ಗುರುವಾರ , ಸೆಪ್ಟೆಂಬರ್ 23, 2021
27 °C

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ವಾಜೆ ವಿರುದ್ಧ ಎನ್ಐಎ ಚಾರ್ಜ್‌ಶೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಹಾಗೂ ಮನ್‍ಸುಖ್‍ ಹಿರೇನ್ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಚಾರ್ಜ್‌ಶೀಟ್‌ ಸಲ್ಲಿಸಿದೆ.

ಈ ಎರಡೂ ಪ್ರಕರಣಗಳಲ್ಲಿ ಸಚಿನ್‌ ವಾಜೆ ಪ್ರಮುಖ ಆರೋಪಿಯಾಗಿದ್ದಾರೆ.

ಸಚಿನ್ ವಾಜೆ ಮುಂಬೈನ ಪೊಲೀಸ್ ಅಧಿಕಾರಿ. ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಲ್ಲಿ ಆರೋಪ ಕೇಳಿಬಂದ ಕಾರಣ ಬಂಧನಕ್ಕೊಳಗಾಗಿದ್ದರು.

ವಾಜೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮಾ.13ರಂದು ವಶಕ್ಕೆ ಪಡೆದಿತ್ತು. ಅಲ್ಲಿಯವರೆಗೆ ವಾಜೆ ಅವರು ಮುಂಬೈ ನಗರ ಪೊಲೀಸ್ ಅಪರಾಧ ದಳದ ಅಪರಾಧ ಗುಪ್ತಚರ ಘಟಕದಲ್ಲೇ ಕಾರ್ಯನಿರ್ವಹಿಸುತ್ತಿದ್ದರು.

ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಬಳಿ ಫೆಬ್ರುವರಿ 24ರ ಮಧ್ಯರಾತ್ರಿ ಜಿಲೆಟಿನ್‌ ಕಡ್ಡಿಗಳನ್ನು ತುಂಬಿದ್ದ ಎಸ್‌ಯುವಿಯನ್ನು ನಿಲ್ಲಿಸಲಾಗಿತ್ತು. ಸುಮಾರು 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರ ಅದರಲ್ಲಿ ಪತ್ತೆಯಾಗಿತ್ತು.

ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ ಎಸ್‌ಯುವಿ ಮನ್‍ಸುಖ್‍ ಹಿರೇನ್ ಅವರಿಗೆ ಸೇರಿದೆ ಎಂದು ಪೊಲೀಸರು ಖಚಿತಪಡಿಸಿದ್ದರು. ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರಿಗೆ ಮನ್‌ಸುಖ್‌ ಹಿರೇನ್‌ ಆಪ್ತರಾಗಿದ್ದರೆಂದು ತಿಳಿದುಬಂದಿತ್ತು.

ಪುಣೆಯಲ್ಲಿ ಕಾರು ಬಿಡಿಭಾಗಗಳ ಮಾರಾಟದ ವ್ಯವಹಾರ ನಡೆಸುತ್ತಿದ್ದ ಮನ್‍ಸುಖ್‍ ಹಿರೇನ್ (48) ಮಾರ್ಚ್‌ 4ರಿಂದ ನಾಪತ್ತೆಯಾಗಿದ್ದರು. ಅವರ ಶವವು ನಂತರ ಶಂಕಾಸ್ಪದ ರೀತಿಯಲ್ಲಿ ಠಾಣೆಯ ಮುಂಬೈ-ಕಾಲ್ವಾದಲ್ಲಿ ರೇಟಿ ಬಂದರ್ ಸಮೀಪ ಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು