ಬುಧವಾರ, ಡಿಸೆಂಬರ್ 8, 2021
25 °C
ಖಾರ್ಗರ್ ಮಾದಕವಸ್ತು ಪ್ರಕರಣದ ಸಾಕ್ಷಿಯ ಹೇಳಿಕೆ

ಸಾಕ್ಷಿಯಿಂದ ಖಾಲಿ ಪುಟಕ್ಕೆ ಸಹಿ ಮಾಡಿಸಿಕೊಂಡಿದ್ದರಂತೆ ಎನ್‌ಸಿಬಿ ಅಧಿಕಾರಿ ಸಮೀರ್!

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ‘ಇದೇ ಆಗಸ್ಟ್‌ನಲ್ಲಿ ಮುಂಬೈನ ಖಾರ್ಗಾರ್‌ನಲ್ಲಿ ಮಾದಕವಸ್ತು ಪ್ರಕರಣವೊಂದನ್ನು ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಬೇಧಿಸಿದ್ದರು. ಆ ಪ್ರಕರಣದಲ್ಲಿ ನನ್ನನ್ನು ಪ್ರಮುಖ ಸಾಕ್ಷಿಯನ್ನಾಗಿಸಿದ್ದರು. ಆಗ ಸಮೀರ್ ಅವರು, 10-12 ಖಾಲಿ ಪುಟಗಳಿಗೆ ನನ್ನ ಸಹಿ ಹಾಕಿಸಿಕೊಂಡಿದ್ದರು’ ಎಂದು ಶೇಖರ್ ಕಾಂಬ್ಲೆ ಎಂಬ ವ್ಯಕ್ತಿ ಆರೋಪಿಸಿದ್ದಾರೆ.

ನವಿ ಮುಂಬೈ ನಿವಾಸಿಯಾದ ಶೇಖರ್ ಅವರು, ಖಾರ್ಗರ್ ಮಾದಕವಸ್ತು ಪ್ರಕರಣದಲ್ಲಿ ಮೊದಲ ಸಾಕ್ಷಿಯಾಗಿದ್ದಾರೆ. 

‘ಖಾರ್ಗರ್‌ನಲ್ಲಿ ನೈಜೀರಿಯಾ ಪ್ರಜೆಗಳು ಡ್ರಗ್ಸ್‌ ಪಾರ್ಟಿ ನಡೆಸುತ್ತಿದ್ದಾರೆ ಎಂದು ಮಾಹಿತಿ ಇತ್ತು. ನಾನು ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿದಾರನಾಗಿ ಕೆಲಸ ಮಾಡಿದ್ದೆ. ನನ್ನನ್ನು ಹೊರತುಪಡಿಸಿ ಸಮೀರ್ ಮತ್ತು ಇನ್ನೂ ಐವರು ಅಧಿಕಾರಿಗಳು ಆ ಜಾಗದ ಮೇಲೆ ದಾಳಿ ನಡೆಸಿದ್ದೆವು. ಆದರೆ ಅಲ್ಲಿ ಇದ್ದವರು ತಪ್ಪಿಸಿಕೊಂಡರು. ನಂತರ ಮತ್ತೊಂದು ಜಾಗದ ಮೇಲೆ ದಾಳಿ ನಡೆಸಲಾಯಿತು’ ಎಂದು ಶೇಖರ್ ವಿವರಿಸಿದ್ದಾರೆ.

‘ಆ ಜಾಗದಲ್ಲಿ 50 ನೈಜೀರಿಯಾ ಪ್ರಜೆಗಳಿದ್ದರು. ಅವರಲ್ಲಿ ಇಬ್ಬರನ್ನು ಬಂಧಿಸಿ, ಎನ್‌ಸಿಬಿ ಕಚೇರಿಗೆ ಕರೆತರಲಾಯಿತು. ಆನಂತರ ಅವರಲ್ಲಿ ಒಬ್ಬರನ್ನು ಕಳುಹಿಸಲಾಯಿತು. ಇನ್ನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆತನ ಬಳಿ ಡ್ರಗ್ಸ್‌ ಇರಲಿಲ್ಲ. ಆದರೂ ಆತನ ಬಳಿ 5 ಗ್ರಾಂನಷ್ಟು ಮಾದಕವಸ್ತು ಇತ್ತು ಎಂದು ಪ್ರಕರಣ ದಾಖಲಿಸಲಾಯಿತು. ಸಮೀರ್ ಅವರು 10-12 ಖಾಲಿ ಪುಟಗಳಿಗೆ ನನ್ನ ಸಹಿ ಮಾಡಿಸಿಕೊಂಡರು. ಪಂಚಾನಾಮೆ ಬಗ್ಗೆ ನಾನು ಪ್ರಶ್ನಿಸಿದೆ. ಸಮೀರ್ ಅವರು ನಾನು ಆಮೇಲೆ ಬರೆದುಕೊಳ್ಳುತ್ತೇನೆ ಎಂದರು’ ಎಂದು ಶೇಖರ್ ಆರೋಪಿಸಿದ್ದಾರೆ.

‘ನಂತರ ಆ ಪ್ರಕರಣದಲ್ಲಿ ನನ್ನನ್ನು ಮೊದಲ ಸಾಕ್ಷಿಯನ್ನಾಗಿ ಮಾಡಲಾಯಿತು. ಈಗ ಸಚಿವ ನವಾಬ್ ಮಲಿಕ್ ಅವರು ಸಮೀರ್ ಅವರು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ ನಂತರ, ನನಗೂ ನನ್ನ ಪ್ರಕರಣ ನೆನಪಾಯಿತು. ಹೀಗಾಗಿ ಈ ಮಾಹಿತಿ ನೀಡಿದೆ’ ಎಂದು ಶೇಖರ್ ಹೇಳಿದ್ದಾರೆ.

 

‘ಧರ್ಮಕ್ಕೂ, ಕರ್ತವ್ಯಕ್ಕೂ ಸಂಬಂಧ ಹೇಗೆ?’

‘ಸಮೀರ್ ಮುಸ್ಲಿಂ. ಹೀಗಾಗಿಯೇ ಅವರ ನಿಖಾ (ಮದುವೆ) ಮಾಡಿಸಿದ್ದೆ’ ಎಂದು ಮುಂಬೈ ನಿವಾಸಿ ಮತ್ತು ಖಾಜಿ ಮೌಲಾನಾ ಮುಜಮ್ಮಿಲ್ ಅಹಮದ್ ಹೇಳಿರುವುದಕ್ಕೆ, ಸಮೀರ್ ಕುಟುಂಬವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಸಮೀರ್ ಮತ್ತು ಅವರ ಕುಟುಂಬದ ಎಲ್ಲರೂ ಮುಸ್ಲಿಮರು. ಅವರು ಮುಸ್ಲಿಮರಲ್ಲದೇ ಇದ್ದಿದ್ದರೆ, ನಾನು ನಿಖಾ ಮಾಡಿಸುತ್ತಿರಲೇ ಇಲ್ಲ. ಅವರ ಕುಟುಂಬದವರೆಲ್ಲರೂ, ನಿಖಾನಾಮಾಗೆ ಸಹಿ ಮಾಡಿದ್ದಾರೆ. ಅದರಲ್ಲಿ ವರನ ಹೆಸರನ್ನು ಸಮೀರ್ ದಾವೂದ್ ವಾಂಖೆಡೆ ಎಂದು ನಮೂದಿಸಲಾಗಿದೆ’ ಎಂದು ಖಾಜಿ ಹೇಳಿದ್ದರು.

‘ನಿಖಾನಾಮಾಗೆ ನಾವೆಲ್ಲರೂ ಸಹಿ ಮಾಡಿರುವುದು ನಿಜ. ಸಮೀರ್‌ನ ತಾಯಿಯ ಆಸೆಯಂತೆ ಮುಸ್ಲಿಂ ಸಂಪ್ರದಾಯದಂತೆಯೇ ಸಮೀರ್ ಮದುವೆಯಾಗಿದ್ದ. ಆದರೆ ಅವನು ಮತಾಂತರವಾಗಿರಲಿಲ್ಲ’ ಎಂದು ಸಮೀರ್ ಅವರ ತಂದೆ ದಯಾನ್‌ದೇವ್ ವಾಂಖೆಡೆ ಹೇಳದ್ದಾರೆ.

‘ನಾನು ಮುಸ್ಲಿಮನಲ್ಲ. ನಾನು ಹಿಂದೂ ಮತ್ತು ಮಹರ್ ಸಮುದಾಯಕ್ಕೆ ಸೇರಿದವನು. ಆದರೆ ನಮ್ಮ ಧರ್ಮ ಮತ್ತು ನನ್ನ ಮಗನ ಕರ್ತವ್ಯಕ್ಕೆ ಹೇಗೆ ಸಂಬಂಧವಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು