ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್: ಸೈನಿಕರ ವಿಚಾರಿಸಲು ಎಸ್‌ಐಟಿಗೆ ಅನುಮತಿ ನೀಡಿದ ಸೇನೆ

ಡಿ.4ರಂದು ನಡೆದ ಗುಂಡಿನ ದಾಳಿಯಲ್ಲಿ 14 ನಾಗರಿಕರ ಹತ್ಯೆ ಪ್ರಕರಣ
Last Updated 29 ಡಿಸೆಂಬರ್ 2021, 10:58 IST
ಅಕ್ಷರ ಗಾತ್ರ

ಕೊಹಿಮಾ: ಭದ್ರತಾ ಪಡೆಗಳ ಸಿಬ್ಬಂದಿ ಗುಂಡಿಟ್ಟು 14 ನಾಗರಿಕರನ್ನು ಕೊಂದ ಘಟನೆ ಕುರಿತು ತನಿಖೆ ನಡೆಸುತ್ತಿರುವ ನಾಗಾಲ್ಯಾಂಡ್‌ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಗೆ ತನ್ನ ಅಧಿಕಾರಿಗಳು ಹಾಗೂ ಸೈನಿಕರನ್ನು ವಿಚಾರಣೆಗೆ ಒಳಪಡಿಸಲು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸೇನೆ ಸಮ್ಮತಿಸಿದೆ.

ಅರೆ ವಿಶೇಷ ಪಡೆಗಳ 21 ಸೈನಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಎಸ್‌ಐಟಿ ಇದೇ ವಾರ ಪೂರ್ಣಗೊಳಿಸುವ ಸಾಧ್ಯತೆ ಇದೆ. ಸೈನಿಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆಯೋ ಅಥವಾ ಅವರು ಈಗಾಗಲೇ ಸಿದ್ಧಪಡಿಸಿರುವ ಹೇಳಿಕೆಗಳನ್ನು ಎಸ್‌ಐಟಿಗೆ ಸಲ್ಲಿಸುತ್ತಾರೆಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ತನಿಖೆಯನ್ನು ತ್ವರಿತಗೊಳಿಸುವ ಸಂಬಂಧ ಎಸ್‌ಐಟಿ ಸದಸ್ಯರ ಸಂಖ್ಯೆಯನ್ನು 8ರಿಂದ 22ಕ್ಕೆ ಹೆಚ್ಚಿಸಲಾಗಿದ್ದು, ಏಳು ತಂಡಗಳನ್ನಾಗಿ ವಿಭಜಿಸಲಾಗಿದೆ. ಎಸ್‌ಐಟಿಯಲ್ಲಿ ಐದು ಜನ ಐಪಿಎಸ್‌ ಅಧಿಕಾರಿಗಳು ಸಹ ಇದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಈ ಘಟನೆ ಕುರಿತು ಹೇಗೆ ತನಿಖೆ ನಡೆಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಕಾಯ್ದೆ ಜಾರಿಯಲ್ಲಿ ಇರುವ ಕಾರಣ, ಸೈನಿಕರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿದೆ.

ಇನ್ನೊಂದೆಡೆ, ಸೇನೆ ರಚಿಸಿರುವ ತಂಡವೊಂದು ಘಟನೆ ಕುರಿತು ತನಿಖೆ ನಡೆಸುತ್ತಿದೆ.

ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್‌ ಗ್ರಾಮಗಳಲ್ಲಿ ಡಿಸೆಂಬರ್ 4ರಂದು ಈ ಘಟನೆ ನಡೆದಿತ್ತು. ಟಿರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ನಾಗರಿಕರನ್ನು ಉಗ್ರರು ಎಂದು ತಪ್ಪಾಗಿ ಗುರುತಿಸಿ ಸೈನಿಕರು ನಡೆಸಿದ ದಾಳಿಯಲ್ಲಿ ಎಂಟು
ನಾಗರಿಕರು ಮೃತಪಟ್ಟಿದ್ದರು. ಕತ್ತಲಾದರೂ ಮನೆಗೆ ಬಾರದೇ ಇದ್ದವರನ್ನು ಹುಡುಕಿಕೊಂಡು ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಆಗ ನಡೆದ ಘರ್ಷಣೆಯಲ್ಲಿ ಮತ್ತೆ ಐವರು ನಾಗರಿಕರು ಸೈನಿಕರ ಗುಂಡಿಗೆ ಬಲಿಯಾಗಿದ್ದರು. ನಾಗರಿಕರ ಹತ್ಯೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಸ್ಸಾಂ ರೈಫಲ್ಸ್‌ನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದಾಗ, ಸೈನಿಕರು ಹಾರಿಸಿದ ಗುಂಡಿಗೆ ಮತ್ತೊಬ್ಬ ನಾಗರಿಕ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT