ಬುಧವಾರ, ಮೇ 25, 2022
27 °C
ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಪತ್ರ: ಪ್ರಕರಣ ಹೆಚ್ಚಿದ್ದರೆ ಎಚ್ಚರ ವಹಿಸಲು ಸೂಚನೆ

ಕೋವಿಡ್‌ ದೃಢ ಪ್ರಮಾಣ ಶೇ 10ಕ್ಕಿಂತ ಹೆಚ್ಚಿದ್ದರೆ ರಾತ್ರಿ ಕರ್ಫ್ಯೂ: ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 10ಕ್ಕಿಂತ ಹೆಚ್ಚು ಇರುವ ಪ್ರದೇಶಗಳಲ್ಲಿ ಮತ್ತು ಆಮ್ಲಜನಕಸಹಿತ ಹಾಸಿಗೆಗಳಿಗೆ ಹೆಚ್ಚು ಬೇಡಿಕೆ ಇರುವಲ್ಲಿ ರಾತ್ರಿ ಕರ್ಫ‍್ಯೂ, ಹೆಚ್ಚು ಜನ ಸೇರುವುದಕ್ಕೆ ನಿಷೇಧದಂತಹ ಕ್ರಮಗಳನ್ನು ಕೈಗೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರವು ಸೂಚಿಸಿದೆ. 

ಸದ್ಯಕ್ಕೆ ದೇಶದಲ್ಲಿ ಇಂತಹ ಜಿಲ್ಲೆಗಳು ಎಂಟು ಮಾತ್ರ ಇವೆ. ಕೋವಿಡ್‌ ದೃಢಪಡುವಿಕೆ ದರವು ಶೇ 5 ಮತ್ತು ಶೇ 10ರ ನಡುವೆ ಇರುವ 19 ಜಿಲ್ಲೆಗಳಲ್ಲಿಯೂ ಹೆಚ್ಚಿನ ನಿಗಾ ಅಗತ್ಯ. ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯದ ಓಮೈಕ್ರಾನ್‌ ರೂಪಾಂತರ ತಳಿಯು ಸುಮಾರು 60 ದೇಶಗಳಿಗೆ ಹರಡಿದೆ. ಹಾಗಾಗಿ ಕೋವಿಡ್‌ನ ಹೆಚ್ಚು ಪ್ರಕರಣಗಳು ಪತ್ತೆಯಾದ 70 ಕ್ಲಸ್ಟರ್‌ಗಳಲ್ಲಿಯೂ ಹೆಚ್ಚು ಗಮನ ಇರಿಸಬೇಕು ಎಂದು ಕೇಂದ್ರವು ಹೇಳಿದೆ. 2022ರ ಜನವರಿ–ಫೆಬ್ರುವರಿ ಹೊತ್ತಿಗೆ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಳವಾಗಬಹುದು ಎಂದು ತಜ್ಞರುಅಂದಾಜಿಸಿದ್ದಾರೆ. 

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 

ಚಳಿಗಾಲ ಆರಂಭವಾಗಿದೆ. ಹಾಗಾಗಿ, ಉಸಿರಾಟಕ್ಕೆ ಸಂಬಂಧಿಸಿದ ರೋಗಗಳು ಮತ್ತು ಜ್ವರದಂತಹ ರೋಗಗಳ ಬಗ್ಗೆ ಹೆಚ್ಚಿನ ನಿಗಾ ಇರಿಸುವಂತೆಯೂ ಸೂಚಿಸಲಾಗಿದೆ. 

ಕೋವಿಡ್‌ ಪ್ರಕರಣಗಳು ಹೆಚ್ಚು ಇರುವ 70 ಕ್ಲಸ್ಟರ್‌ಗಳು ಯಾವುವು ಎಂಬುದನ್ನು ಕೇಂದ್ರವು ಹೇಳಿಲ್ಲ. ಆದರೆ, ನವೆಂಬರ್‌ನ ಕೊನೆಯ ಎರಡು ವಾರಗಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾದ ಆರು ರಾಜ್ಯಗಳ 30 ಜಿಲ್ಲೆಗಳಲ್ಲಿಯೇ ಹೆಚ್ಚಿನ ಕ್ಲಸ್ಟರ್‌ಗಳು ಇವೆ. ಜಮ್ಮು ಕಾಶ್ಮೀರದ ಕಠುವಾ, ಒಡಿಶಾದ ಧೆನ್‌ಕನಲ್‌ ಮತ್ತು ಕಂಧಮಾಲ್‌ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರಕರಣಗಳು ತೀವ್ರವಾಗಿ ಹೆಚ್ಚಿದ್ದವು. ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಹೆಚ್ಚಿನ ನಿಗಾ ಅಗತ್ಯ ಎಂದು ಕೇಂದ್ರ ಹೇಳಿದೆ.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು