ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಹಾಂಗಿರ್‌ಪುರಿ ಹಿಂಸಾಚಾರ: 20 ಜನರ ಬಂಧನ, ಪೊಲೀಸರಿಂದ ಶಾಂತಿಸಭೆ

ಸ್ಥಳದಲ್ಲಿ ಬಂದೋಬಸ್ತ್ l ಚಲನವಲನಗಳ ಮೇಲೆ ನಿಗಾಕ್ಕೆ ಡ್ರೋನ್
Last Updated 18 ಏಪ್ರಿಲ್ 2022, 2:59 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಜಹಾಂಗಿರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಮುಖ್ಯ ಸಂಚುಕೋರ ಸೇರಿದಂತೆ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಪೊಲೀಸರುತೀವ್ರ ನಿಗಾ ವಹಿಸಿದ್ದು, ಶಾಂತಿ ಸಭೆಗಳನ್ನು ಭಾನುವಾರ ನಡೆಸಿದರು.

ಘಟನೆ ಸಂಬಂಧ ಇಬ್ಬರು ಬಾಲಕರನ್ನೂ ವಶಕ್ಕೆ ಪಡೆಯಲಾಗಿದೆ. ಜಹಾಂಗಿರ್‌ಪುರದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ. ಶನಿವಾರ ಸಂಜೆ ಹಿಂಸಾಚಾರಕ್ಕೆ ಕಾರಣವಾಗಿದ್ದ ಸ್ಥಳದಲ್ಲಿ ಜನರ ಚಲನವಲನಗಳ ಮೇಲೆ ನಿಗಾ ಇರಿಸಲು ಪೊಲೀಸರು ಡ್ರೋನ್‌ಗಳನ್ನು ನಿಯೋಜಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ಗುರುತು ಪತ್ತೆಹಚ್ಚಲು ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಮೊಬೈಲ್ ಫೋನ್‌ಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಚಹರೆ ಪತ್ತೆ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತಿದೆ. ವಾಯವ್ಯ ದೆಹಲಿಯ ಜೊತೆಗೆ ಆಗ್ನೇಯ ದೆಹಲಿಯಲ್ಲೂ ಪೊಲೀಸರು ನಿಗಾ ವಹಿಸಿದ್ದಾರೆ.

ಗುಂಡು ಹಾರಿಸಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಗಾಯಗೊಳ್ಳುವಂತೆ ಮಾಡಿದ 21 ವರ್ಷದ ಮೊಹಮ್ಮದ್ ಅಸ್ಲಾಂ ಎಂಬಾತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈತನ ವಿರುದ್ಧ ಈ ಹಿಂದೆ ಅಪರಾಧ ಪ್ರಕರಣ ದಾಖಲಾಗಿದ್ದವು.

ಜಹಾಂಗಿರ್‌ಪುರಿ ಠಾಣೆಯಲ್ಲಿ ಅಸ್ಲಾಂ ವಿರುದ್ಧ 2020ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿ ವಿರುದ್ಧ 307, 12ಬಿ ಹಾಗೂ 147ನೇ ಕಲಂ ಅಡಿಯಲ್ಲಿ ಶನಿವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾಯವ್ಯ ದೆಹಲಿ ಪೊಲೀಸ್‌ ಆಯುಕ್ತೆ ಉಷಾ ರಂಗಾನಿ ಹೇಳಿದ್ದಾರೆ.

ಶನಿವಾರ ಸಂಜೆ ಜಹಾಂಗಿರ್‌ಪುರಿಯ ಸಿ–ಬ್ಲಾಕ್ ಸಮೀಪಕ್ಕೆ ಹನುಮಾನ್ ಜಯಂತಿ ಮೆರವಣಿಗೆ ತಲುಪಿದಾಗ, ಗುಂಪಿನಲ್ಲಿದ್ದ ಜನರ ಜೊತೆ ಹೊರಗಿನಿಂದ ಬಂದ ನಾಲ್ಕೈದು ಜನರು ವಾಗ್ದಾದ ನಡೆಸಲು ಮುಂದಾದರು.ನಂತರ ಅದು ಕಲ್ಲುತೂರಾಟಕ್ಕೆ ತಿರುಗಿತು. ಘಟನೆಯಲ್ಲಿ ಎಂಟು ಪೊಲೀಸರು ಹಾಗೂ ಒಬ್ಬ ಸ್ಥಳೀಯ ವ್ಯಕ್ತಿ ಗಾಯಗೊಂಡರು. ಹಲವುವಾಹನಗಳು ಜಖಂಗೊಂಡವು.ಘಟನಾ ನಂತರ ಸ್ಥಳದಲ್ಲಿ ಕ್ಷಿಪ್ರಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಶಾಂತಿಸಮಿತಿ ಸಭೆಗಳನ್ನು ನಡೆಸಿದ ಪೊಲೀಸರು, ಸ್ಥಳದಲ್ಲಿ ಶಾಂತಿ, ಸೌಹಾರ್ದ ಕಾಪಾಡುವಂತೆ ಮನವಿ ಮಾಡಿದರು. ವೃತ್ತಿಪರ ಹಾಗೂ ಮುಕ್ತ ತನಿಖೆಯ ಭರವಸೆ ನೀಡಿದರು. ಬಾಂಗ್ಲಾದೇಶದ ಅಕ್ರಮ ವಲಸಿಗರಿಂದ ಹಿಂಸಾಚಾರ ನಡೆದಿದೆ ಎಂದು ಆದರ್ಶ ನಗರ ಬಿಜೆಪಿ ಕೌನ್ಸಿಲರ್ ಗರಿಮಾ ಗುಪ್ತಾ ಅವರು ಆರೋಪಿಸಿದರು. ಗಲಭೆ ಸೃಷ್ಟಿಸಲು ಯತ್ನಿಸಿದವರು ಹೊರಗಿನವರು ಎಂದು ಅಂಗಡಿ ಮಾಲೀಕ ಮುಕೇಶ್ ಎಂಬುವರು ಅಭಿಪ್ರಾಯಪಟ್ಟರು.

‘ಓಲೈಕೆ ಸಿದ್ಧಾಂತವೇ ಗಲಭೆಗಳಿಗೆ ಕಾರಣ’
ಕಳೆದ 70 ವರ್ಷಗಳಿಂದ ನಡೆದುಕೊಂಡು ಬಂದಿರುವ ‘ಓಲೈಕೆ ಸಿದ್ಧಾಂತ’ವೇ ದೇಶದಾದ್ಯಂತ ಕೋಮು ಗಲಭೆಗಳು ನಡೆಯಲು ಕಾರಣವಾಗಿವೆ ಎಂದು ಬಿಜೆಪಿ ಭಾನುವಾರ ಹೇಳಿದೆ.

‘ಸೋನಿಯಾ ಗಾಂಧಿ ಅವರು ತಮ್ಮ ಪತ್ರದಲ್ಲಿ ಸಿದ್ಧಾಂತದ ಕುರಿತು ಮಾತನಾಡಿದ್ದಾರೆ. ಯಾವ ಸಿದ್ಧಾಂತ ಇಂತಹ ಗಲಭೆಗಳಿಗೆ ಕಾರಣವಾಗುತ್ತಿದೆ ಎಂಬ ಪ್ರಶ್ನೆ ಇಂದು ಮೂಡಿದೆ. 70 ವರ್ಷಗಳಿಂದ ಇಂಥ ಗಲಭೆಗೆ ಕಾರಣವಾಗಿರುವ ಒಂದೇ ಸಿದ್ಧಾಂತವೆಂದರೆ, ಓಲೈಕೆಯ ಸಿದ್ಧಾಂತ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ಕುರಿತು ಕಳವಳ ವ್ಯಕ್ತಪಡಿಸಿ 13 ವಿರೋಧ ಪಕ್ಷಗಳು ಜಂಟಿ ಹೇಳಿಕೆಯನ್ನು ಶನಿವಾರ ಹೊರಡಿಸಿದ್ದವು.

‘ಮಕ್ಕಳನ್ನು ಬಳಸಿಕೊಂಡವರ ವಿರುದ್ಧ ಎಫ್‌ಐಆರ್‌ ದಾಖಲಿಸಿ’
ಜಹಾಂಗಿರ್‌ಪುರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಾಡಿದ ಆರೋಪಿಗಳ ಮೇಲೆ ಎಫ್ಐಆರ್‌ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್‌) ದೆಹಲಿ ಪೊಲೀಸ್‌ ಆಯುಕ್ತರಿಗೆ ಭಾನುವಾರ ಸೂಚಿಸಿದೆ.

‘ಮಕ್ಕಳನ್ನು ಈ ರೀತಿ ಬಳಸಿಕೊಳ್ಳುವುದು ಮಕ್ಕಳ ಹಕ್ಕುಗಳ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಈ ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು’ ಎಂದು ಎನ್‌ಸಿಪಿಸಿಆರ್‌, ದೆಹಲಿ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದೆ.

***

ದೆಹಲಿಗರು ಒಗ್ಗಟ್ಟಾಗಿ, ಜಾಗೃತವಾಗಿ ಇರಬೇಕು. ಹಿಂಸಾಚಾರ, ಗಲಭೆಗಳು ಸುರಕ್ಷಿತ ಭಾವಕ್ಕೆ ಅಡ್ಡಿಯಾಗಿವೆ. ಆಳುವವರಲ್ಲಿ ಸಹಾನುಭೂತಿಯ ಕೊರತೆಯಿದೆ.
-ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT