ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಾವಿನ ಲೆಕ್ಕ ತಪ್ಪಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

ಹಲವು ಪಟ್ಟು ಹೆಚ್ಚು ಸಾವು: ವರದಿ ಅಲ್ಲಗಳೆದ ಆರೋಗ್ಯ ಸಚಿವಾಲಯ
Last Updated 22 ಜುಲೈ 2021, 16:04 IST
ಅಕ್ಷರ ಗಾತ್ರ

ನವದೆಹಲಿ:ಭಾರತದಲ್ಲಿ ಕೋವಿಡ್ ಮರಣ ಪ್ರಮಾಣ ದಾಖಲು ಮಾಡುವಲ್ಲಿ ಲೋಪ ಆಗಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ದೇಶದಲ್ಲಿ ದೃಢವಾದ ಮತ್ತು ಕಾನೂನು ಆಧಾರಿತ ಮರಣ ನೋಂದಣಿ ವ್ಯವಸ್ಥೆ ಇದೆ ಎಂದು ಹೇಳಿದೆ.ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಕೆಲವು ಪ್ರಕರಣಗಳು ಪತ್ತೆಯಾಗುವುದಿಲ್ಲವಾದರೂ, ದಾಖಲಾತಿಯಲ್ಲಿ ತಪ್ಪು ಆಗುವುದು ಅಸಂಭವ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಆದಾಗ್ಯೂ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಭವಿಸಿದ ಸಾವಿನ ಲೆಕ್ಕವನ್ನು ಹಲವಾರು ರಾಜ್ಯಗಳು ಪರಿಷ್ಕರಿಸುತ್ತಿವೆ ಎಂದು ತಿಳಿಸಿದೆ.

ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್ (ಸಿಜಿಡಿ) ನೀಡಿದ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಈ ಸ್ಪಷ್ಟನೆ ನೀಡಿದೆ. ಕೋವಿಡ್‌ ಎರಡನೇ ಅಲೆಯಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿದ್ದ ಅವಧಿಯಲ್ಲಿ ಸಂಭವಿಸಿರುವ ನೈಜ ಸಾವುಗಳು ಸಾವಿರವಲ್ಲ, ಲಕ್ಷಗಳ ಲೆಕ್ಕದಲ್ಲಿದ್ದು, ಅಧಿಕೃತ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗಿರುವ ಸಾಧ್ಯತೆಯಿದೆ ಎಂದು ವರದಿ ಅಭಿಪ್ರಾಯಪಟ್ಟಿತ್ತು.

ಅರವಿಂದ್ ಸುಬ್ರಮಣಿಯನ್ ಮತ್ತು ಇತರ ಇಬ್ಬರು ಸಂಶೋಧಕರು ಪ್ರಕಟಿಸಿದ ಸಿಜಿಡಿ ವರದಿಯ ಅಂಶಗಳನ್ನು ಉಲ್ಲೇಖಿಸಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು,ನೈಜ ಕೋವಿಡ್ ಸಾವಿನ ಅಂಕಿ ಅಂಶಗಳನ್ನು ಸರ್ಕಾರ ಮರೆಮಾಚಲು ಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಎಲ್ಲಾ ಹೆಚ್ಚುವರಿ ಮರಣದ ಅಂಕಿ ಅಂಶಗಳನ್ನು ಕೋವಿಡ್ ಸಾವುಗಳು ಎಂಬುದಾಗಿ ವರದಿ ಅಂದಾಜಿಸಿದೆ. ಆದರೆ ಅದು ಸತ್ಯಗಳನ್ನು ಆಧರಿಸಿಲ್ಲ ಮತ್ತು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ದೈನಂದಿನ ಹೊಸ ಪ್ರಕರಣಗಳು ಮತ್ತು ಸಾವುಗಳ ವರದಿಯು ಮೂಲದಿಂದ ವರದಿಯಾಗುವ ವಿಧಾನವನ್ನು ಅನುಸರಿಸಿದೆ. ಜಿಲ್ಲೆಗಳು ರಾಜ್ಯ ಸರ್ಕಾರಗಳಿಗೆ ಮತ್ತು ರಾಜ್ಯಗಳು ಕೇಂದ್ರ ಸಚಿವಾಲಯಕ್ಕೆ ಸಾವಿನ ಸಂಖ್ಯೆಯನ್ನು ವರದಿ ಮಾಡುತ್ತವೆ ಎಂದಿದೆ.

ವರದಿಯಾದ ಸಾವುಗಳ ಸಂಖ್ಯೆಯಲ್ಲಿನ ಗೊಂದಲ ತಪ್ಪಿಸಲು, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಎಲ್ಲ ಸಾವುಗಳನ್ನು ಸರಿಯಾಗಿ ದಾಖಲಿಸಲುಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ರಾಜ್ಯಗಳಿಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT