ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ: ಬಿಜೆಪಿಗೆ ರಾಹುಲ್ ಗಾಂಧಿ ತಿರುಗೇಟು

Last Updated 25 ಮಾರ್ಚ್ 2023, 16:20 IST
ಅಕ್ಷರ ಗಾತ್ರ

ನವದೆಹಲಿ: 'ನನ್ನ ಹೆಸರು ಸಾವರ್ಕರ್‌ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಬ್ರಿಟನ್ ಪ್ರವಾಸ ಕೈಗೊಂಡಿದ್ದ ರಾಹುಲ್‌ ಅವರು, ದೇಶದ ಪ್ರಜಾಪ್ರಭತ್ವ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ. ಇದನ್ನು ಉಲ್ಲೇಖಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಹುಲ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಇಂದು (ಶನಿವಾರ) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌, ಶಿಕ್ಷೆ ವಿಧಿಸುವುದು ಅಥವಾ ಅನರ್ಹಗೊಳಿಸುವುದರಿಂದ ತಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಪ್ರಶ್ನಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

'ದೇಶದ ಆಡಳಿತದಲ್ಲಿ ವಿದೇಶಗಳ ಮಧ್ಯಪ್ರವೇಶಕ್ಕೆ ನಾನು ಕರೆ ನೀಡಿದ್ದೇನೆ ಎಂದು ಮಂತ್ರಿಗಳು ಸುಳ್ಳು ಹೇಳಿದ್ದಾರೆ. ನಾನು ಅಂತಹ ಕೆಲಸ ಎಂದಿಗೂ ಮಾಡಿಲ್ಲ. ಅದಾನಿ ಸಮೂಹದ ವಿಚಾರದ ಬಗ್ಗೆ ಪ್ರಶ್ನಿಸುವುದನ್ನು ಮುಂದುವರಿಸುತ್ತೇನೆ. ಅವರು ನನ್ನನ್ನು ಅನರ್ಹಗೊಳಿಸುವ ಮೂಲಕ ಅಥವಾ ಜೈಲಿಗೆ ಕಳುಹಿಸುವ ಮೂಲಕ ಹೆದರಿಸಲು ಸಾಧ್ಯವಿಲ್ಲ. ನಾನು ಹಿಂದೆ ಸರಿಯುವುದಿಲ್ಲ. ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ, ನನ್ನ ಕೆಲಸವನ್ನು ಮುಂದುವರಿಸುತ್ತೇನೆ' ಎಂದು ತಿರುಗೇಟು ನೀಡಿದ್ದಾರೆ.

'ಅದಾನಿ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಮೋದಿ ಅವರನ್ನು ರಕ್ಷಿಸುವುದಕ್ಕಾಗಿ ಇಡೀ ನಾಟಕ ಆಯೋಜಿಸಲಾಗಿದೆ. ನಾನು ಕೇಳುತ್ತಲೇ ಇರುತ್ತೇನೆ. ಅದಾನಿ ಖಾತೆಯಲ್ಲಿರುವ ₹ 20 ಸಾವಿರ ಕೋಟಿ ಹಣ ಯಾರದ್ದು?' ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. ಮುಂದುವರಿದು, ಅದಾನಿ ವಿಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನಾಯಕರು ಸಂಸತ್ತಿನಲ್ಲಿ ನಿಂತು ಸುಳ್ಳು ಹೇಳಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

मेरा नाम सावरकर नहीं है, मेरा नाम गांधी है।

गांधी किसी से माफी नहीं मांगते...🔥✊ pic.twitter.com/teoEzUN2oB

— Indian Youth Congress (@IYC) March 25, 2023

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು 'ಮೋದಿ' ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಸಂಸದ ರಾಹುಲ್‌ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ (ಮಾರ್ಚ್‌ 24 ರಂದು) ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT