ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರಿನ ಇಂಧನದಿಂದ ಓಡುವ ಕಾರಿನಲ್ಲಿ ಸಂಸತ್ತಿಗೆ ಬಂದ ಗಡ್ಕರಿ!

Last Updated 30 ಮಾರ್ಚ್ 2022, 10:15 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ಹೊಸ ಆಶಾಕಿರಣ ಎಂದೇ ಹೇಳಲಾಗುತ್ತಿರುವ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಸಂಸತ್ ಭವನಕ್ಕೆ ಆಗಮಿಸಿದ್ದಾರೆ.

ಪ್ರಾಯೋಗಿಕ ಯೋಜನೆಯ ಭಾಗವಾಗಿ ಗಡ್ಕರಿ ತಮ್ಮ ಮನೆಯಿಂದ ಸಂಸತ್ ಭವನಕ್ಕೆ ಹೈಡ್ರೋಜನ್ ಚಾಲಿತ ಕಾರನ್ನು ಓಡಿಸಿಕೊಂಡು ಬಂದಿದ್ದಾರೆ.

ಈ ಕಾರಿನ ಹೆಸರು ‘ಮಿರೈ’, ಜಪಾನ್ ಭಾಷೆಯಲ್ಲಿ 'ಮಿರೈ' ಪದದ ಅರ್ಥ 'ಭವಿಷ್ಯ' ಎಂಬುದಾಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಸಂಶೋಧಿಸಲಾಗಿದ್ದು, ಕೊಳಚೆ ನೀರಿನಿಂದ ಉತ್ಪಾದಿಸುವ ಗ್ರೀನ್ ಹೈಡ್ರೋಜನ್ ಬಳಸಿ ಓಡಿಸಬಹುದಾಗಿದೆ.

‘ಆತ್ಮನಿರ್ಭರತೆಯನ್ನು ಸಾಧಿಸುವ ದೃಷ್ಟಿಯಿಂದ ಕೊಳಚೆ ನೀರಿನಿಂದ ತಯಾರಿಸಬಹುದಾದ ಗ್ರೀನ್ ಹೈಡ್ರೋಜನ್ ಪರಿಚಯಿಸುತ್ತಿದ್ದೇವೆ. ಪೈಲಟ್ ಯೋಜನೆಯ ಭಾಗವಾಗಿ ಈ ಕಾರನ್ನು ಓಡಿಸುತ್ತಿದ್ದೇನೆ. ದೇಶದಲ್ಲಿ ಈಗ ಗ್ರೀನ್ ಹೈಡ್ರೋಜನ್ ಉತ್ಪಾದನೆ ಆರಂಭವಾಗುತ್ತಿದೆ. ಇದರಿಂದಾಗಿ ಇಂಧನ ಆಮದು ತಗ್ಗಲಿದ್ದು, ಹೊಸ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ’ಎಂದು ಗಡ್ಕರಿ ಹೇಳಿದ್ದಾರೆ.

ಭಾರತವು ಇಂಧನ ವಿಷಯದಲ್ಲಿ ಸ್ವಾವಲಂಬಿಯಾಗಬೇಕು ಎಂದು ಹೇಳಿದ ಅವರು, ‘ಭಾರತ ಸರ್ಕಾರವು ₹ 3,000 ಕೋಟಿ ವೆಚ್ಚದಲ್ಲಿ ಹೈಡ್ರೋಜನ್ ಇಂಧನದ ಮಿಷನ್ ಅನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ನಮ್ಮದು ಹೈಡ್ರೋಜನ್ ರಫ್ತು ಮಾಡುವ ದೇಶವಾಗುತ್ತದೆ.. ದೇಶದಲ್ಲಿ ಕಲ್ಲಿದ್ದಲು ಎಲ್ಲೆಲ್ಲಿ ಬಳಕೆಯಾಗುತ್ತಿದೆಯೋ ಅಲ್ಲೆಲ್ಲ ಗ್ರೀನ್ ಹೈಡ್ರೋಜನ್ ಬಳಸಲಾಗುವುದು’ ಎಂದು ಗಡ್ಕರಿ ಹೇಳಿದರು.

ಮಾರ್ಚ್ 16ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತದ ಮೊದಲ ಹಸಿರು ಹೈಡ್ರೋಜನ್ ಆಧಾರಿತ ಸುಧಾರಿತ ಇಂಧನ ಕೋಶದ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ‘ಟೊಯೊಟಾ ಮಿರೈ’ಅನ್ನು ಬಿಡುಗಡೆ ಮಾಡಿದ್ದರು.

ಟೊಯೊಟಾ ಮಿರೈ ವಾಹನವು ಹೈಡ್ರೋಜನ್ ಫ್ಯುಯಲ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 650 ಕಿಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT