ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿ ಲೋಕಾರ್ಪಣೆ

341 ಕಿ.ಮೀ. ಉದ್ದದ ಮಾರ್ಗ; ರಾಜ್ಯದ ಪೂರ್ವ–ಪಶ್ಚಿಮ ಭಾಗಗಳಿಗೆ ನೇರ ಸಂಪರ್ಕ
Last Updated 16 ನವೆಂಬರ್ 2021, 19:09 IST
ಅಕ್ಷರ ಗಾತ್ರ

ಸುಲ್ತಾನ್‌ಪುರ (ಉತ್ತರ ಪ್ರದೇಶ): 341 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಲೋಕಾರ್ಪಣೆ ಮಾಡಿದರು. ಲಖನೌ–ಗಾಜಿಪುರ ಜಿಲ್ಲೆಗಳನ್ನು ಸಂಪರ್ಕಿಸುವ ಈ ಹೆದ್ದಾರಿಯು ರಾಜ್ಯದ 8 ಜಿಲ್ಲೆಗಳನ್ನು ಹಾದುಹೋಗುತ್ತದೆ. ಹೆದ್ದಾರಿ ಉದ್ಘಾಟನೆ ಬಳಿಕ ಸುಲ್ತಾನ್‌ಪುರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಧಾನಿ ಮಾತನಾಡಿದರು.

ಹೆದ್ದಾರಿ ಮಹತ್ವ

*ತುರ್ತು ಸಮಯದಲ್ಲಿ ವಿಮಾನಗಳು ಇಳಿಯುವಂತೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಏರ್‌ಸ್ಟ್ರಿಪ್ ನಿರ್ಮಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಸಿ–130 ಜೆಸೂಪರ್ ಹರ್ಕ್ಯುಲಸ್ ಸೇನಾ ವಿಮಾನದ ಮೂಲಕ ಬಂದಿಳಿದರು

*ರಾಜಧಾನಿ ಲಖನೌ ಜೊತೆಗೆ ರಾಜ್ಯದ ಪೂರ್ವ ಭಾಗವನ್ನು ಈ ಹೆದ್ದಾರಿ ಬೆಸೆದಿದೆ. ಅಷ್ಟೇ ಅಲ್ಲ, ಆಗ್ರಾ–ಲಖನೌ ಮತ್ತು ಯಮುನಾ ಎಕ್ಸ್‌ಪ್ರೆಸ್‌ ಹೆದ್ದಾರಿ ಮೂಲಕ ರಾಷ್ಟ್ರ ರಾಜಧಾನಿಯನ್ನೂ ಇದು ಸಂಪರ್ಕಿಸುತ್ತದೆ

*ಭವಿಷ್ಯದಲ್ಲಿ ಆರು ಪಥದ ಈ ಹೆದ್ದಾರಿಯನ್ನು 8 ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಸಾಧ್ಯವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ

*2017ರಲ್ಲಿ ರಾಜ್ಯದಲ್ಲಿ ಆರು ಹೆದ್ದಾರಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಈ ಪೈಕಿ ಪೂರ್ವಾಂಚಲ ಹೆದ್ದಾರಿಯು ಮೊದಲು ಉದ್ಘಾಟನೆಯಾಗಿದೆ

*ಲಖನೌ, ಬಾರಾಬಂಕಿ, ಅಮೇಠಿ, ಸುಲ್ತಾನ್‌ಪುರ, ಅಯೋಧ್ಯೆ, ಅಂಬೇಡ್ಕರ್ ನಗರ, ಅಜಂಗಡ, ಗಾಜಿಪುರ ಜಿಲ್ಲೆಗಳ ಮೂಲಕ ಹೆದ್ದಾರಿ ಹಾದುಹೋಗುತ್ತದೆ

*ಪರಿಣಾಮಕಾರಿ ಅನುಷ್ಠಾನಕ್ಕಾಗಿಯೋಜನೆಯನ್ನು ಎಂಟು ವಿಭಾಗಗಳಾಗಿ ವಿಂಡಿಸಲಾಗಿತ್ತು.2018ರಲ್ಲಿ ಆರಂಭವಾದ ಕಾಮಗಾರಿಗೆ 2021ರ ನವೆಂಬರ್‌ನಲ್ಲಿ ಪೂರ್ಣಗೊಳಿಸುವ ಗಡುವು ನೀಡಲಾಗಿತ್ತು. ಅದರಂತೆಯೇ ಕಾಮಗಾರಿ ಮುಕ್ತಾಯವಾಗಿದೆ

*ವಾಹನಗಳು ಹೆದ್ದಾರಿಯನ್ನು ನೇರವಾಗಿ ಪ್ರವೇಶಿಸದಂತೆ ನಿಯಂತ್ರಿಸುವ ವ್ಯವಸ್ಥೆ ರೂಪಿಸಲಾಗಿದ್ದು, ಇಂಧನ ಹಾಗೂ ಸಮಯ ಉಳಿಸುವ, ಮಾಲಿನ್ಯ ನಿಯಂತ್ರಣ ಮಟ್ಟ ಕಾಯ್ದುಕೊಳ್ಳುವ, ಅಪಘಾತಗಳನ್ನು ತಗ್ಗಿಸುವ ಉದ್ದೇಶ ಇಟ್ಟುಕೊಂಡು ವಿನ್ಯಾಸ ಮಾಡಲಾಗಿದೆ

*ಈಗಾಗಲೇ ಇರುವ ಆಗ್ರಾ–ಲಖನೌ ಹೆದ್ದಾರಿಯನ್ನು ಇದು ಸಂಪರ್ಕಿಸುವುದರಿಂದ ರಾಜ್ಯದ ಪೂರ್ವ ಭಾಗವು ಪಶ್ಚಿಮ ಭಾಗದ ಜೊತೆ ಬೆಸೆದು, ಈ ಭಾಗ ಬೃಹತ್ ಕೈಗಾರಿಕಾ ಕಾರಿಡಾರ್ ಆಗಿ ಬದಲಾಗಲಿದೆ, ಉದ್ಯೋಗಾವಕಾಶ ಹೆಚ್ಚಲಿವೆ ಎಂದು ನಿರೀಕ್ಷಿಸಲಾಗಿದೆ.

ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇ

ಹೆದ್ದಾರಿ ಉದ್ದ;341 ಕಿ.ಮೀ.

ಅಂದಾಜು ವೆಚ್ಚ;₹22.500 ಕೋಟಿ

ಏರ್‌ಸ್ಟ್ರಿಪ್ ಉದ್ದ;3.2 ಕಿ.ಮೀ.

ಮೇಲ್ಸೇತುವೆ;22

ರೈಲ್ವೆ ಮೇಲ್ಸೇತುವೆ;7

ಪ್ರಮುಖ ಸೇತುವೆಗಳು;7

ಟೋಲ್ ಪ್ಲಾಜಾ;6

ಹೆದ್ದಾರಿ ಸುರಂಗ;45

ಸಾಂಕೇತಿಕವಾಗಿ ಹೆದ್ದಾರಿ ಉದ್ಘಾಟಿಸಿದ ಎಸ್‌ಪಿ

ಅಜಂಗಡ ಜಿಲ್ಲೆಯಲ್ಲಿ ನೂರಾರು ಎಸ್‌ಪಿ ಕಾರ್ಯಕರ್ತರು ಸೈಕಲ್ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವ ಮೂಲಕ ಸಾಂಕೇತಿಕವಾಗಿ ಹೆದ್ದಾರಿಯನ್ನು ಉದ್ಘಾಟಿಸಿದರು. ಹೆದ್ದಾರಿಯಲ್ಲಿ ಹೂವಿನ ಪಕಳೆಗಳನ್ನು ಚೆಲ್ಲಿ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪರ ಷೋಷಣೆಗಳನ್ನು ಕೂಗಿದರು.

ಹೆದ್ದಾರಿ ನಿರ್ಮಾಣದ ಶ್ರೇಯ ತನ್ನದು ಎಂದು ಸಮಾಜವಾದಿ ಪಕ್ಷ ವಾದಿಸಿದೆ. ತಮ್ಮ ಅವಧಿಯಲ್ಲಿ ಒಪ್ಪಿಗೆ ನೀಡಲಾದ ಹೆದ್ದಾರಿಯನ್ನು ಉದ್ಘಾಟಿಸುವ ಮೂಲಕ ಬಿಜೆಪಿಯು ಯೋಜನೆಯ ಶ್ರೇಯ ಪಡೆಯುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಅಖಿಲೇಶ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶ್ರೇಯವನ್ನೂ ಅಖಿಲೇಶ್ ತಮ್ಮದು ಎಂಬುದಾಗಿ ಪ್ರತಿಪಾದಿಸಿದ್ದರು ಎಂದು ಬಿಜೆಪಿ ಲೇವಡಿ ಮಾಡಿದೆ.

ಹೆದ್ದಾರಿ ಅಭಿವೃದ್ಧಿಯ ಜೀವನಾಡಿ: ಮೋದಿ

ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡಸಿದ ಸರ್ಕಾರಗಳು ಹಾಗೂ ಪ್ರತಿಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡರು.‘ಉತ್ತರ ಪ್ರದೇಶದ ಪೂರ್ವ ಭಾಗವನ್ನು ಹಿಂದಿನ ಸರ್ಕಾರಗಳು ‘ಮಾಫಿಯಾವಾಡ’ ಮಾಡಿದ್ದವು. ಆದರೆ ಬಿಜೆಪಿ ಸರ್ಕಾರವು ಈ ಭಾಗದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಹೊಸ ಅಧ್ಯಾಯ ಬರೆದಿದೆ’ ಎಂದು ಆರೋಪಿಸಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಭಿವೃದ್ಧಿ ಎಂಬುದು ಮುಖ್ಯಸ್ಥರು ಹಾಗೂ ಅವರ ಕುಟುಂಬದವರು ಇರುವ ಜಾಗಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಬಿಜೆಪಿ ಸರ್ಕಾರವು ಪಶ್ಚಿಮ ಭಾಗದ ಜೊತೆ ಪೂರ್ವ ಭಾಗಕ್ಕೂ ಸಮಾನ ಆದ್ಯತೆ ನೀಡಿ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಪ್ರತಿಪಾದಿಸಿದರು.

***

ಆರು ಪಥಗಳ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯು ಉತ್ತರ ಪ್ರದೇಶದ ಪೂರ್ವಭಾಗದ ಜೀವನಾಡಿಯಾಗಲಿದೆ. ರಾಜ್ಯ ಹಾಗೂ ಈ ಭಾಗದ ಆರ್ಥಿಕ ಅಭಿವೃದ್ಧಿಗ ಕಾರಣವಾಗಲಿದೆ

-ನರೇಂದ್ರ ಮೋದಿ, ಪ್ರಧಾನಿ

***

ಹೆದ್ದಾರಿ ಉದ್ಘಾಟನೆಯ ರಿಬ್ಬನ್ ಲಖನೌದಿಂದ ಸರಬರಾಜಾಗಿದೆ. ಆದರೆ ಕತ್ತರಿಯು ದೆಹಲಿಯಿಂದ ಬಂದಿದೆ

-ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

ಆಡಳಿತ ಯಂತ್ರದ ದುರ್ಬಳಕೆ ವಿರೋಧ ಪಕ್ಷಗಳ ಆಕ್ಷೇಪ

ಲಖನೌ: ಸುಲ್ತಾನ್‌ಪುರ ಜಿಲ್ಲೆಯಲ್ಲಿ ‘ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ’ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಲು, ಜಿಲ್ಲಾಡಳಿತವೇ ಜನರಿಗೆ ನೂರಾರು ಬಸ್ಸುಗಳ ವ್ಯವಸ್ಥೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾಡಳಿತದ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳ ನಾಯಕರು, ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಸರ್ಕಾರಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.

ಪ್ರಧಾನಿ ಭಾಗಿಯಾದ ಈ ಕಾರ್ಯಕ್ರಮಕ್ಕೆ ಹಾಗೂ ಇದಕ್ಕಿಂತ ಮುನ್ನ ನಡೆದ ರ್‍ಯಾಲಿಗೆ ಸುಮಾರು 20 ಸಾವಿರ ಜನರನ್ನು ಕರೆತರಲು, ಜಿಲ್ಲೆಯ ಪ್ರತಿ ತಾಲ್ಲೂಕಿಗೂ ಉತ್ತರ ಪ್ರದೇಶದ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಜಿಲ್ಲಾಡಳಿತವು ಕಳುಹಿಸಿಕೊಟ್ಟಿತ್ತು. ಹೀಗೆ ಬಸ್ಸಿನಲ್ಲಿ ಬಂದವರಿಗೆ ಜಿಲ್ಲಾಡಳಿತದ ವತಿಯಿಂದಲೇ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸರ್ಕಾರವು ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹೇಳಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಲಾಕ್‌ಡೌನ್‌ ಅವಧಿಯಲ್ಲಿ, ಕೆಲಸ ಮಾಡುತ್ತಿದ್ದ ಸ್ಥಳದಿಂದ ತಮ್ಮೂರಿಗೆ ಹೊರಟು ನಿಂತ ಜನರಿಗೆ ಬಸ್ಸಿನ ವ್ಯವಸ್ಥೆ ಮಾಡಲು ಬಿಜೆಪಿ ಸರ್ಕಾರಕ್ಕೆ ಆಗಲಿಲ್ಲ. ಆದರೆ, ಪ್ರಧಾನಿ ಹಾಗೂ ಗೃಹಸಚಿವರು ಭಾಗಿಯಾದ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಸ್‌ ವ್ಯವಸ್ಥೆ ಮಾಡಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಸುಲ್ತಾನ್‌ಪುರದಲ್ಲಿ ಸಂಚರಿಸುತ್ತಿದ್ದ ನೂರಾರು ಬಸ್‌ಗಳನ್ನು ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ನಿಯೋಜಿಸಲಾಗಿತ್ತು. ಹಾಗಾಗಿ, ಸಾಮಾನ್ಯ ಜನರು ತಮಗೆ ಬೇಕಾದಲ್ಲಿಗೆ ಸಂಚರಿಸುವುದು ಕಷ್ಟವಾಯಿತು ಎಂಬ ಸ್ಥಳೀಯ ಮಾಧ್ಯಮಗಳ ವರದಿಯನ್ನೂ ಪ್ರಿಯಾಂಕಾ ಅವರು ಟ್ವಟಿರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಸ್‌ ವ್ಯವಸ್ಥೆ ಮಾಡಿದ ನಡೆಯನ್ನು ರಾಜ್ಯ ಸರ್ಕಾರದ ಈ ನಡೆಯನ್ನು ಟೀಕಿಸಿರುವ ಸಮಾಜವಾದಿ ಪಕ್ಷ, ‌‘ಬಿಜೆಪಿ ಸರ್ಕಾರದ ಕಾರ್ಯಕ್ರಮ ಮತ್ತು ರ್‍ಯಾಲಿಗಳಲ್ಲಿ ಜನರು ಭಾಗವಹಿಸುತ್ತಿಲ್ಲ; ಪ್ರಧಾನಿ ಮಾತನ್ನು ಕೇಳಲು ಯಾರೊಬ್ಬರೂ ಬಯಸುತ್ತಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ. ಹೀಗಾಗಿಯೇ ಸರ್ಕಾರ ಬಸ್ಸಿನ ಈ ವ್ಯವಸ್ಥೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT