ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಹಿಂದೂವಿನ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಮಹಿಳೆ

ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದ ಆಯೇಷಾ
Last Updated 11 ಮೇ 2021, 16:05 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌–19 ಸೋಂಕಿನಿಂದ ಮೃತರಾದ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆಯೊಬ್ಬರು ನೇರವೇರಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.

ಕೊಲ್ಹಾಪುರದ ಅಸ್ಟರ್ ಅಧರ್ ಆಸ್ಪತ್ರೆಯಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಯೇಷಾ ರೌತ್ ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೇರವೇರಿಸಿದ ಮಹಿಳೆ.

ಕೋವಿಡ್ ಸೋಂಕಿಗೊಳಗಾಗಿದ್ದ ಸುಧಾಕರ್ ವೇದಕ್ (81) ಅವರು ಮೇ 9ರಂದು ಸಾವಿಗೀಡಾಗಿದ್ದರು. ವೇದಕ್ ಅವರ ಕುಟಂಬದ ಸದಸ್ಯರೂ ಕೋವಿಡ್‌ ಪೀಡಿತರಾಗಿದ್ದರಿಂದ ಅವರ ಅಂತ್ಯಸಂಸ್ಕಾರದ ಅಂತಿಮ ವಿಧಿ–ವಿಧಾನದ ಸಂದರ್ಭದಲ್ಲಿ ಯಾರೂ ಪಾಲ್ಗೊಳ್ಳಲು ಆಗಲಿಲ್ಲ. ಆಗ ಸುಧಾಕರ್ ವೇದಕ್ ಅವರ ಮಗಳು ಡಾ.ಹರ್ಷಲಾ ವೇದಕ್ ಅವರ ಮನವಿಯ ಮೇರೆಗೆ ಆಯೇಷಾ ರೌತ್ ಅವರು ಅಂತ್ಯಸಂಸ್ಕಾರದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

‘ಪವಿತ್ರ ರಂಜಾನ್ ತಿಂಗಳಿನಲ್ಲಿ ನಾವು ನಮ್ಮ ಕುಟುಂಬವು ಕೊಲ್ಹಾಪುರ ಸ್ಮಶಾನ ಮತ್ತು ಶವಾಗಾರಗಳಲ್ಲಿ ಕೆಲಸ ಮಾಡುವ ಜನರಿಗೆ ಪಿಪಿಇ ಕಿಟ್‌ಗಳನ್ನು ದಾನ ನೀಡಲು ನಿರ್ಧರಿಸಿತ್ತು. ಇಲ್ಲಿನ ಪಂಚಗಂಗಾ ಸ್ಮಶಾನದಲ್ಲಿ ಪಿಪಿಇ ಕಿಟ್‌ಗಳನ್ನು ನೀಡುತ್ತಿರುವಾಗ ನನಗೆ ಡಾ.ಹರ್ಷಲಾ ವೇದಕ್ ಅವರಿಂದ ಫೋನ್ ಕರೆ ಬಂತು. ಪಂಚಗಂಗಾ ಸ್ಮಶಾನದಲ್ಲಿ ತಮ್ಮ ತಂದೆಯ ಅಂತಿಮ ವಿಧಿವಿಧಾನಗಳನ್ನು ಸುಗಮಗೊಳಿಸಲು ಸಾಧ್ಯವೇ ಎಂದು ಕೇಳಿದರು. ವೃತ್ತಿಯಿಂದ ನಾವಿಬ್ಬರೂ ಪರಿಚಿತರು. ಆಗಲಿ ಎಂದು ಒಪ್ಪಿದೆ’ ಎಂದು ಆಯೇಷಾ ರೌತ್ ತಿಳಿಸಿದ್ದಾರೆ.

ಡಾ.ಹರ್ಷಲಾ ವೇದಕ್ ಅವರು ಕೊಲ್ಹಾಪುರದ ಛತ್ರಪತಿ ಪ್ರಮೀಳಾ ರಾಜೇ ಆಸ್ಪತ್ರೆಯಲ್ಲಿ ನಿವಾಸಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ತಂದೆ ಮೃತರಾದಾಗ ಅವರ ಇಡೀ ಕುಟುಂಬ ಕೋವಿಡ್ ಪೀಡಿತವಾಗಿತ್ತು.

‘ನನ್ನ ತಂದೆಗೆ ನಾವು ಮೂವರು ಹೆಣ್ಣುಮಕ್ಕಳು. ನಾನು ಹಿರಿಯವಳು. ಮೂರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಾಗ ಮುಂಬೈನಲ್ಲಿ ನಾನೇ ನಿಂತು ಅವರ ಕೊನೆಯ ವಿಧಿಗಳನ್ನು ನೆರವೇರಿಸಿದೆ. ನಮ್ಮ ಹೆತ್ತವರು ನಮ್ಮ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತಿದ್ದರು. ಬೆಳೆಯುವಾಗ ನಾವು ಯಾವುದೇ ತಾರತಮ್ಯ ಎದುರಿಸಲಿಲ್ಲ. ಹಾಗಾಗಿ, ಒಬ್ಬ ಮಹಿಳೆ ನನ್ನ ತಂದೆಯ ಅಂತಿಮ ವಿಧಿಗಳನ್ನು ಮಾಡಲಿದ್ದಾರೆ ಎಂದಾಗ ನನಗೆ ಒಪ್ಪಿಕೊಳ್ಳುವುದು ಕಷ್ಟ ಎನಿಸಲಿಲ್ಲ’ ಎಂದು ಡಾ.ಹರ್ಷಲಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಅಂತಿಮ ವಿಧಿ–ವಿಧಾನ ನೇರವೇರಿಸುವಾಗ ನಾನು ಮುಸ್ಲಿಂ, ಹಿಂದೂಗಳ ವಿಧಿವಿಧಾನ ಮಾಡುತ್ತಿದ್ದೇನೆ ಎಂದು ಒಂದು ಸೆಕೆಂಡ್ ಕೂಡಾ ಯೋಚಿಸಲಿಲ್ಲ. ಚಿತೆಗೆ ಬೆಂಕಿ ಇಡುವಾಗಾಲೂ ಧರ್ಮದ ಬಗ್ಗೆ ಯೋಚಿಸಲಿಲ್ಲ. ನಾನು ಈ ವಿಧಿಗಳನ್ನು ನೇರವೇರಿಸುವ ಮೂಲಕ ವೇದಕ್ ಅವರ ಕುಟುಂಬಕ್ಕೆ ಸ್ವಲ್ಪ ಸಮಾಧಾನ ನೀಡಬಲ್ಲೆ ಎಂದಷ್ಟೇ ಯೋಚಿಸಿದೆ’ ಎಂದು ಆಯೇಷಾ ರೌತ್ ತಿಳಿಸಿದ್ದಾರೆ.

‘ಕೊಲ್ಹಾಪುರವು ಸಾಮಾಜಿಕ ಸುಧಾರಣೆಗಳಿಗೆ ಸಂಬಂಧಿಸಿದ ಚಳವಳಿಗಳ ಸುದೀರ್ಘ ಇತಿಹಾಸ ಹೊಂದಿದೆ. ನನ್ನ ಕೆಲಸಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ’.

–ಆಯೇಷಾ ರೌತ್, ಹಿರಿಯ ವ್ಯವಸ್ಥಾಪಕಿ, ಅಸ್ಟರ್ ಅಧರ್ ಆಸ್ಪತ್ರೆ.

ಆಯೇಷಾ ಮುಸ್ಲಿಂ ಆಗಿದ್ದು ಅಂತಿಮ ವಿಧಿವಿಧಾನ ನೇರವೇರಿಸಿದ್ದು ನಮಗೆ ಸಮಸ್ಯೆ ಅನಿಸಲಿಲ್ಲ. ವಾಸ್ತವವಾಗಿ ನಾವೆಲ್ಲಾ ಆಕೆಗೆ ಕೃತಜ್ಞರಾಗಿದ್ದೇವೆ. ಸಮಾಜದ ಮುಂದೆ ಇದೊಂದು ಉತ್ತಮ ಉದಾಹರಣೆ.
–ಡಾ.ಹರ್ಷಲಾ ವೇದಕ್, ವೈದ್ಯಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT