ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ನಿಂದನೆ ಅರ್ಜಿ ವಜಾಗೊಳಿಸುವಂತೆ ಮಲಿಕ್ ಮನವಿ

ಸಮೀರ್ ವಾಂಖೆಡೆ ವಿರುದ್ಧ ಸಾರ್ವಜನಿಕ ನಿಂದನೆ ಮಾಡಿಲ್ಲ: ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ
Last Updated 21 ಫೆಬ್ರುವರಿ 2022, 15:20 IST
ಅಕ್ಷರ ಗಾತ್ರ

ಮುಂಬೈ: ಎನ್‌ಸಿಬಿಯ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ವಾಂಖೆಡೆ ಅವರು ತಮ್ಮ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆಯ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿ ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸೋಮವಾರ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಧ್ಯಾನ್‌ದೇವ್ ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ಮಲಿಕ್‌ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ಬಾಂಬೆ ಹೈಕೋರ್ಟ್‌ಗೆ ಸೋಮವಾರ ಹಾಜರಾಗಿದ್ದ ಮಲಿಕ್, ತಮ್ಮ ವಿರುದ್ಧದ ನ್ಯಾಯಾಂಗದ ನಿಂದನೆಯ ಎಲ್ಲ ಆರೋಪಗಳನ್ನು ನಿರಾಕರಿಸಿ ಅಫಿಡವಿಟ್ ಸಲ್ಲಿಸಿದರು.

ಸಮೀರ್ ವಾಂಖೆಡೆ ಅವರ ವಿರುದ್ಧ ಮಾನಹಾನಿಕರ ಸಾರ್ವಜನಿಕ ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಮಾಡುವುದಿಲ್ಲ ಎಂದು ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ನೀಡಿರುವ ಭರವಸೆಗಳನ್ನು ಮಲಿಕ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಧ್ಯಾನ್‌ದೇವ್ ಅವರು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಎಸ್‌.ಜೆ. ಕಾಥಾವಾಲಾ ನೇತೃತ್ವದ ನ್ಯಾಯಪೀಠದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಲಿಕ್, ‘ನ್ಯಾಯಾಲಯದಲ್ಲಿ ಅಂತಹ ಭರವಸೆ ನೀಡುವಾಗ ನನ್ನ ಪರ ಹಾಜರಿದ್ದ ವಕೀಲರು ಕೇಂದ್ರ ಸರ್ಕಾರದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ನೀಡಲಾಗುವ ಸಾರ್ವಜನಿಕ ಹೇಳಿಕೆಗಳಿಗೆ ತಡೆಯೊಡ್ಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು’ ಎಂದು ಹೇಳಿದ್ದಾರೆ.

‘ಜ್ಞಾನದೇವ್ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಹೇಳಿಕೆಗಳು ಮತ್ತು ಟಿ.ವಿ ಸಂದರ್ಶನಗಳು ನನ್ನ ವಕೀಲರು ಉಲ್ಲಂಘಿಸಿದ ವಿನಾಯಿತಿಯ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗಾಗಿ, ನಾನು ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘಿಸಿಲ್ಲ’ ಎಂದೂ ಮಲಿಕ್ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಮಲಿಕ್ ಅವರ ಅಫಿಡವಿಟ್‌ಗೆ ಪ್ರತಿಕ್ರಿಯೆ ನೀಡಲು ಜ್ಞಾನದೇವ್ ಅವರ ವಕೀಲರಿಗೆ ಹೈಕೋರ್ಟ್ ಒಂದು ವಾರ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT