ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ–ಸುವೇಂದು: ಗೆಲುವಿನ ಸನಿಹ ಯಾರು?

ನಂದಿಗ್ರಾಮ: ಬಿಜೆಪಿಯ ಪಕ್ಷಾಂತರ ಕಾರ್ಯತಂತ್ರಕ್ಕೆ ಅಗ್ನಿಪರೀಕ್ಷೆ: ಮತ ಧ್ರುವೀಕರಣ ಯತ್ನ ತೀವ್ರ
Last Updated 30 ಮಾರ್ಚ್ 2021, 18:51 IST
ಅಕ್ಷರ ಗಾತ್ರ

ಕೋಲ್ಕತ್ತ: ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಒಂದು ಕಾಲದ ಅವರ ಆಪ್ತ, ಈಗ ಬಿಜೆಪಿಯಲ್ಲಿರುವ ಸುವೇಂದು ಅಧಿಕಾರಿ ಅವರ ಸ್ಪರ್ಧೆಯಿಂದಾಗಿ ಪಶ್ಚಿಮ ಬಂಗಾಳ ರಾಜಕಾರಣದ ಗಮನ ಕೇಂದ್ರವಾಗಿ ನಂದಿಗ್ರಾಮ ಮಾರ್ಪಟ್ಟಿದೆ. 2007ರಲ್ಲಿ ನಂದಿಗ್ರಾಮದಲ್ಲಿ ನಡೆದ ಭೂ ಚಳವಳಿಯ ಶ್ರೇಯ ತಮ್ಮದೇ ಎಂದು ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಅದಷ್ಟೇ ಅಲ್ಲದೆ ಇತರ ಹಲವು ವಿಚಾರಗಳೂ ಇವೆ.

ಬಿಜೆಪಿಯ ಪಕ್ಷಾಂತರ ಕಾರ್ಯತಂತ್ರವು ನಂದಿಗ್ರಾಮದಲ್ಲಿ ಅಗ್ನಿಪರೀಕ್ಷೆಗೆ ಒಳಗಾಗಲಿದೆ. ಪೂರ್ವ ಮತ್ತು ಪ‍ಶ್ಚಿಮ ಮೇದಿನಿಪುರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಬಲ ತುಂಬುವುದು ಟಿಎಂಸಿಯ ಚತುರ ಸಂಘಟಕರಾಗಿದ್ದ ಸುವೇಂದು ಅವರನ್ನು ಬಿಜೆಪಿ ಸೇರಿಸಿಕೊಂಡಿದ್ದರ ಹಿಂದೆ ಇದ್ದ ಕಾರಣ.

ಒಂದು ಬ್ಲಾಕ್‌ ಅಧ್ಯಕ್ಷರನ್ನು ಬಿಟ್ಟರೆ ಟಿಎಂಸಿಯ ‘ಮತ ಆಕರ್ಷಿಸಬಲ್ಲ’ ಮುಖಂಡರನ್ನು ತಮ್ಮತ್ತ ಸೆಳೆದುಕೊಳ್ಳಲು ಸುವೇಂದು ಅವರಿಗೆ ಸಾಧ್ಯವಾಗಿಲ್ಲ ಎಂದು ಅವರ ನಿಕಟವರ್ತಿಯಾಗಿದ್ದ ನಂದಿಗ್ರಾಮದಲ್ಲಿ ಟಿಎಂಸಿಯ ಪ್ರಮುಖ ಮುಖಂಡರಾಗಿರುವ ಸ್ವಯಂ ಖಾಜಿ ಹೇಳಿದ್ದಾರೆ.

‘ಮತಗಟ್ಟೆ ಮಟ್ಟದ ಮುಖಂಡರೇ ಮತದಾರರನ್ನು ಪಕ್ಷಗಳ ಪರವಾಗಿ ಆಕರ್ಷಿಸುತ್ತಾರೆ. ಸುವೇಂದು ಜತೆಗೆ ಅಂತಹ ಮುಖಂಡರು ಯಾರೂ ಇಲ್ಲ’ ಎಂಬುದು ಖಾಜಿ ಅವರ ಅಭಿಮತ.

ನಂದಿಗ್ರಾಮದ ಬಿಜೆಪಿಯ ಕೆಲವು ಮುಖಂಡರಿಗೆ ಸುವೇಂದು ಅವರನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ನಿಷ್ಕ್ರಿಯರಾಗಿದ್ದಾರೆ. ಇದು ಕೂಡ ಬಿಜೆಪಿ ಗೆಲುವಿನ ಸಾಧ್ಯತೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಶೇ 30ರಷ್ಟಿದೆ. 2011ರ ವಿಧಾನಸಭಾ ಚುನಾವಣೆಯಿಂದಲೇ ಈ ಸಮುದಾಯವು ಸುವೇಂದು ಅವರ ಬೆನ್ನಿಗೆ ನಿಂತಿದೆ. ಆದರೆ, ಬಿಜೆಪಿ ಮುಖಂಡರ ಮತ ಧ್ರುವೀಕರಣದ ಹೇಳಿಕೆಗಳಿಂದಾಗಿ ಪರಿಸ್ಥಿತಿ ಈಗ ಭಿನ್ನವಾಗಿದೆ. ಮಮತಾ ಅವರನ್ನು ನುಸುಳುಕೋರರ ಸೋದರತ್ತೆ ಎಂದೂ ರೋಹಿಂಗ್ಯಾ ಸಮುದಾಯದ ಜನರ ಚಿಕ್ಕಮ್ಮ ಎಂದೂ ಹೇಳಲಾಗಿದೆ. ಇದರಿಂದಾಗಿ ಮುಸ್ಲಿಂ ಸಮುದಾಯದ ಮತಗಳು ಮಮತಾ ಪರವಾಗಿ ಇನ್ನಷ್ಟು ಧ್ರುವೀಕರಣಗೊಳ್ಳಬಹುದು.

2011ರ ಜನಗಣತಿ ಪ್ರಕಾರ, ನಂದಿಗ್ರಾಮ ಬ್ಲಾಕ್‌ 1ರಲ್ಲಿ ಹಿಂದೂ ಮತದಾರರ ಪ್ರಮಾಣ ಶೇ 65.82 ಮತ್ತು ಮುಸ್ಲಿಂ ಮತದಾರರ ಪ್ರಮಾಣ ಶೇ 34.04. ಬ್ಲಾಕ್‌ 2ರಲ್ಲಿ ಹಿಂದೂ ಮತದಾರರ ಪ್ರಮಾಣ ಶೇ 87.71ರಷ್ಟು ಮುಸ್ಲಿಂ ಮತದಾರರ ಪ್ರಮಾಣ ಶೇ 12.12ರಷ್ಟಿದೆ.

ಹಿಂದೂಗಳ ಶೇ 70ರಷ್ಟು ಮತಗಳ ಧ್ರುವೀಕರಣ ಬಿಜೆಪಿಗೆ ಸಾಧ್ಯವಾದರೆ ಗೆಲ್ಲುವುದು ಮಮತಾಗೆ ಕಷ್ಟಕರ. ಸುವೇಂದು ಅವರು ದೇವಾಲಯಗಳ ಭೇಟಿಯನ್ನು ಹೆಚ್ಚಿಸಿದ್ದಾರೆ. ಸಂಸ್ಕೃತ ಶ್ಲೋಕವನ್ನು ಮಮತಾ ತಪ್ಪಾಗಿ ಪಠಿಸಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಿಂದೂ ಸಮುದಾಯವನ್ನು ತನ್ನತ್ತ ವಾಲುವಂತೆ ಮಾಡುವುದು ಬಿಜೆಪಿಯ ತಂತ್ರ ಎಂಬುದು ಸ್ಪಷ್ಟ.

ಮಮತಾ ಕೂಡ ‘ಮೃದು ಹಿಂದುತ್ವ’ ತಂತ್ರದ ಮೊರೆ ಹೋಗಿದ್ದಾರೆ. ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ ಮತ್ತು ಸಂಸ್ಕೃತ ಶ್ಲೋಕ ಪಠಿಸುತ್ತಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ ಎನ್ನಲಾಗದು. ಇಲ್ಲಿ ಬಿಜೆಪಿಗೆ ನೆಲೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲಿ 10,713 ಮತಗಳು ಸಿಕ್ಕಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ ಸಂಖ್ಯೆಯು 62,268ಕ್ಕೆ ಏರಿದೆ.

2007ರ ಹೋರಾಟದಲ್ಲಿ ಸುವೇಂದು ಪಾತ್ರ, ಅವರ ಸಂಘಟನಾ ಕೌಶಲಗಳನ್ನು ನಿರ್ಲಕ್ಷಿಸಲಾಗದು. ಇಲ್ಲಿ ಮಮತಾಗೆ ಕಠಿಣ ಸ್ಪರ್ಧೆ ಇದೆ. ಹಾಗಿದ್ದರೂಮಮತಾ–ಸುವೇಂದು ನಡುವಣ ನಿಕಟ ಸ್ಪರ್ಧೆಯಲ್ಲಿ ಮಮತಾ ಗೆಲ್ಲುವ ಸಾಧ್ಯತೆಯೇ ಸ್ವಲ್ಪ ಹೆಚ್ಚು ಎಂದು ಟಿಎಂಸಿಯ ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT