ಬುಧವಾರ, ಏಪ್ರಿಲ್ 21, 2021
23 °C
ಹಸಿರು ಪೀಠದಿಂದ ಸ್ವಯಂ ಪ್ರೇರಿತ ಪ್ರಕರಣ

ಗಣಿ ಸ್ಫೋಟ: ಪರಿಶೀಲನೆಗೆ ಎನ್‌ಜಿಟಿ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಬಳಿ ಇತ್ತೀಚೆಗೆ ಸಂಭವಿಸಿದ ಜಿಲೆಟಿನ್‌ ಸ್ಫೋಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಈ ಸಂಬಂಧ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿರುವ ಹಸಿರು ಪೀಠ, ಪ್ರಕರಣದ ವಿಚಾರಣೆ ನಿಗದಿಯಾಗಿರುವ ಏಪ್ರಿಲ್‌ 30ರೊಳಗೆ ಸ್ಫೋಟ ಘಟನೆಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಅಲ್ಲದೆ, ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ಪರಿಹಾರ ಕ್ರಮಗಳನ್ನು ಸೂಚಿಸಲು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠವು ಆರು ಜನರನ್ನೊಳಗೊಂಡ ತಜ್ಞರ ಸಮಿತಿಯೊಂದನ್ನು ರಚಿಸಿದೆ.

ಕೇಂದ್ರದ ಗಣಿ ಇಲಾಖೆ ಮಹಾ ನಿರ್ದೇಶಕರು, ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸ್ಫೋಟಕ ವಿಭಾಗದ ಮುಖ್ಯ ನಿಯಂತ್ರಕರು, ರಾಜ್ಯದ ಗಣಿ ಇಲಾಖೆಯ ನಿರ್ದೇಶಕರು, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರು ಈ ಸಮಿತಿಯಲ್ಲಿ ಇರಲಿದ್ದಾರೆ.

ಸಮಿತಿಯು ಮುಂದಿನ ವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ಕಾರಣವೇನು ಎಂಬ ಕುರಿತು ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಹಾನಿಯ ಪ್ರಮಾಣ, ಪರಿಹಾರೋಪಾಯ ಕುರಿತೂ ಸಮಿತಿಯು ಸಲಹೆ ನೀಡಬೇಕು. ಕನಿಷ್ಠ ಒಮ್ಮೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ನಂತರ ಆನ್‌ಲೈನ್‌ ಮೂಲಕ ಸಭೆ ನಡೆಸಬಹುದು ಎಂದು ಎನ್‌ಜಿಟಿ ಸಮಿತಿಗೆ ಸೂಚಿಸಿದೆ.

ಈ ಹಿಂದೆ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿರುವ ಅಪಘಾತ, ಸಾವು–ನೋವು ಘಟನೆಗಳ ಕುರಿತು ತಜ್ಞರ ಸಮಿತಿಗಳು ಎನ್‌ಜಿಟಿಗೆ ಸಲ್ಲಿಸಿರುವ ವರದಿಗಳನ್ನು ಈ ಸಮಿತಿ ಅವಲೋಕಿಸಬಹುದು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಮರುಕಳಿಸದಂತೆ ತಡೆಗಟ್ಟಲು ಅಗತ್ಯವಿರುವ ಕ್ರಮಗಳ ಕುರಿತೂ ಸಮಿತಿ ಆದ್ಯತೆ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ಫೆಬ್ರುವರಿ 22ರಂದು ತಡರಾತ್ರಿ ಜಿಲೆಟಿನ್‌ ಸ್ಫೋಟಗೊಂಡ ಪರಿಣಾಮ 6 ಜನ ಸ್ಥಳದಲ್ಲೇ ಸಾವಿಗೀಡಾಗಿದ್ದರಲ್ಲದೆ, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು