ಶನಿವಾರ, ಅಕ್ಟೋಬರ್ 24, 2020
25 °C
3 ತಿಂಗಳ ಕಾಲ ರೇಟಿಂಗ್ ಸ್ಥಗಿತ

ನಕಲಿ ಟಿಆರ್‌ಪಿ ಆರೋಪ: ಟಿಆರ್‌ಪಿ ತಾತ್ಕಾಲಿಕ ಸ್ಥಗಿತ: ‘ಬಾರ್ಕ್’ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:  ಸುದ್ದಿವಾಹಿನಿಗಳ ವಾರದ ರೇಟಿಂಗ್‌ಗಳನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಗುರುವಾರ ನಿರ್ಧಾರ ಕೈಗೊಂಡಿದೆ.

ನಕಲಿ ಟಿಆರ್‌ಪಿ ಆರೋಪದ ಹಿನ್ನೆಲೆಯಲ್ಲಿ ‘ಬಾರ್ಕ್’ ಈ ನಿರ್ಧಾರ ಕೈಗೊಂಡಿದ್ದು, ಟಿಆರ್‌ಪಿ ರೇಟಿಂಗ್ ಸ್ಥಗಿತವು ಎಲ್ಲ ಹಿಂದಿ, ಇಂಗ್ಲಿಷ್, ವಾಣಿಜ್ಯ ಹಾಗೂ ಪ್ರಾದೇಶಿಕ ಸುದ್ದಿವಾಹಿನಿಗಳೂ ತಕ್ಷಣದಿಂದಲೇ ಅನ್ವಯಿಸಲಿದೆ.

‘ಸ್ಥಾಪಿತ ದತ್ತಾಂಶಗಳನ್ನು ಅಳೆಯುವ ಮತ್ತು ವರದಿಯ ಪ್ರಸ್ತುತ ಮಾನದಂಡಗಳನ್ನು ಪರಿಶೀಲಿಸಲು ಉದ್ದೇಶಿಸಲಾಗಿದೆ. ದತ್ತಾಂಶ ಸಂಗ್ರಹಿಸುವ ಮನೆಗಳಲ್ಲಿ ನಡೆಯುವ ಸಂಭಾವ್ಯ ಹಸ್ತಕ್ಷೇಪವನ್ನೂ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಮೂರು ತಿಂಗಳ ಕಾಲ (12 ವಾರಗಳು) ರೇಟಿಂಗ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ‘ಬಾರ್ಕ್’ ಹೇಳಿದೆ.

ಎನ್‌ಬಿಎ ಸ್ವಾಗತ: ‘ಬಾರ್ಕ್‌’ನ ನಿರ್ಧಾರವನ್ನು ದೇಶದ ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (ಎನ್‌ಬಿಎ) ಸ್ವಾಗತಿಸಿದೆ.

‘ರೇಟಿಂಗ್ ತಾತ್ಕಾಲಿಕ ಸ್ಥಗಿತದ ಅವಧಿಯನ್ನು ‘ಬಾರ್ಕ್’ ತನ್ನ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು, ಪ್ರಮುಖ ಸುಧಾರಣೆಗಳನ್ನು ಕಾರ್ಯಗತಗೊಳಿಸಲು ಬಳಸಿಕೊಳ್ಳಬೇಕು ಅಷ್ಟೇ ಅಲ್ಲ ವಿಶ್ವಾಸಾರ್ಹತೆಯನ್ನು ಪುನಃ ಸ್ಥಾಪಿಸುವ ಕ್ರಮದ ಬಗ್ಗೆ ಗಮನ ಹರಿಸಬೇಕು’ ಎಂದೂ ಎನ್‌ಬಿಎ ಹೇಳಿದೆ. 

‘ವಿಷಕಾರುವ, ನಿಂದನೆ ಮತ್ತು ನಕಲಿ ಸುದ್ದಿಗಳ ಪ್ರಸ್ತುತ ವಾತಾವರಣವು ಇನ್ನು ಮುಂದೆ ಸಮರ್ಥನೀಯವಲ್ಲ ಮತ್ತು ಈ ನಿಟ್ಟಿನಲ್ಲಿ ರೇಟಿಂಗ್‌ಗಳ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ‘ಬಾರ್ಕ್‌’ನ ದಿಟ್ಟ ಹೆಜ್ಜೆಯು ಸುಧಾರಣೆಗೆ ಸಹಾಯ ಮಾಡುವ ವಿಶ್ವಾಸವಿದೆ’ ಎಂದು ಎನ್‌ಬಿಎ ಅಧ್ಯಕ್ಷ ರಜತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ರಿಪಬ್ಲಿಕ್ ಟಿವಿ’ ಸೇರಿದಂತೆ ಮೂರು ಸುದ್ದಿವಾಹಿನಿಗಳ ವಿರುದ್ಧ ಟಿಆರ್‌ಪಿ ತಿರುಚುವಿಕೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಟಿಆರ್‌ಪಿ ತಿರುಚುವಿಕೆಗೆ ಸಂಬಂಧಿಸಿದಂತೆ ತನ್ನ ವಿರುದ್ಧದ ಆರೋಪವನ್ನು ರಿಪಬ್ಲಿಕ್ ಟಿವಿ ತಳ್ಳಿ ಹಾಕಿದೆ.

ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ‘ಸುಪ್ರೀಂ’ ಸೂಚನೆ

ನವದೆಹಲಿ: ಟಿಆರ್‌ಪಿ ತಿರುಚಿದ ಆರೋಪ ಕುರಿತ ವಿಚಾರಣೆಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮೊರೆ ಹೋಗುವಂತೆ ಸುಪ್ರೀಂಕೋರ್ಟ್ ಗುರುವಾರ ರಿಪಬ್ಲಿಕ್ ಮೀಡಿಯಾ ಗ್ರೂಪ್‌ಗೆ ಸೂಚಿಸಿದೆ.

‘ಕೋವಿಡ್‌–19ರ ಸಾಂಕ್ರಾಮಿಕ ಅವಧಿಯಲ್ಲಿ ಬಾಂಬೆ ಹೈಕೋರ್ಟ್‌ ಕಾರ್ಯನಿರ್ವಹಿಸುತ್ತಿದೆ. ರಿಪಬ್ಲಿಕ್ ಮೀಡಿಯಾ ಗ್ರೂಪ್‌ ಕಚೇರಿ ವರ್ಲಿ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಈ ಪ್ರಕರಣದ ವಿಚಾರಣೆಗೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದು ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಸೂಚಿಸಿದೆ.

ಮಾಧ್ಯಮದ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ’ಪೊಲೀಸ್ ಆಯುಕ್ತರು ಸಂದರ್ಶನಗಳನ್ನು ನೀಡುವಲ್ಲಿ ನಿರತರಾಗಿದ್ದು, ಪ್ರಕರಣದ ತನಿಖೆ ವಿಳಂಬವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್‌ ಮೀಡಿಯಾ ಗ್ರೂಪ್‌ಗೆ ನೋಟಿಸ್ ಜಾರಿ ಮಾಡಿ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಎಸ್. ಸುಂದರಂ ಅವರನ್ನು ತನಿಖೆಗೆ ಹಾಜರಾಗುವಂತೆ ತಿಳಿಸಿದ್ದರು. ರಿಪಬ್ಲಿಕ್ ಮೀಡಿಯಾ ನೆಟ್‌ವಕ್‌ನ ಮಾಲೀಕತ್ವ ಹೊಂದಿರುವ ಆರ್ಗ್‌ ಔಟ್‌ಲಿಯರ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಈ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು