದ್ರತಾ ಲೋಪಕ್ಕೆ ಅತಿ ಗಣ್ಯ ವ್ಯಕ್ತಿಗಳ ಭದ್ರತೆಯ ಹೊಣೆ ಹೊತ್ತಿರುವ ಸಂಸ್ಥೆಗಳ ನಡುವಣ ಸಮನ್ವಯದ ಕೊರತೆಯೇ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪ್ರಕರಣಗಳಲ್ಲಿ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ನಿಗದಿಗೆ ಕಾನೂನಿನಲ್ಲಿ ಇರುವ ಅವಕಾಶಗಳು ಶಿಫಾರಸು ಸ್ವರೂಪದಲ್ಲಷ್ಟೇ ಇವೆ ಎಂದು ಅವರು ಹೇಳಿದ್ದಾರೆ.

‘ಪ್ರಧಾನಿಯ ಭದ್ರತೆಯ ವಿಚಾರವು ನಮ್ಮ ಒಕ್ಕೂಟ ವ್ಯವಸ್ಥೆಯ ಹಾಗೆಯೇ ಪೊಲೀಸ್‌ ಮತ್ತು ಎಸ್‌ಪಿಜಿಯ ಪರಸ್ಪರ ವಿಶ್ವಾಸದ ಬಲವಾದ ಬಂಧದ ಮೇಲೆ ನಿಂತಿದೆ. ಪ್ರಧಾನಿಯ ಸಂಚಾರಕ್ಕೆ ಸುರಕ್ಷಿತವಾದ ಮಾರ್ಗವನ್ನು ಖಾತರಿಪಡಿಸುವುದು ರಾಜ್ಯ ಪೊಲೀಸರ ಪೂರ್ಣ ಹೊಣೆಗಾರಿಕೆಯಾಗಿದೆ’ ಎಂದು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮಾಜಿ ಮಹಾ ನಿರ್ದೇಶಕ ಸುದೀಪ್‌ ಲಖ್‌ತಕಿಯ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್‌ ಭೇಟಿಯ ವೇಳೆ ಪ್ರಮುಖವಾಗಿ ಎರಡು ಲೋಪಗಳಾಗಿವೆ. ರಾಜ್ಯದಲ್ಲಿ ಪ್ರಧಾನಿ ವಿರುದ್ಧ ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಹೀಗಿದ್ದೂ ಭಟಿಂಡಾದಿಂದ ಫಿರೋಜ್‌ಪುರಕ್ಕೆ ಪ್ರಧಾನಿಯನ್ನು ರಸ್ತೆಮಾರ್ಗದಲ್ಲಿ ಕರೆದೊಯ್ಯಲು ನಿರ್ಧರಿಸಿದ್ದೇ ಮೊದಲ ಲೋಪ. ಜತೆಗೆ ಪ್ರಧಾನಿ ಅವರಿದ್ದ ವಾಹನವನ್ನು ಮೇಲ್ಸೇತುವೆ ಮೇಲೆ ಕರೆದೊಯ್ದಿದ್ದು ಎರಡನೇ ಲೋಪ. ಮೇಲ್ಸೇತುವೆ ಮೇಲೆ ಪ್ರಧಾನಿ ಅವರ ವಾಹನವಿದ್ದರೆ, ಪ್ರತಿಭಟನಕಾರರು ಮೇಲ್ಸೇತುವೆಯ ಎರಡೂ ಕಡೆ ರಸ್ತೆ ಬಂದ್‌ ಮಾಡುವ ಅಪಾಯವಿರುತ್ತಿತ್ತು’ ಎಂದು ಸಿಕ್ಕಿಂನ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಅವಿನಾಶ್ ಮೋಹನನ್ಯೇ ಹೇಳಿದ್ದಾರೆ.

‘ಪ್ರಧಾನಿ ಪ್ರವಾಸದ ವೇಳೆ ಎಸ್‌ಪಿಜಿ, ಗುಪ್ತಚರ ಇಲಾಖೆ ಮತ್ತು ರಾಜ್ಯ ಪೊಲೀಸರ ನಡುವೆ ಸಮನ್ವಯ ಅತ್ಯಂತ ಮಹತ್ವವಾದುದು. ಇದರಲ್ಲಿ ಯಾವುದೇ ಲೋಪವಾಗಬಾರದು. ಪ್ರವಾಸಕ್ಕೂ ಮುನ್ನ, ಪೂರ್ವಭಾವಿ ಭದ್ರತಾ ಸಂಪರ್ಕವನ್ನು ನಡೆಸಬೇಕು. ಇದಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬೇಕು. ಕೈಪಿಡಿಯಲ್ಲಿ ಇರುವ ವಿವರಗಳ ಅನ್ವಯ, ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಒದಗಿಸಬೇಕಾದ ಭದ್ರತಾ ವ್ಯವಸ್ಥೆ ಮತ್ತು ತುರ್ತು ಸಂದರ್ಭದಲ್ಲಿ ಅವರನ್ನು ಸುರಕ್ಷಿತವಾಗಿ ತೆರವು ಮಾಡುವ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಿರಬೇಕು’ ಎಂದು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಒ.ಪಿ.ಸಿಂಗ್ ಹೇಳಿದ್ದಾರೆ. ಅವರು ಎಸ್‌ಪಿಜಿಯಲ್ಲಿಯೂ ಸೇವೆ ಸಲ್ಲಿಸಿದ್ದರು.

ಮುಂದುವರಿದ ಜಟಾಪಟಿ

ಪಂಜಾಬ್‌ ಪ್ರವಾಸದ ವೇಳೆ ಪ್ರಧಾನಿ ಅವರ ಭದ್ರತೆಯಲ್ಲಿ ಆದ ಲೋಪದ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕರ ಮೌನವು ಏನನ್ನೋ ಹೇಳುತ್ತಿದೆ. ಜನರು ಸತ್ಯವನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ

ಅನುರಾಗ್ ಠಾಕೂರ್‌,ಕೇಂದ್ರ ಸಚಿವ

ಇದು ಅತ್ಯಂತ ಗಂಭೀರವಾದ ವಿಚಾರ. ಇಂತಹ ಅತ್ಯಂತ ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿಯು ಈ ರೀತಿ ರಸ್ತೆ ಮಧ್ಯೆ ಸಿಲುಕುವುದು ಸರಿಯಲ್ಲ. ದೇಶದ ವಿಚಾರದಲ್ಲಂತೂ ಇದು ಒಳ್ಳೆಯದು ಅಲ್ಲವೇ ಅಲ್ಲ

ಮನಮೋಹನ್ ವೈದ್ಯ,ಆರ್‌ಎಸ್‌ಎಸ್‌ ಸಹ ಸಹಕಾರ್ಯವಾಹ

ಪ್ರಧಾನಿ ನರೇಂದ್ರ ಮೋದಿ ನಡೆಸಬೇಕಿದ್ದ ರ‍್ಯಾಲಿಯಲ್ಲಿ ಜನರೇ ಇಲ್ಲದಿದ್ದನ್ನು ನೋಡಿ ಆಗುತ್ತಿದ್ದ ಅಪಮಾನದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಈ ಗಲಾಟೆ ಮಾಡುತ್ತಿದೆ

ನವಜೋತ್ ಸಿಂಗ್ ಸಿಧು,ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ

ಪ್ರಧಾನಿಯು ತಮ್ಮ ರ‍್ಯಾಲಿಯ ವೇದಿಕೆ ತಲುಪಲು ಪಂಜಾಬ್‌ನ ರೈತರು ಮತ್ತು ಜನರು ಅವಕಾಶ ನೀಡಬೇಕಿತ್ತು. ರ‍್ಯಾಲಿಯಲ್ಲಿದ್ದ ಖಾಲಿ ಕುರ್ಚಿಗಳನ್ನು ನೋಡಿ ಪ್ರಧಾನಿಗೆ ಸ್ವಲ್ಪವಾದರೂ ಖುಷಿಯ ಅನುಭವವಾಗುತ್ತಿತ್ತೇನೊ

ಅಖಿಲೇಶ್ ಯಾದವ್,ಸಮಾಜವಾದಿ ಪಕ್ಷದ ಮುಖ್ಯಸ್ಥ

ಪೊಲೀಸರಿಗೆ ನೋಟಿಸ್

ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸ್ ಇಲಾಖೆಯ ಆರು ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ನೋಟಿಸ್ ಜಾರಿ ಮಾಡಿದೆ.ಭಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಜಯ್ ಮೌಲಾಜಾ ಅವರಿಗೆ ನೋಟಿಸ್‌ ನೀಡಲಾಗಿದೆ ಎಂಬುದು ಬಹಿರಂಗವಾಗಿದೆ. ಆದರೆ, ನೋಟಿಸ್ ಪಡೆದ ಇನ್ನು ಐವರು ಅಧಿಕಾರಿಗಳು ಯಾರು ಎಂಬುದು ತಿಳಿದು ಬಂದಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT