ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಮುಂಗಾರು ಅಧಿವೇಶನ: ಸರ್ಕಾರದ ತರಾಟೆಗೆ ಪ್ರತಿಪಕ್ಷ ಸಜ್ಜು

Last Updated 18 ಜುಲೈ 2021, 19:49 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಬೆಲೆ ಏರಿಕೆ, ರೈತರ ಪ್ರತಿಭಟನೆ, ಕೋವಿಡ್ ನಿರ್ವಹಣೆ ಮತ್ತು ಲಸಿಕೆ ಕೊರತೆ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆ ಇದೆ.

ವಿವಿಧ ವಿಷಯಗಳ ಕುರಿತು ಆರೋಗ್ಯಕರ ಮತ್ತು ಫಲಪ್ರದ ಚರ್ಚೆಗಳಿಗೆ ತಮ್ಮ ಸರ್ಕಾರ ಸಿದ್ಧವಿದೆ ಎಂದುಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅಧಿವೇಶನಕ್ಕೂ ಮುನ್ನ ಸರ್ಕಾರ ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆಯ ಸಂದರ್ಭದಲ್ಲಿ ಪ್ರಧಾನಿ ಈ ಸ್ಪಷ್ಟನೆ ನೀಡಿದ್ದಾರೆ. ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸದೇ, ಸಂಸತ್ತನ್ನು ಮಸೂದೆ ಅಂಗೀಕರಿಸುವ ಸಂಸ್ಥೆಯ ದರ್ಜೆಗೆ ಇಳಿಸಿರುವ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು.ಅಧಿವೇಶನದಲ್ಲಿ ಚರ್ಚಿಸಬೇಕಾದ ವಿವಿಧ ವಿಷಯಗಳ ಕುರಿತು ಆಡಳಿತ ಪಕ್ಷದ33 ಮತ್ತು ಪ್ರತಿಪಕ್ಷಗಳ 40ಕ್ಕೂ ಹೆಚ್ಚು ನಾಯಕರು ಮಾತನಾಡಿದರು.‌

ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆಯಿತು. ಆಗಸ್ಟ್ 13ರಂದು ಅಧಿವೇಶನ ಕೊನೆಗೊಳ್ಳಲಿದೆ.

ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪಕ್ಷಗಳು ಸೌಹಾರ್ದಯುತವಾಗಿ ದನಿ ಎತ್ತಬೇಕು ಹಾಗೂ ಅದಕ್ಕೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದ ಪ್ರಧಾನಿ, ಅಂತಹ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದರು.

ಅಧಿವೇಶನ ಸುಗಮವಾಗಿ ನಡೆಯಬೇಕು ಎಂದು ಪ್ರಧಾನಿ ಆಶಿಸಿದರು. ‘ಸಂಸದರು ನಿಜವಾಗಿಯೂ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಸದನದ ಚರ್ಚೆಗಳಲ್ಲಿ ಅವರ ಭಾಗವಹಿಸುವಿಕೆಯಿಂದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಉತ್ಕೃಷ್ಟವಾಗಿರಲಿದೆ’ ಎಂದರು.

ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಮಸೂದೆಗಳನ್ನು ಕಳುಹಿಸಬೇಕು ಎಂದು ಪ್ರತಿಪಕ್ಷ ಪಕ್ಷಗಳ ನಾಯಕರು ಒತ್ತಾಯಿಸಿದರು. ಸಾಮಗ್ರಿಗಳ ಬೆಲೆ ಏರಿಕೆ, ಇಂಧನ ದರ ಏರಿಕೆ, ರೈತರ ಪ್ರತಿಭಟನೆ, ಕೋವಿಡ್ ನಿರ್ವಹಣೆ, ಆರ್ಥಿಕತೆ ಮತ್ತು ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಬಯಸುವುದಾಗಿ ತಿಳಿಸಿದ ಮುಖಂಡರು, ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಒಗ್ಗಟ್ಟಿನಿಂದ ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಉಪ ಸ್ಪೀಕರ್ ಹುದ್ದೆ ಖಾಲಿ ಇರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಫೇಲ್ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕರು ಒತ್ತಿ ಹೇಳಿದರು.

ತೃಣಮೂಲ ಕಾಂಗ್ರೆಸ್ ಮುಖಂಡ ರಾದ ಸುದೀಪ್ ಬಂದೋಪಾಧ್ಯಾಯ ಮತ್ತು ಡೆರೆಕ್ ಒಬ್ರಿಯಾನ್ ಅವರು ಇಂಧನ ಬೆಲೆ ಏರಿಕೆ, ಲಸಿಕೆ ಕೊರತೆ, ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ನಿರ್ಧಾರಗಳು, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಮರುಜಾರಿ (ಎಂಪಿಎಲ್‌ಎಡಿ) ಮತ್ತು ಕೇಂದ್ರ ಸಂಸ್ಥೆಗಳ ಪ್ರೇರಿತ ಕಾರ್ಯವೈಖರಿಯ ಬಗ್ಗೆ ದನಿ ಎತ್ತಿದರು.

ಸಿಪಿಎಂ ಮುಖಂಡ ಎಳಮರಂ ಕರೀಮ್ ಅವರು ರೈತರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಚರ್ಚೆಗೆ ಒತ್ತಾಯಿಸಿದರು. ಕಾರ್ಮಿಕ ಸಂಹಿತೆಗಳನ್ನು ಮರುಪರಿಶೀಲಿಸುವಂತೆಯೂ ಅವರು ಒತ್ತಾಯಿಸಿದರು.

ಶಾಸಕರ ಅನರ್ಹತೆ ವಿಚಾರ ಪ್ರಸ್ತಾಪಿಸುವ ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ತೃಣಮೂಲ ಕಾಂಗ್ರೆಸ್, ವೈಎಸ್ಆರ್ ಕಾಂಗ್ರೆಸ್, ಬಿಎಸ್‌ಪಿ, ಟಿಆರ್‌ಎಸ್ ಪಕ್ಷಗಳು ದನಿ ಎತ್ತಿದವು. ಮೂವರು ಸಂಸದರ ವಿರುದ್ಧ ತೃಣಮೂಲ ಕಾಂಗ್ರೆಸ್ ಮತ್ತು ವೈಎಸ್ಆರ್ ಕಾಂಗ್ರೆಸ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ಲೋಕಸಭಾ ಸ್ಪೀಕರ್ ಮುಂದೆ ಬಾಕಿ ಉಳಿದಿದ್ದು, ಅಂತಹ ಅರ್ಜಿಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದವು.

ಸಂಸತ್ತಿನ ಒಳಗೇ ಚರ್ಚೆ: ಪ್ರತಿಪಕ್ಷಗಳ ಇಂಗಿತ

ಕೋವಿಡ್ ಪರಿಸ್ಥಿತಿ ಕುರಿತು ಪ್ರತಿಪಕ್ಷ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಾಹಿತಿ ನೀಡಲಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಚರ್ಚೆಗಳು ಸದನದಲ್ಲೇ ಆಗಲಿ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿವೆ.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ, ಸಮಾಜವಾದಿ ಪಕ್ಷ ಮತ್ತು ಎಎಪಿ ಮುಂತಾದ ಪಕ್ಷಗಳು ಈ ವಿಚಾರವನ್ನು ವಿರೋಧಿಸಿದ್ದು, ಸರ್ಕಾರವು ಕೇವಲ ಮುಖಂಡರಿಗೆ ಮಾಹಿತಿ ನೀಡುವ ಬದಲು ಸದನದಲ್ಲಿ ಎಲ್ಲ ಸಂಸದರಿಗೆ ವಿವರಿಸಬೇಕು ಎಂದಿವೆ.

ತಜ್ಞರಿಂದ ವಿಷಯ ಮಂಡನೆ ಮಾಡಿಸುವ ಪ್ರಸ್ತಾವವನ್ನು ಸರ್ಕಾರ ಇರಿಸಿದೆ ಎಂದು ಸಚಿವ ಪ್ರಲ್ಹಾದ ಜೋಷಿ ತಿಳಿಸಿದ್ದಾರೆ.

lಸಂಸದರ ಪ್ರದೇಶಾಭಿವೃದ್ಧಿ ನಿಧಿ ಮರು ಸ್ಥಾಪಿಸುವಂತೆ ವಿವಿಧ ಪಕ್ಷಗಳು ಮಾಡಿದ ಮನವಿಗೆ ಸ್ಪೀಕರ್ ಓಂ ಬಿರ್ಲಾ ಸ್ಪಂದಿಸಿದ್ದಾರೆ. ಈ ವಿಷಯವನ್ನು ಸಂಬಂಧಪಟ್ಟವರ ಮುಂದೆ ಇರಿಸುವುದಾಗಿ ಭರವಸೆ ನೀಡಿದ್ದಾರೆ.

lರೈತರ ಸಮಸ್ಯೆಗಳ ಕುರಿತು ಹಲವಾರು ವಿರೋಧ ಪಕ್ಷಗಳು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ನಿಲುವಳಿ ಮಂಡನೆ ನೋಟಿಸ್ ನೀಡಲಿವೆ ಎಂದು ಆರ್‌ಎಸ್‌ಪಿ ನಾಯಕ ಎನ್.ಕೆ. ಪ್ರೇಮಚಂದ್ರನ್ ತಿಳಿಸಿದ್ದಾರೆ.

lಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಎನ್‌ಡಿಎ ಅಂಗಪಕ್ಷಗಳ ಸಭೆ ನಡೆಸಿದರು. ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಇತರರು ಉಪಸ್ಥಿತರಿದ್ದರು. ಅಪ್ನಾ ದಳ, ಜೆಡಿಯು, ಎಐಎಡಿಎಂಕೆ, ಆರ್‌ಪಿಐ, ಎಲ್‌ಜೆಪಿ ಮುಖಂಡರು ಇದ್ದರು.

***

ಯಾವುದೇ ವಿಷಯದ ಕುರಿತು ಸರ್ಕಾರ ಚರ್ಚೆಗೆ ಸಿದ್ಧವಾಗಿದೆ. 17 ಹೊಸ ಮಸೂದೆ ಸೇರಿ 31 ಮಸೂದೆ ಮಂಡನೆಯಾಗಲಿವೆ
- ಪ್ರಲ್ಹಾದ ಜೋಷಿ, ಸಂಸದೀಯ ವ್ಯವಹಾರಗಳ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT