ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇಂದು ನೀಟ್‌

Last Updated 12 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು(ನೀಟ್‌) ಭಾನುವಾರ(ಸೆ.13) ನಡೆಯಲಿದ್ದು, 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕೋವಿಡ್‌–19 ಪಿಡುಗಿನ ಕಾರಣ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ ಬಾರಿಯ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಅಧಿಕಾರಿಗಳು ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ 3,843ಕ್ಕೆ ಏರಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳ ಬದಲಾಗಿ 12 ವಿದ್ಯಾರ್ಥಿಗಳಷ್ಟೇ ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಕೋವಿಡ್‌–19 ಕಾರಣದಿಂದಾಗಿ ಮೇ 3ರಂದು ನಡೆಯಬೇಕಿದ್ದ ಪರೀಕ್ಷೆಯು ಎರಡು ಬಾರಿ ಮುಂದೂಡಿಕೆಯಾಗಿತ್ತು. ಸೆ.13ರಂದು ನಿಗದಿಯಾಗಿದ್ದ ಪರೀಕ್ಷೆಯನ್ನೂ ಮುಂದೂಡಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ವಜಾಗೊಳಿಸಿತ್ತು.

ಒಟ್ಟು 15.97 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ.ಪರೀಕ್ಷಾ ಕೇಂದ್ರದ ಹೊರಗೆ, ಕೊಠಡಿಯ ಒಳಗೆ ಸ್ಯಾನಿಟೈಸರ್‌ ಲಭ್ಯತೆ, ಪ್ರವೇಶ ಪತ್ರಗಳ ಪರಿಶೀಲನೆಗೆ ಬಾರ್‌ಕೋಡ್‌ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೂ ಹೊಸ ಮುಖಗವಸುಗಳನ್ನು ನೀಡಲು ಎನ್‌ಟಿಎ ನಿರ್ಧರಿಸಿದೆ.

ವೈದ್ಯಕೀಯ ಕೋರ್ಸ್‌ ಆಕಾಂಕ್ಷಿ ಆತ್ಮಹತ್ಯೆ

ಮದುರೆ ವರದಿ: ವೈದ್ಯಕೀಯ ಕೋರ್ಸ್‌ ಆಕಾಂಕ್ಷಿ, 19 ವರ್ಷದ ವಿದ್ಯಾರ್ಥಿನಿ ಇಲ್ಲಿನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜ್ಯೋತಿಶ್ರೀ ದುರ್ಗಾ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ಬರೆದಿದ್ದು ಎನ್ನಲಾದ ಮರಣಪತ್ರ ಘಟನಾ ಸ್ಥಳದಲ್ಲಿ ಸಿಕ್ಕಿದೆ. ‘ಹೆತ್ತವರು ನನ್ನ ಮೇಲೆ ತುಂಬಾ ಭರವಸೆ ಇಟ್ಟಿದ್ದಾರೆ. ನನಗೆ ಭಯವಾಗುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಅರಿಯಾಳೂರ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿಯೊಬ್ಬ ನೀಟ್‌ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌‌, ‘ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. 2017ರಲ್ಲಿ ನೀಟ್‌ ಆಕಾಂಕ್ಷಿ ಅನಿತಾ, ಈಗ ಜ್ಯೋತಿಶ್ರೀ ದುರ್ಗಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್‌ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ನೀಟ್‌ ನಿಷೇಧಿಸಿ, ತಮಿಳುನಾಡಿನ ವಿದ್ಯಾರ್ಥಿಗಳನ್ನು ಉಳಿಸಿ’ ಎಂದೂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT